‘ಮಗುವಿಗೆ ಸಹಜ ಬಾಲ್ಯ ಇರಲಿ’

7
ಪುತ್ತೂರು ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ

‘ಮಗುವಿಗೆ ಸಹಜ ಬಾಲ್ಯ ಇರಲಿ’

Published:
Updated:

ಪುತ್ತೂರು: ಮಗುವಿಗೆ ಸಹಜ ಬಾಲ್ಯ ಬೇಕು. ಪೋಷಕರು ತಮ್ಮ ನಿರೀಕ್ಷೆಗ ಳನ್ನು ಮಕ್ಕಳ ಮೇಲೆ ಹೇರುವ ಮೂಲಕ ಅವರ ಬಾಲ್ಯವನ್ನು ಕಿತ್ತುಕೊಳ್ಳಲು ಮುಂದಾದರೆ ಮಕ್ಕಳ ಭವಿಷ್ಯ ಮಂಕಾ ಗಬಹುದು. ಮಕ್ಕಳಿಗೆ ಕೇವಲ ಕಲಿಕೆಯ ಶಿಕ್ಷಣವಲ್ಲ. ಬದುಕುವ ಕಲೆಯನ್ನು ಅರಗಿಸಿಕೊಳ್ಳುವ ಶಿಕ್ಷಣ ನೀಡಬೇಕು’ ಎಂದು ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿ ದ್ಯಾಲಯದ ಉಪನ್ಯಾಸಕ ಡಾ. ಕುಮಾರಸ್ವಾಮಿ ಎಚ್ ಅವರು ಹೇಳಿದರು.

ಪುತ್ತೂರಿನ ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪುತ್ತೂರು ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಿದರು.

ಮಗು ಸಹಜ ಬಾಲ್ಯವನ್ನು ಆ ಹಂತದಲ್ಲಿ ಅನುಭವಿಸಬೇಕು. ಶಾಲಾ ಕಲಿಕೆಯಲ್ಲಿ ಅಂಕಗಳು ಬೇಕು ಎಂಬುದು ನಿಜ. ಆದರೆ ಕೇವಲ ಅಂಕಗಳ ಬೆನ್ನು ಹತ್ತಿ ನೂರಕ್ಕೆ ನೂರು ಅಂಕ ಪಡೆಯುವ ಧಾವಂತದಲ್ಲಿ ಓಡುವ ಮಕ್ಕಳು ಕೊನೆಗೆ ಹೆತ್ತವರಿಂದಲೂ ಮಾನಸಿಕವಾಗಿ ದೂರವಾಗುತ್ತಾರೆ. ಉದ್ಯೋಗ, ಸಂಪಾದನೆಯ ವ್ಯಾಮೋಹಕ್ಕೆ ತುತ್ತಾಗಿ ದೂರದ ಊರು, ದೂರದ ದೇಶ ಸುತ್ತುವ ಮಕ್ಕಳು ಹೆತ್ತವರಿಗೆ ನಿಲುಕುವುದೇ ಇಲ್ಲ. ಆಗ ಹೆತ್ತವರು ಪರಿತಪಿಸಬೇಕಾಗುತ್ತದೆ ಎಂದರು. ಹೀಗಾಗದಂತೆ ಪುಟ್ಟ ಮಕ್ಕಳ ಹೆತ್ತವರು ಮೊದಲೇ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಹೆತ್ತವರು ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿಯೂ ಪ್ರತಿಷ್ಠೆ ಮೆರೆಯುತ್ತಾರೆ. ತಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಬಲಿ ಕೊಡುತ್ತಾರೆ ಎಂದು ಅವರು, ನಮ್ಮ ಮಕ್ಕಳಿಗೆ ಬೇರೆ ಯಾರೋ ಶತ್ರುಗಳಿದ್ದಾರೆ ಎಂದು ಭಾವಿಸುವುದು ಬೇಡ. ನಮ್ಮ ಮಕ್ಕಳಿಗೆ ನಾವೇ ಶತ್ರುಗಳಾಗುತ್ತಿದ್ದೇವೆ ಎಂದರು. ಮನೆಯಲ್ಲಿ ಮಕ್ಕಳ ಜತೆ ಸೇರಿ ಹೆತ್ತವರೂ ಟಿವಿ ನೋಡಿದರೆ ಹೆತ್ತವರ ಅಭಿರುಚಿಯೂ ಮಕ್ಕಳ ಅಭಿರುಚಿಯೂ ಒಂದೇ ಆಗಿರುವುದಿಲ್ಲ. ಹೆತ್ತವರು ಟಿವಿ ನೋಡಿ ಅನುಭವಿಸುವ ರೀತಿಯನ್ನು ನೋಡಿ ಮಕ್ಕಳು ಕೂಡ ಹೇಗೇಗೋ ವರ್ತಿಸಲು ಆರಂಭಿಸುತ್ತವೆ. ಈ ಮೂಲಕ ಮಕ್ಕಳ ಸಹಜ ಬಾಲ್ಯವನ್ನು ನಾವೇ ಕೊಲ್ಲುತ್ತಿದ್ದೇವೆ ಎಂದು ಅವರು ವಿಷಾದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಷ್ಣು ಪ್ರಸಾದ್ ಅವರು ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ಪುಣಚ, ಹಾರಾಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ರೈ ಇದ್ದರು. ಸರ್ಕಾರ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಮುದರ ಅವರು ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕುಮಾರಿ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಹಾರಾಡಿ-ಪಡೀಲು ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾಗಿ ಬಂದ ಮಕ್ಕಳನ್ನು ಶಿಕ್ಷಕಿಯರು ಆರತಿ ಎತ್ತಿ ಸ್ವಾಗತಿಸಿದರು.

‘ಬದುಕನ್ನು ಎದುರಿಸುವ ಕಲೆ ಕಲಿಸಿ’

ಎಲ್ಲಾ ಜಾತಿ, ಜನಾಂಗ, ಭಾಷೆ, ಸಂಪ್ರದಾಯ, ಸಂಸ್ಕೃತಿಗಳನ್ನು ಒಳಗೊಂಡಿರುವ ನಮ್ಮ ದೇಶದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಸರ್ಕಾರಿ ಶಾಲೆಗಳಲ್ಲಿ ಕೂಡ ಅಂಥದೇ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಇದು ಸರ್ಕಾರಿ ಶಾಲೆಗಳ ಶಕ್ತಿ, ಸತ್ವ. ಇಂಥ ಶಾಲೆಗಳಲ್ಲಿ ಕಲಿತ ಮಕ್ಕಳು ಗುಂಪಿನೊಂದಿಗೆ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತವೆ. ಸಹಬಾಳ್ವೆಯನ್ನು ಕಲಿಯುತ್ತವೆ. ನಮ್ಮ ಶಿಕ್ಷಣ ಎಲ್ಲಿ ಗಟ್ಟಿತನ ಹೊಂದಿರಬೇಕು ಎಂದರೆ ಬದುಕನ್ನು ಎದುರಿಸುವ ಕಲೆಯನ್ನು ಕಲಿಸಿಕೊಡಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry