ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭಕ್ಕೆ ‘ಅಕ್ಷರ ಬಂಡಿ’ ಮೆರುಗು

Last Updated 30 ಮೇ 2018, 8:21 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮಾಸ್ತಮರಡಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ಮಂಗಳವಾರ ಸಂಭ್ರಮದಿಂದ ನಡೆಯಿತು. ಇದರೊಂದಿಗೆ, 2018–19ನೇ ಸಾಲಿನ ಶೈಕ್ಷಣಿಕ ವರ್ಷವನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ಹೊಸದಾಗಿ ಪ್ರವೇಶ ಪಡೆದವರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯಲ್ಲಿ ಕರೆತರುವ ಅಕ್ಷರ ಬಂಡಿ ಕಾರ್ಯಕ್ರಮ ನಡೆಯಿತು. ಶಾಲೆಗೆ ದಾಖಲಾತಿ ಹೊಂದದಿರುವ ಅಥವಾ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಆಯೋಜಿಸಿದ್ದ ಅಕ್ಷರ ಜಾತ್ರೆ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಾಲನೆ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್, ವಿದ್ಯಾರ್ಥಿಯು ಮುಂದಿನ ತರಗತಿಗೆ ಹೋಗುವಾಗ ಪುಸ್ತಕಗಳನ್ನು ಹೊಸ ವಿದ್ಯಾರ್ಥಿಗೆ ನೀಡುವ ‘ನನ್ನ ಪುಸ್ತಕ ನಿನ್ನ ಕೈಗೆ’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಪುಸ್ತಕಗಳ ಕೊರತೆ ಇದ್ದಾಗ ಹಳೆಯ ಈ ಪುಸ್ತಕಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

‘ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ದೊಡ್ಡ ಗುರಿ ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ಸೌಜನ್ಯ ಹಾಗೂ ಸ್ವಯಂ ನಿಯಂತ್ರಣ ಅಗತ್ಯ. ಹಿರಿಯರನ್ನು ಗೌರವವಿಂದ ಕಾಣಬೇಕು. ಕಡಿಮೆ ಪರಿಶ್ರಮದಿಂದ ಹೆಚ್ಚಿನ ಲಾಭ ಪಡೆಯಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆಯಲೇಬೇಕು. ಸಮಾಜ, ಕುಟುಂಬ ಹಾಗೂ ಕಲಿಸಿದವರಿಗೆ ಹೆಸರು ತರಲು ಸದಾ ನೈತಿಕ ಮಾರ್ಗದಲ್ಲಿ ನಡೆಯಬೇಕು’ ಎಂದು ತಿಳಿಸಿದರು.

ಬಿಇಒ ಲೀಲಾವತಿ ಹಿರೇಮಠ, ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಬಸವರಾಜ ಮಿಲ್ಲಾನಟ್ಟಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಮುಖ್ಯಶಿಕ್ಷಕರಾದ ಎಂ.ಎಸ್. ಮೇದಾರ, ಜಗದೀಶ ಪೂಜಾರ ಇದ್ದರು.

ಮಕ್ಕಳ ಮೆರವಣಿಗೆ

ಸುಳೇಭಾವಿ: ಬೆಳಗಾವಿ ತಾಲ್ಲೂಕಿನ ಸುಳೇಭಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ ಮೂಲಕ ಅಕ್ಷರ ಜಾತ್ರೆ ಆಚರಿಸಲಾಯಿತು.

1ನೇ ತರಗತಿಗೆ ದಾಖಲಾದ ಮಕ್ಕಳನ್ನು ಮೆರೆವಣಿಗೆಯಲ್ಲಿ ಕರೆತರಲಾಯಿತು. ಪಠ್ಯಪುಸ್ತಕ ವಿತರಿಸಿ, ಬಿಸಿಯೂಟದಲ್ಲಿ ಸಿಹಿ ಹಂಚಲಾಯಿತು.

ಶ್ರವಣದೋಷವುಳ್ಳವರ ಶಾಲೆ: ಅಜಂ ನಗರದಲ್ಲಿರುವ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಡಿಡಿಪಿಐ ಕಚೇರಿ ಸಹಾಯಕ ಕಾರ್ಯಕ್ರಮ ಸಮನ್ವಯಾಧಿಕಾರಿ ಸುನಂದಾ ಸವದತ್ತಿ ಹಾಗೂ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿ ನೀಲಮ್ಮಾ ಮೇಳವಂಕಿ ಚಾಲನೆ ನೀಡಿ, ಮಕ್ಕಳಿಗೆ ಸಿಹಿ ಹಂಚಿದರು. ನಂತರ ಜಾಥಾ ನಡೆಯಿತು. ಮಕ್ಕಳು ಭಿತ್ತಿಪತ್ರಗಳನ್ನು ಹಿಡಿದು ಭಾಗವಹಿಸಿದ್ದರು.

ಶಾಲೆಯ ಅಧೀಕ್ಷಕ ಆರ್.ಬಿ. ಬನಶಂಕರಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT