ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರದ ಮಳೆಗೆ ನಲುಗಿದ ಮಂಗಳೂರು

ನಿರಂತರ ಸುರಿಯುತ್ತಿರುವ ಮಳೆ: ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ
Last Updated 30 ಮೇ 2018, 9:30 IST
ಅಕ್ಷರ ಗಾತ್ರ

ಮಂಗಳೂರು: ಬೆಳಿಗ್ಗೆಯಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆ. ಎಲ್ಲಿ ನೋಡಿದರೂ ನೀರು. ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲಾಗದ ಸ್ಥಿತಿ. ಶಾಲೆಗಳಿಗೆ ತೆರಳಿದ್ದ ಮಕ್ಕಳನ್ನು ಮನೆಗೆ ಕರೆತರಲು ಪಾಲಕರ ಹರಸಾಹಸ. ಮನೆ, ಮರ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಆತಂಕ ಸೃಷ್ಟಿ.

ಮಂಗಳವಾರ ಮಳೆಯ ಆರ್ಭಟದಿಂದ ನಲುಗಿದ ನಗರದಲ್ಲಿ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೆ, ಇಷ್ಟೊಂದು ಮಳೆ ಬರಬಹುದು ಎನ್ನುವ ನಿರೀಕ್ಷೆ ಯಾರೂ ಮಾಡಿರಲಿಲ್ಲ. ಸುಮಾರು 9 ಗಂಟೆಗೆ ಶುರುವಾದ ವರುಣ ಅಬ್ಬರ ನಿಲ್ಲಲೇ ಇಲ್ಲ. ಸಂಜೆಯವರೆಗೂ ನಿರಂತರವಾಗಿ ಮಳೆ ಸುರಿದು, ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹಿಂದೇಟು ಹಾಕುವಂತಾಗಿತ್ತು.

ಇನ್ನೇನು ಮುಂಗಾರು ಮಳೆ ಜಿಲ್ಲೆಗೆ ಪ್ರವೇಶ ಆಗಬೇಕಿದೆ. ಆದರೆ, ಅದಕ್ಕಿಂತ ಮೊದಲೇ ಜಿಲ್ಲೆಯಲ್ಲಿ ಆರಂಭವಾದ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಹೂಳು ತುಂಬಿದ ಚರಂಡಿಗಳಿಂದಾಗಿ ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದವು. ರಸ್ತೆಗಳಂತೂ ಹಳ್ಳಗಳಾಗಿ ಪರಿವರ್ತನೆ ಆಗಿದ್ದವು. ಬೈಕ್‌ಗಳ ಸವಾರರಂತೂ ಅತ್ತ ಮುಂದಕ್ಕೂ ಸಾಗದೇ, ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ನಗರದ ಲಾಲ್‌ಬಾಗ್, ಮಹಾನಗರ ಪಾಲಿಕೆ ಕಚೇರಿ ಎದುರಿನ ರಸ್ತೆ, ಕಾಪಿಕಾಡ್‌, ಬೋಳೂರು, ನಂತೂರು, ಅತ್ತಾವರ, ಬಲ್ಮಠ, ಜ್ಯೋತಿ ವೃತ್ತ, ಪಡೀಲ್‌ ರೈಲ್ವೆ ಕೆಳ ಸೇತುವೆ, ಪಂಪ್‌ವೆಲ್‌, ಕೊಟ್ಟಾರ ಚೌಕಿಯಂತಹ ಪ್ರಮುಖ ಜನದಟ್ಟಣೆ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯಿತು. ಪಂಪ್‌ವೆಲ್‌, ಕೊಟ್ಟಾರ ಚೌಕಿ, ಪಡೀಲ್‌ನಲ್ಲಂತೂ ಸುಮಾರು 2 ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಕೂಳೂರು, ಕುತ್ತಾರು ಮುಖ್ಯರಸ್ತೆ, ಹಂಪನಕಟ್ಟೆ ಸೆಂಟ್ರಲ್ ರೈಲ್ವೆ ನಿಲ್ದಾಣ, ಯೆಯ್ಯಾಡಿ, ಶರ್ಬತ್ ಕಟ್ಟೆ, ಬಿಜೈ, ಬೋಳಾರು, ತೊಕ್ಕೊಟ್ಟು ಮುಂತಾದೆಡೆ ಕೃತಕ ಪ್ರವಾಹ ಸೃಷ್ಟಿಯಾಗಿತ್ತು. ಬಿಜೈ ಮತ್ತು ಹಂಪನಕಟ್ಟೆಯಲ್ಲಿ ಹಲವಾರು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.

ಕೃತಕ ನೆರೆ: ಹೂಳು ತುಂಬಿದ ಚರಂಡಿಗಳಿಂದಾಗಿ ಕೃತಕ ನೆರೆ ಉಂಟಾಗಿತ್ತು. ಚರಂಡಿಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಗೆ ಬಂದಿದ್ದರಿಂದ ಕಾಂಕ್ರಿಟ್‌ ರಸ್ತೆಗಳು ನದಿಗಳಂತಾಗಿದ್ದವು.

ನಗರದ ಡೊಂಗರಕೇರಿಯಿಂದ ಕುದ್ರೋಳಿ ಕಂಬಳಕ್ಕೆ ಸಾಗುವ ರಸ್ತೆ, ಕೊಟ್ಟಾರ, ಪಂಪ್‌ವೆಲ್‌ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಸಾಮಗ್ರಿಗಳಿಗೆ ಹಾನಿ ಉಂಟಾಯಿತು. ಉರ್ವ ಹೊಯಿಗೆ ಬಜಾರ್‌ನಲ್ಲಿ ಕೆಲ ಮನೆಗಳ ಆವರಣದಲ್ಲಿ ನೀರು ನುಗ್ಗಿತ್ತು. ಕುಳಾಯಿಯಲ್ಲಿ ನಾಲ್ಕು ಮನೆಗಳಿಗೆ ಹಾಗೂ ಅಂಗಡಿಗೆ ನೀರು ನುಗ್ಗಿತ್ತು.

ಜ್ಯೋತಿ ವೃತ್ತದಲ್ಲಂತೂ ಮತ್ತೆ ಕೃತಕ ನೆರೆ ಸೃಷ್ಟಿಯಾಗಿತ್ತು. ಮಳೆಯ ನೀರೆಲ್ಲ ಜ್ಯೋತಿ ವೃತ್ತದ ಬಸ್‌ ನಿಲ್ದಾಣದ ಬಳಿ ಸಂಗ್ರಹಗೊಂಡಿದ್ದರಿಂದ ಬಸ್‌ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ರಥಬೀದಿಯಿಂದ ಮಹಾಮ್ಮಾಯಿ ದೇವಸ್ಥಾನದ ಮುಂಭಾಗದಿಂದ ಡೊಂಗರಕೇರಿಗೆ ಸಾಗುವ ರಸ್ತೆ, ಕುದ್ರೋಳಿಯಿಂದ ಪ್ರಗತಿ ಸರ್ವೀಸ್‌ ಸ್ಟೇಶನ್‌ಗೆ ಹೋಗುವ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಉರುಳಿದ ಮರ, ಕಾಂಪೌಂಡ್‌: ನಗರದಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಇನ್ನು ಕೆಲವೆಡೆ ಕಾಂಪೌಂಡ್‌ ಗೋಡೆಗಳು ಕುಸಿದಿವೆ.

ನಗರದ ವೆಲೆನ್ಸಿಯಾದಲ್ಲಿ ಮರವೊಂದು ಬೇರು ಸಹಿತ ಉರುಳಿ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಅಡ್ಯಾರ್‌ ಕಣ್ಣೂರಿನಲ್ಲಿ ಮನೆಯ ಕಾಂಪೌಂಡ್‌ ಗೋಡೆ ಕುಸಿದು, ಆಮ್ನಿ ಕಾರಿಗೆ ಹಾನಿಯಾಗಿದೆ. ನಗರದ ಆರ್ಯ ಸಮಾಜ ರಸ್ತೆಯಲ್ಲಿ ಹಳೆಯ ಮನೆಯೊಂದು ಕುಸಿದಿದೆ. ಶಿವಬಾಗ್‌ನಲ್ಲಿ ಬೃಹತ್‌ ಕಾಂಪೌಂಡ್‌ ಉರುಳಿ ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಕೆಪಿಟಿ ಉದಯನಗರ ಬಳಿ ಧರೆ ಕುಸಿದಿದ್ದು, ಮಹಿಳೆಯೊಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ವಿಪುಲ್‌ಕುಮಾರ್‌, ‘ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೋಹಿನಿ (60) ಎಂಬುವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಇದುವರೆಗೆ ಖಚಿತವಾಗಿಲ್ಲ’ ಎಂದು ತಿಳಿಸಿದ್ದಾರೆ.

ಉಳ್ಳಾಲದ ಅಂಬಿಕಾರೋಡ್ ಪಿಲಾರಿನ ನಿವಾಸಿ ಕೃಷ್ಣ ಶೆಟ್ಟಿಯವರ ಮನೆ ಆವರಣ ಗೋಡೆ ಕುಸಿದ ಪರಿಣಾಮ ಆವರಣದೊಳಗಿನ ಹಲಸಿನ ಮರವೊಂದು ವಿದ್ಯುತ್ ಕಂಬದ ತಂತಿಯ ಮೇಲೆರಗಿ ಬಿದ್ದಿದ್ದು, ಮೆಸ್ಕಾಂ ಸಿಬ್ಬಂದಿ, ಸ್ಥಳೀಯ ಯುವಕರು ಸೇರಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿವಿ ಪರೀಕ್ಷೆ ಮುಂದಕ್ಕೆ

ಮಳೆಯಿಂದಾಗಿ ಮಂಗಳೂರು ವಿಶ್ವವಿದ್ಯಾಲಯವು ಇದೇ 30 ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ.

ಎಂಬಿಎ (ಐಬಿ) ನಾಲ್ಕನೇ ಸೆಮಿಸ್ಟರ್‌ನ ಬ್ಯುಸಿನೆಸ್‌ ಎಥಿಕ್ಸ್‌ ಆಂಡ್‌ ಹ್ಯುಮನ್‌ ವ್ಯಾಲ್ಯೂಸ್‌ ಪರೀಕ್ಷೆಯನ್ನು ಜೂನ್‌ 7 ರಂದು ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ, ಎಂಬಿಎ ದ್ವಿತೀಯ ಸೆಮಿಸ್ಟರ್‌ನ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ ಪರೀಕ್ಷೆಯನ್ನು ಜೂನ್‌ 13 ರಂದು ಬೆಳಿಗ್ಗೆ 10 ರಿಂದ 1 ಗಂಟೆಗೆ, ಎಂಕಾಂ ದ್ವಿತೀಯ ಸೆಮಿಸ್ಟರ್‌ನ ಅಡ್ವಾನ್ಸ್ಡ್ ಕಾಸ್ಟ್‌ ಅಕೌಂಟಿಂಗ್‌ (ನ್ಯೂ ಸ್ಕೀಮ್‌), ಅಡ್ವಾನ್ಸ್ಡ್‌ ಫೈನಾನ್ಸಿಯಲ್‌ ಆಂಡ್‌ ಕಾಸ್ಟ್‌ ಅಕೌಂಟಿಂಗ್‌–11 (ಓಲ್ಡ್‌ ಸ್ಕೀಮ್‌) ಪರೀಕ್ಷೆಯನ್ನು ಜೂನ್ 1 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಎಂಎ ಕನ್ನಡ ದ್ವಿತೀಯ ಸೆಮಿಸ್ಟರ್‌ನ ಮಹಿಳಾ ಸಂಕಥನ ಪರೀಕ್ಷೆಯನ್ನು ಜೂನ್‌ 1 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಗೆ, ಬಿಎ ಆರನೇ ಸೆಮಿಸ್ಟರ್‌ನ ಜರ್ನಲಿಸಂ ಪರೀಕ್ಷೆಯನ್ನು ಜೂನ್‌ 1 ರಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

ವಿದ್ಯುತ್‌ ಪೂರೈಕೆ ಸ್ಥಗಿತ

ಮಳೆಯಿಂದಾಗಿ ನಗರದ ಮಣ್ಣಗುಡ್ಡೆ, ಅತ್ತಾವರ, ಎಕ್ಕೂರು, ಪಂಪ್‌ವೆಲ್, ಜೆಪ್ಪು ಮೊದಲಾದ ಕಡೆಗಳಲ್ಲಿ ಕಟ್ಟಡ ಸಮುಚ್ಚಯಗಳು ಜಲಾವೃತಗೊಂಡಿದ್ದು, ಅಪಾಯಕಾರಿ ಮಟ್ಟ ತಲುಪಿರುವುದರಿಂದ ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಇಲಾಖೆಯ ಕೋರಿಕೆಯ ಮೇರೆಗೆ ಸುರಕ್ಷತೆಯ ದೃಷ್ಟಿಯಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ವಿದ್ಯುತ್ ನಿಲುಗಡೆಗೊಳಿಸಿದ ಪ್ರದೇಶಗಳನ್ನು ಪರಿಶೀಲಿಸಿ, ವಿದ್ಯುತ್ ಮರುಸಂಪರ್ಕ ಕಲ್ಪಿಸಲು ಮೆಸ್ಕಾಂ ಸಿಬ್ಬಂದಿ, ಜಿಲ್ಲಾಡಳಿತ, ಅಗ್ನಿಶಾಮಕ ದಳ ಹಾಗೂ ಇತರೇ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಯಿಂದಾಗಿ ಸುಮಾರು ಒಂದು ಸಾವಿರ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸರಬರಾಜು ಪೂರೈಕೆ ವ್ಯವಸ್ಥೆಯಲ್ಲಿ ತೀವ್ರ ಅಡಚಣೆ ಉಂಟಾಗಿದೆ. ವಿದ್ಯುತ್ ಪೂರೈಕೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮೂಲ್ಕಿ 33ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಲೈನ್‌ನ ಗೋಪುರ ಬುಡಸಹಿತ ಉರುಳಿದ್ದು, ಮೂಲ್ಕಿ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸುಳ್ಯ 33ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಲೈನ್‌ನ ಮೇಲೆ ನಿರಂತರವಾಗಿ ಮರಗಳು ಬೀಳುತ್ತಿರುವುದರಿಂದ ಸುಳ್ಯ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಎಲ್ಲ ಕಡೆ ವಿದ್ಯುತ್ ಪೂರೈಕೆ ಸಮರ್ಪಕವಾಗಲು ಇನ್ನಷ್ಟು ಕಾಲಾವಕಾಶ ಬೇಕಾಗಿರುವುದರಿಂದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.

ಆತಂಕ ಬೇಡ: ಜಿಲ್ಲಾಧಿಕಾರಿ

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯು ಮುಂಗಾರು ಮಳೆಯಾಗಿದ್ದು, ಯಾವುದೇ ರೀತಿಯ ಬಿರುಗಾಳಿ ಅಥವಾ ಚಂಡಮಾರುತ ಉಂಟಾಗಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಈಗಾಗಲೇ ಮಳೆ ನೀರು ನುಗ್ಗಿ ಸಾರ್ವಜನಿಕರ ಜನಜೀವನಕ್ಕೆ ತುಂಬಾ ತೊಂದರೆಯಾಗಿರುವ ಪ್ರದೇಶಗಳಲ್ಲಿ ತುರ್ತು ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಸಾರ್ವಜನಿಕರು ಮಳೆಯಿಂದ ಯಾವುದೇ ಹಾನಿ ಅಥವಾ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕಂಟ್ರೋಲ್ ರೂಂ ಸಂಖ್ಯೆ: 1077 ಇಲ್ಲಿ ಕರೆ ಮಾಡಿ ಸಮಸ್ಯೆ ತಿಳಿಸಿದರೆ ಕೂಡಲೇ ಸ್ಪಂದಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT