ಬತ್ತಿದ ಕೆರೆಗಳಿಗೆ ಬಂತು ಜೀವ ಕಳೆ

7
l ಬರಿದಾಗಿದ್ದ ಕೆರೆಗಳಿಗೆ ಹರಿದು ಬಂದ ಮಳೆ ನೀರು l ರೈತರ ಮೊಗದಲ್ಲಿ ಸಂತಸ l ಕೃಷಿ ಚಟುವಟಿಕೆಗೆ ಪೂರಕ

ಬತ್ತಿದ ಕೆರೆಗಳಿಗೆ ಬಂತು ಜೀವ ಕಳೆ

Published:
Updated:
ಬತ್ತಿದ ಕೆರೆಗಳಿಗೆ ಬಂತು ಜೀವ ಕಳೆ

ಹುಬ್ಬಳ್ಳಿ: ಬಿರು ಬೇಸಿಗೆಯಿಂದಾಗಿ ಬರಿದಾಗಿದ್ದ ನಗರದ ಸುತ್ತಮುತ್ತಲಿನ ಕೆರೆಗಳಿಗೆ, ಕೆಲ ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಜೀವ ಕಳೆ ಬಂದಿದೆ. ಬಿರುಕು ಬಿಟ್ಟಿದ್ದ ಕೆರೆಯೊಡಲನ್ನು ಮಳೆ ನೀರು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಬಿಸಿಲಿಗೆ ಒಣಗಿ ಹೋಗಿದ್ದ ಕೆರೆ ತಟದ ಹುಲ್ಲು, ಹಸಿರು ಹೊದ್ದುಕೊಳ್ಳುತ್ತಿದೆ. ಮಳೆರಾಯನ ಕೃಪೆಯಿಂದ ಕೆರೆಗಳು ಮರುಜೀವ ಪಡೆದಿವೆ.

ನೀರಿಲ್ಲದೇ ಸೊರಗಿ ಹೋಗಿದ್ದ ನಗರದ ಹೊರವಲಯದ ಗೋಕುಲ ಗ್ರಾಮದ ಕುಡಿಕೆರೆ, ಕೃಷ್ಣ ಬಡಾವಣೆ ಗ್ರಾಮದ ಕೆರೆ ಹಾಗೂ ತೋಳನಕೆರೆಗಳಿಗೆ ಇದೀಗ ಮಳೆ ನೀರು ಹರಿದು ಬರುತ್ತಿದೆ. ಬೇಸಿಗೆಯಲ್ಲಿ ಕಳೆದು ಹೋಗಿದ್ದ ಈ ಕೆರೆಗಳ ಸೌಂದರ್ಯ ನಿಧಾನವಾಗಿ ಕಳೆಗಟ್ಟುತ್ತಿದೆ.

ನಿರೀಕ್ಷಿಸಿರಲಿಲ್ಲ: ‘ಮಳೆಗಾಲ ಆರಂಭಕ್ಕೂ ಮುನ್ನವೇ ಕೆರೆಗೆ ನೀರು ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನೀರು ಬತ್ತಿದ್ದರಿಂದ, ಹೊಲಕ್ಕೆ ಮೇಯಿಸಲು ಕರೆ ತರುತ್ತಿದ್ದ ದನಕರುಗಳನ್ನು ನೀರು ಕುಡಿಸಲು ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕಿತ್ತು. ಇದೀಗ, ಕೆರೆಗೆ ನೀರು ಬಂದಿರುವುದರಿಂದ ಇಲ್ಲೇ ಕುಡಿಸುತ್ತೇವೆ’ ಎಂದು ಗೋಕುಲ ಗ್ರಾಮದ ರೈತ ಹನುಮಂತಪ್ಪ ಅವರು ಕುಡಿಕೆರೆಗೆ ಮಳೆ ನೀರು ಹರಿದು ಬಂದಿರುವುದರ ಸಂಭ್ರಮವನ್ನು ಹಂಚಿಕೊಂಡರು.

‘ಹಿಂದೆ ಕುಡಿಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದರು. ಅದಕ್ಕಾಗಿಯೇ ಈ ಕೆರೆಗೆ ಕುಡಿಕೆರೆ ಎಂಬ ಹೆಸರು ಬಂತು. ಮಳೆಗಾಲದಲ್ಲಿ ಕೆರೆ ಅಲ್ಪಸ್ವಲ್ಪ ತುಂಬುತ್ತದೆ. ಅರ್ಧದಷ್ಟು ತುಂಬಿದರೂ, ಏರಿಯ ಕೆಳಭಾಗದಲ್ಲಿರುವ ಹೊಲಗಳಲ್ಲಿ ನಡೆಯುವ ಕೃಷಿ ಚಟುವಟಿಕೆಗಳಿಗೆ ನೀರು ಬಳಕೆಯಾಗುತ್ತದೆ. ಕೆಲವೇ ತಿಂಗಳು ನೀರು ಇದ್ದು, ಬಳಿಕ ಇಂಗಿ

ಹೋಗುತ್ತದೆ. ಆದರೆ, ಈ ಅವಧಿಯಲ್ಲಿ ದನಕರುಗಳಿಗೆ ತುಂಬಾನೇ ಅನುಕೂಲವಾಗುತ್ತದೆ’ ಎಂದು ಅವರು ಗಮನ ಸೆಳೆದರು.

ಮೈದುಂಬುತ್ತಿದೆ: ‘ಮಳೆಯಿಂದಾಗಿ ನಮ್ಮೂರಿನ ಕೆರೆ ನಿಧಾನವಾಗಿ ಮೈದುಂಬುತ್ತಿದೆ. ಕೆರೆಗಳಲ್ಲಿ ನೀರಿದ್ದಾಗ ಅವುಗಳ ಬೆಲೆ ಗೊತ್ತಾಗದು. ನೀರು ಹಿಂಗಿ, ನೆಲ ಬಿರುಕು ಬಿಟ್ಟು, ದನಗಳಿಗೆ ತಿನ್ನಲು ಹುಲ್ಲು ಕೂಡ ಹುಟ್ಟದಿದ್ದಾಗ ಅದರ ಬೆಲೆ ಗೊತ್ತಾಗುತ್ತದೆ. ನಮ್ಮೂರ ಕೆರೆಯನ್ನು ಎಲ್ಲರೂ ಕಡೆಗಣಿಸಿದ್ದರು. ಮೂರ್ನಾಲ್ಕು ವರ್ಷದ ಹಿಂದೆ, ಊರಿನವರ ಒತ್ತಡದ

ಮೇರೆಗೆ ಕೆರೆಯ ಹೂಳು ತೆಗೆಯಲಾಯಿತು’ ಎಂದು ಗೋಕುಲ ಗ್ರಾಮದಾಚೆಗಿನ ಕೃಷ್ಣ ಬಡಾವಣೆಯ ಬಸವ್ವ ಶಿಂತ್ರಿ ಹೇಳಿದರು.

‘ಹೂಳು ತೆಗೆಯವ ಜತೆಗೆ, ಮಳೆ ನೀರು ಕೆರೆಗೆ ಹರಿದು ಬರುವಂತೆ ಮಾಡಲಾಗಿದೆ. ಹಾಗಾಗಿ, ಕೆಲ ದಿನಗಳಿಂದೀಚೆಗೆ ಸುರಿದ ಮಳೆಯ ನೀರು ಕೆರೆಯೊಡಲು ಸೇರುತ್ತಿದೆ. ಕೆರೆ ತುಂಬಿದರೆ, ವರ್ಷ ಪೂರ್ತಿ ನೀರು ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದಾಗಿ, ಕೆರೆ ಭಾಗದಲ್ಲಿರುವ ಕೃಷಿ ಭೂಮಿಗೆ ನೀರು ಕೂಡ ಸಿಗುತ್ತದೆ’ ಎಂದು ಭೀಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹಸಿರುಗಟ್ಟಿದ ತೋಳನಕೆರೆ

ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ, ನಗರದ ತೋಳನಕೆರೆಗೆ ಹಸಿರಿನ ಕಳೆ ಬಂದಿದೆ. ಕೆರೆ ಮಧ್ಯೆ ಇರುವ ಮಣ್ಣಿನ ದಿಬ್ಬದ ಸುತ್ತ ನೀರು ಸಂಗ್ರಹಗೊಂಡಿರುವುದರಿಂದ, ದ್ವೀಪದಂತೆ ಕಾಣುತ್ತಿದೆ. ಕೆರೆಗೆ ಹೊಂದಿಕೊಂಡಂತಿರುವ ಉದ್ಯಾನ ಹಾಗೂ ನಡಿಗೆ ಹಾದಿ (ವಾಕಿಂಗ್ ಪಾಥ್)ಯಲ್ಲಿ ಹಸಿರು ಎದ್ದು ಕಾಣುತ್ತಿದೆ.

‘ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಾಯುವಿಹಾರ ಮಾಡಲು ಹಿತವೆನಿಸುತ್ತದೆ. ಜತೆಗೆ, ಹಕ್ಕಿಗಳ ಕಲವರ ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ಮಳೆಗಾಲ ಬೇಗನೇ ಆರಂಭವಾಗಲಿದೆ. ಕೆರೆ ಪೂರ್ಣ ತುಂಬಿ ಕೋಡಿ ಹರಿಯುವ ಲಕ್ಷಣ ಇದೆ’ ಎಂದು ಅಕ್ಷಯ ಪಾರ್ಕ್ ನಿವಾಸಿ ಲಿಂಗರಾಜ ಅಂಗಡಿ ಹೇಳಿದರು.

**

ಮಳೆಗಾಲ ಆರಂಭಕ್ಕೂ ಮುಂಚೆ ಕೆರೆಗೆ ನೀರು ಹರಿದು ಬಂದಿರುವುದು ಖುಷಿ ತಂದಿದೆ. ಇದರಿಂದಾಗಿ ಕೆರೆಯ ದಡದಲ್ಲಿ ದನಕರುಗಳನ್ನು ಮೇಯಿಸಿ, ಇಲ್ಲೇ ನೀರು ಕುಡಿಸಲು ಅನುಕೂಲವಾಗಿದೆ

- ಹನುಮಂತಪ್ಪ, ಗೋಕುಲ ಗ್ರಾಮ

**

ಮಳೆ ನೀರಿನಿಂದಾಗಿ ನಮ್ಮೂರ ಕೆರೆಗೆ ಜೀವ ಬಂದಿದೆ. ಮಳೆ ನೀರು ಸರಾಗವಾಗಿ ಹರಿದು ಬರುತ್ತಿದೆ. ಕೆರೆ ಭರ್ತಿಯಾದರೆ, ಏರಿ ಕೆಳಗಿನ ಪ್ರದೇಶಳ ಕೃಷಿ ಚಟುವಟಿಕೆಗೆ ನೀರಿನ ಬರ ಇಲ್ಲದಂತಾಗುತ್ತದೆ

- ಬಸವ್ವ, ಕೃಷ್ಣ ಬಡಾವಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry