ಸೋಮವಾರ, ಡಿಸೆಂಬರ್ 9, 2019
24 °C

ಭತ್ಯೆಗಾಗಿ ಚಾಲಕರ ಅಹೋರಾತ್ರಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭತ್ಯೆಗಾಗಿ ಚಾಲಕರ ಅಹೋರಾತ್ರಿ ಧರಣಿ

ಬೆಂಗಳೂರು: ‘ಚುನಾವಣಾ ಕೆಲಸಗಳಿಗೆ ನಿಯೋಜನೆಗೊಂಡಿದ್ದ ನಮಗೆ ಭತ್ಯೆ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ ಸರ್ಕಾರಿ ವಾಹನಗಳ ಚಾಲಕರು ರಾಜರಾಜೇಶ್ವರಿ ನಗರ ಬಿಬಿಎಂಪಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯ ಹಾಗೂ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಎನ್. ವೇಣುಗೋಪಾಲ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ಧರಣಿ ಆರಂಭಿಸಿರುವ 121 ಚಾಲಕರು, ‘ಚುನಾವಣಾ ಆಯೋಗದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿರುವ 58 ದಿನಗಳ ಭತ್ಯೆ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಬುಧವಾರ ಬೆಳಿಗ್ಗೆಯಿಂದ ನಮ್ಮ ಕುಟುಂಬ ಸದಸ್ಯರೂ ಬಂದು ಕಚೇರಿ ಮುಂದೆ ಕೂರುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ನಾವು ಹಗಲು–ರಾತ್ರಿ ಎನ್ನದೆ ಕೆಲಸ ಮಾಡಿದ್ದೇವೆ. ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡಿದ್ದ ಎಲ್ಲ ವಿಭಾಗದ ನೌಕರರಿಗೂ ಈಗಾಗಲೇ ಹಣ ಪಾವತಿಯಾಗಿದೆ. ಆದರೆ, ಚಾಲಕ ವರ್ಗಕ್ಕೆ ಮಾತ್ರ ಅನ್ಯಾಯ ಮಾಡಲಾಗಿದೆ. ಎರಡು ತಿಂಗಳಿನಿಂದ ವೇತನವಿಲ್ಲದೆ, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಚಾಲಕ ಭೀಮಾರಾವ್ ಅಳಲು ತೋಡಿಕೊಂಡರು.

‘ದಿನದ ಭತ್ಯೆ ₹ 250 ಕೊಡುವುದಾಗಿ ಮಾತುಕತೆ ಆಗಿತ್ತು. ಚುನಾವಣೆ ಮುಗಿದ ನಂತರ ಕೇವಲ ಒಂದು ತಿಂಗಳ ಭತ್ಯೆ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಮೂಲಕ ಉಳಿದ 28 ದಿನಗಳ ಭತ್ಯೆಯನ್ನು ತಮ್ಮ ಜೇಬಿಗೆ ಹಾಕಿಕೊಳ್ಳಲು ಸಂಚು ರೂಪಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದು, ತಾವು ಹೊಟ್ಟೆ ತುಂಬಿಸಿಕೊಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ವೇಣುಗೋಪಾಲ್ ಮಾತನಾಡಿ, ‘ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಕೇಳಲು ಬಂದಿಲ್ಲ. ಹೀಗಾಗಿ, ಅಹೋರಾತ್ರಿ ಧರಣಿ ಮುಂದುವರಿಸಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)