ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕೊಡ ಹಿಡಿದು ಪ್ರತಿಭಟನೆ

ಯಲಹಂಕದ ಹಲವು ಬಡಾವಣೆಗಳಲ್ಲಿ ನೀರಿಗೆ ಹಾಹಾಕಾರ
Last Updated 29 ಮೇ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಹಲವು ಬಡಾವಣೆಗಳ ದಲಿತ ಕುಟುಂಬಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂದು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ (ಸಮತಾವಾದ) ನೇತೃತ್ವದಲ್ಲಿ ಸ್ಥಳೀಯರು ಜಲಮಂಡಳಿಯ ಯಲಹಂಕ ಉತ್ತರ ವಿಭಾಗದ ಕಚೇರಿ ಎದುರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ನಗರದಿಂದ ಖಾಲಿ ಕೊಡಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮಹಿಳೆಯರು, ಚಿಕ್ಕಬೊಮ್ಮಸಂದ್ರ ಕ್ರಾಸ್, ಶೇಷಾದ್ರಿಪುರ ಕಾಲೇಜು ರಸ್ತೆ, ಎನ್ಇಎಸ್ ವೃತ್ತ ಹಾಗೂ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಮೂಲಕ ಜಲಮಂಡಳಿ ಕಚೇರಿ ತಲುಪಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿಯ ಅಧ್ಯಕ್ಷ ಎಚ್.ಮಾರಪ್ಪ, ‘ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯ ಅಂಬೇಡ್ಕರ್ ನಗರ, ಕೊಂಡಪ್ಪ ಬಡಾವಣೆ, ಕೋಗಿಲು ಬಡಾವಣೆ, ಫಕೀರ್ ಲೇಔಟ್, ಜೈಭೀಮ್ ನಗರ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರಗಳಲ್ಲಿ ಪರಿಶಿಷ್ಟಜಾತಿ-ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕೊಳವೆಬಾವಿಗಳಿದ್ದರೂ ನೀರು ಸಾಕಾಗುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕೊಳವೆ ಬಾವಿಗಳು ಕೆಟ್ಟು ಹಲವು ತಿಂಗಳುಗಳು ಕಳೆದರೂ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ’ ಎಂದರು.

‘ಅಧಿಕಾರಿಗಳು 3 ದಿನಗಳ ಒಳಗಾಗಿ ಕಾಲೊನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಯನ್ನು
ಬಗೆಹರಿಸದಿದ್ದರೆ ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ನಡೆಸಲಾಗುತ್ತದೆ. ಇಲ್ಲಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಕೂಲಿ ಹಾಗೂ ಮನೆಗೆಲಸಗಳನ್ನು
ಬಿಟ್ಟು ನೀರಿಗಾಗಿ ಕಾಯಬೇಕಾಗಿದೆ. ಒಂದು ಕೊಡ ನೀರಿಗೆ ಒಂದು ರೂಪಾಯಿ ನೀಡಿ ಖರೀದಿ ಮಾಡಬೇಕಾಗಿದೆ ಎಂದು ಕೋಗಿಲು ಲೇಔಟ್ ನಿವಾಸಿ ಫಾತಿಮಾ ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಜೈಶಂಕರ್, ‘ಅಂಬೇಡ್ಕರ್‌ ನಗರಕ್ಕೆ ಕಾವೇರಿ ನೀರು ಕೊಳವೆಮಾರ್ಗ ಅಳವಡಿಸಲು ₹16 ಲಕ್ಷ ಬಿಡುಗಡೆಯಾಗಿದ್ದು, ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಲಾಗುವುದು. ಕೊಂಡಪ್ಪ ಬಡಾವಣೆಯ ಮಾರಮ್ಮ ಬಂಡೆ ಜಾಗದಲ್ಲಿ ಸಮೀಕ್ಷೆ ನಡೆಸಿ, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT