‘ಭಯ ಬೇಡ: ತಾಳ್ಮೆಯಿಂದ ಇರಿ’

7
ಮಳೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ, ಶಾಸಕರ ಭೇಟಿ

‘ಭಯ ಬೇಡ: ತಾಳ್ಮೆಯಿಂದ ಇರಿ’

Published:
Updated:

ಮಂಗಳೂರು: ನೆರೆ ಪೀಡಿತ ಪ್ರದೇಶಗಳಿಗೆ ಸಂಸದ ನಳಿನ್‌ಕುಮಾರ್ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ‘ಜನರು ಭಯ ಭೀತರಾಗುವ ಅಗತ್ಯವಿಲ್ಲ. ಯಾವುದೇ ಸಹಾಯ ಬೇಕಿದ್ದಲ್ಲಿ ಜಿಲ್ಲಾಡಳಿತ ಹಾಗೂ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಜಿಲ್ಲಾಡಳಿತ ಈಗಾಗಲೇ ಅಗತ್ಯ ಕ್ರಮ ಗಳನ್ನೂ ಕೈಗೊಂಡಿದೆ. ಸಂಭಾವ್ಯ ಅಪಾಯ ಎದುರಿಸಲು ಸನ್ನದ್ಧವಾಗಿದೆ‘ ಎಂದು ತಿಳಿಸಿದರು.

‘ಬಿಜೆಪಿ ಕಚೇರಿಯಲ್ಲೂ ಸಹಾಯವಾಣಿ ಆರಂಭಿಸಲಾಗಿದೆ. ಸಂಘ ನಿಕೇತನದಲ್ಲಿಯೂ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ವೈದ್ಯರ ತಂಡ ಹಾಗೂ ಆಂಬುಲೆನ್ಸ್ ಕೂಡ ಸೇವೆಗೆ ಸಿದ್ಧವಾಗಿದೆ. ಬೆಳಿಗ್ಗೆ ಪಡೀಲ್ ಸೇರಿದಂತೆ ಹೆದ್ದಾರಿಯ ಕೆಲವೆಡೆ ಸಮಸ್ಯೆ ಉಂಟಾಗಿದ್ದು ಅಲ್ಲಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ತಾಳ್ಮೆಯಿಂದ ಇರಿ: ‘ನಿರಂತರ ಮಳೆ ಸುರಿದ ಕಾರಣ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದ್ದು, ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ’ ಎಂದು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಈ ತೊಂದರೆಗಳನ್ನು ಸರಿಪಡಿಸಲಾಗುವುದು. ಸಾರ್ವಜನಿಕರು ಸ೦ಯಮ ಕಳೆದುಕೊಳ್ಳದೆ ಶಾಂತ ರೀತಿಯಲ್ಲಿ ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಮುಂದೆ ಬರುವ ಪ್ರಕೃತಿಯ ವಿಕೋಪಕ್ಕೆ ಏನೆಲ್ಲ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಧಿಕಾರಿ ವರ್ಗದವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಐವನ್‌ ಡಿಸೋಜ ಭೇಟಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಭೇಟಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಕೂಡಲೇ ನೆರವು ಒದಗಿಸಬೇಕು. ನಷ್ಟದ ಬಗ್ಗೆ ಅಂದಾಜು ವೆಚ್ಚ ತಯಾರಿಸಿ, ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ಮೂಡುಬಿದಿರೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಅವರು, ಜೀವ ಹಾನಿಯಾದ ನೆಲ್ಲಿಕಾರಿನ ನಿವಾಸಿ ಸಾವಿತ್ರಿ ರಾಠೋಡ್ ಅವರಿಗೆ ಕೂಡಲೇ ₹4ಲಕ್ಷ ಪರಿಹಾರ ಧನ ಒದಗಿಸುವಂತೆ ತಿಳಿಸಿದರು. ಮನೆಗೆ ಹಾನಿ ಆದವರಿಗೂ ಪರಿಹಾರಧನ ವಿತರಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಆಚಾರ್ಯ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಸುಂದರ್ ಪಿ. ಪೂಜಾರಿ, ನಾಮನಿರ್ದೇಶಿತ ಸದಸ್ಯ ಆಲ್ವಿನ್ ಮಿನೇಜಸ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಪಿ., ವಿಲ್‌ಫ್ರೆಡ್‌ ಮೆಂಡೋನ್ಸಾ, ಬಜ್ಪೆ ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್ ಹುಸೇನ್, ಜಾಕೋಬ್, ಅರ್ಮನ್, ಮಾರ್ಟಿನ್, ಮೊಹಿದ್ದೀನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry