ಕಳೆಯಿತು ಆ ಬೇಸಿಗೆ; ಹೋಗೋಣ ಶಾಲೆಗೆ...

7
ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭದ ಮೊದಲ ದಿನದ ಸಂಭ್ರಮ; ಮಕ್ಕಳಿಗೆ ಶಿಕ್ಷಕರಿಂದ ಅದ್ಧೂರಿ ಸ್ವಾಗತ

ಕಳೆಯಿತು ಆ ಬೇಸಿಗೆ; ಹೋಗೋಣ ಶಾಲೆಗೆ...

Published:
Updated:
ಕಳೆಯಿತು ಆ ಬೇಸಿಗೆ; ಹೋಗೋಣ ಶಾಲೆಗೆ...

ಹುಬ್ಬಳ್ಳಿ: ಬೇಸಿಗೆ ರಜೆ ಮುಗಿಸಿದ ಮಕ್ಕಳ ಮೊಗದಲ್ಲಿ ಸಂತಸದ ಅಲೆ ತೇಲಿ ಬರುತ್ತಿತ್ತು. ರಜೆ ದಿನಗಳಲ್ಲಿ ದೂರವಾಗಿದ್ದ ಸ್ನೇಹಿತರ ಭೇಟಿ ವಿದ್ಯಾರ್ಥಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಶಾಲೆ ಪ್ರಾರಂಭವಾದ ಖುಷಿ ವಿದ್ಯಾರ್ಥಿಗಳದ್ದಾದರೆ, ರಜೆ ಮುಗಿಸಿ ಬಂದ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸುವ ತವಕದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

ಶಾಲೆ ಆರಂಭದ ಹಿಂದಿನ ದಿನವೇ ಸಿಬ್ಬಂದಿ, ಶಾಲೆಗೆ ಬಂದು ಆವರಣವನ್ನು ಸ್ವಚ್ಛಗೊಳಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಕೆಲವೆಡೆ ಶಾಲೆಗಳನ್ನು ತೋರಣಗಳಿಂದ ಸಿಂಗರಿಸಲಾಗಿತ್ತು. ಸಿಬ್ಬಂದಿಯ ಈ ಕಾರ್ಯಕ್ಕೆ ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಸಹ ಕೈ ಜೋಡಿಸಿದ್ದರು.

ಸಿಹಿ ವಿತರಣೆ: ವಿಶ್ವೇಶ್ವರನಗರದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ, ಶಾಲಾ ಸಿಬ್ಬಂದಿ ಮತ್ತು ಎಸ್‌ಡಿಎಂಸಿ ಸದಸ್ಯರು ಸ್ವಾಗತಿಸಿದರು. ಬಳಿಕ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ವಿಶೇಷ ದಾಖಲಾತಿ ಹಾಜರಾತಿ ಆಂದೋಲನ ಹಾಗೂ ಶಾಲೆಯಲ್ಲಿರುವ ಸೌಲಭ್ಯಗಳ ವಿವರಗಳನ್ನೊಳಗೊಂಡ ಬ್ಯಾನರ್‌ನೊಂದಿಗೆ ಸುತ್ತಮುತ್ತಲಿನ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಮುಖ್ಯ ಶಿಕ್ಷಕ ಸಿ.ಜಿ. ಅರಕೇರಿ, ಶಿಕ್ಷಕಿಯರಾದ ಎಸ್‌.ವಿ. ಕುಲಕರ್ಣಿ ಹಾಗೂ ವಿ.ಸಿ. ಕುಲಕರ್ಣಿ ಇದ್ದರು.

ವಿದ್ಯಾನಗರದಲ್ಲಿರುವ ಶ್ರೀ ವಿಘ್ನೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ವಿತರಿಸಿ ಸ್ವಾಗತಿಸಲಾಯಿತು. ಬಳಿಕ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

‘ಅಕ್ಷರ ಬಂಡಿ’ಗೆ ಚಾಲನೆ: ಕೆಎಸ್‌ಆರ್‌ಟಿಸಿ ಮಯೂರಿ ಗಾರ್ಡನ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಕೆಎಸ್‌ಆರ್‌ಟಿಸಿ) ಮಕ್ಕಳ ದಾಖಲಾತಿ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ಅಕ್ಷರ ಮಾಲೆಯ ’ಅಕ್ಷರ ಬಂಡಿ’ ಯಾತ್ರೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ಈ ಬಂಡಿ, ಶಾಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥ ನಾಯ್ಕೋಡಿ, ಶಾಲಾ ಸಿಬ್ಬಂದಿ ಸಿ.ಎನ್. ಕರನಂದಿ, ಸಿ.ಬಿ. ಗಿರಿಜಾಕುಮಾರಿ, ಎಲ್‌.ಒ. ಬೆಣಗಿ, ಜಿ. ಮಾರ್ಥಮ್ಮಾ, ಎಂ.ಬಿ. ಸತ್ತಿಗೇರಿ, ಎಂ.ಸಿ. ಕ್ಷತ್ರಿಯವರ, ಪಿ.ಎಚ್. ದಾಸರ ಹಾಗೂ ಆರ್‌.ಎಚ್‌. ಕೆಳಗೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry