ಸೋಮವಾರ, ಡಿಸೆಂಬರ್ 9, 2019
25 °C

ಪರಿಸರ ಸ್ನೇಹಿ ಕ್ರಮಗಳ ವಿಸ್ತರಣೆಗೆ ಕೆಎಸ್‌ಸಿಎ ಚಿಂತನೆ

Published:
Updated:
ಪರಿಸರ ಸ್ನೇಹಿ ಕ್ರಮಗಳ ವಿಸ್ತರಣೆಗೆ ಕೆಎಸ್‌ಸಿಎ ಚಿಂತನೆ

ಬೆಂಗಳೂರು: ರಾಜ್ಯದಲ್ಲಿರುವ ಕ್ರಿಕೆಟ್ ಮೈದಾನಗಳಲ್ಲಿಯೂ ಮಳೆ ನೀರು ಸಂಗ್ರಹ ಘಟಕಗಳನ್ನು ಆರಂಭಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚಿಂತನೆ ನಡೆಸಿದೆ.

ಮಂಗಳವಾರ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಆರಂಭವಾದ ‘ಗ್ರೀನ್ ವಿಕೆಟ್’ ಕಾರ್ಯಾಗಾರದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಿತು.

‘ಇಲ್ಲಿ ಅಭಿವೃದ್ಧಿಪಡಿಸಿರುವ ಪರಿಸರಸ್ನೇಹಿ ಮಾದರಿಯನ್ನು ಬೇರೆ ಕ್ರೀಡಾ ಸಂಸ್ಥೆಗಳೂ ಅನುಸರಿಸುವಂತಾಗಬೇಕು. ಅದಕ್ಕಾಗಿ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಗಳು ತಮ್ಮ ಸುಪರ್ದಿಯಲ್ಲಿರುವ ಕ್ರೀಡಾಂಗಣಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವ ಅವಕಾಶ ಇದೆ. ನಮ್ಮ ಸಂಸ್ಥೆಯು ಬೇರೆ ಊರುಗಳಲ್ಲಿ ನಿರ್ವಹಿಸುತ್ತಿರುವ ಮೈದಾನಗಳಲ್ಲಿಯೂ ಮಳೆ ನೀರು ಸಂಗ್ರಹ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ‘ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರವಿದ್ಯುತ್ ಘಟಕ, ಮಳೆ ನೀರು ಸಂಗ್ರಹ ಮತ್ತು ತ್ಯಾಜ್ಯ ನಿರ್ವಹಣಾ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.  ಈ ಮಾದರಿಗಳನ್ನು ಬೇರೆ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳಲ್ಲಿಯೂ ಅನುಷ್ಠಾನಗೊಳಿಸಲು ಬಿಸಿಸಿಐ ಒಲವು ತೋರಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಮತ್ತು ಜರ್ಮನ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಕೋ ಆಪರೇಷನ್ ಅ್ಯಂಡ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ವೇಸ್ಟ್‌ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಒಟ್ಟು 40 ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಪ್ರತಿಕ್ರಿಯಿಸಿ (+)