ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಡವೆ ಇದ್ದರೇನು?

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಯಾವುದೇ ಸ್ಟಾರ್ ಡಮ್ ಇಲ್ಲದೇ, ಮುಖದ ತುಂಬಾ ಮೇಕಪ್ ಬಳಿಯದೇ, ತುಟಿ ಮೇಲೆ ರಂಗಿನ ನೋಟವಿಲ್ಲದೇ, ಕೆನ್ನೆ ಮೇಲೆ ಗುಲಾಬಿ ಬಣ್ಣವಿಲ್ಲದೇ ಇರುವ ಬೆಡಗಿಯೊಬ್ಬಳನ್ನು ನಟಿ ಎಂದು ಕರೆಯಲು ಸಾಧ್ಯವೇ ಇಲ್ಲ ಎಂಬ ವಾದವನ್ನು ತಳ್ಳಿ ಹಾಕಿದ್ದು ಮದ್ರಾಸಿ ಬೆಡಗಿ ಸಾಯಿ ಪಲ್ಲವಿ.

ಮೇಕಪ್ ಇಲ್ಲದೇ ಮನೆಯಿಂದ ಹೊರಗೆ ಕಾಲಿಡದ ನಮ್ಮ ನಟಿಮಣಿಗಳ ನಡುವೆ ಇವರು ತುಂಬಾ ಭಿನ್ನವಾಗಿ ಕಾಣುತ್ತಾರೆ. ಕೆನ್ನೆ ಮೇಲೆ ದೇವರು ಮೂಡಿಸಿದ ಗುಲಾಬಿ ರಂಗು, ಅಚ್ಚ ಕೆಂಪಿನ ತುಟಿ, ಹಾಲುಬಿಳುಪು ಬಣ್ಣ, ಮಂದರಂಗಿ ಬಣ್ಣದ ಗುಂಗುರು ಕೂದಲು, ಕೆನ್ನೆಯ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಮೊಡವೆಗಳು ಇವೆಲ್ಲವೂ ಆಕೆಯ ಸೌಂದರ್ಯದ ಅಂಶಗಳು. ಇವೆಲ್ಲ ಆಕೆಗೆ ಹುಟ್ಟಿನೊಂದಿಗೆ ಬಂದ ಬಳುವಳಿಯೂ ಹೌದು.

ಮೊಡವೆ ಎಂಬುದು ಶಾಪ ಎನ್ನುತ್ತಿದ್ದ ಹೆಣ್ಣುಮಕ್ಕಳಿಗೆ ಮೊಡವೆಯೇ ನನ್ನ ಸೌಂದರ್ಯವನ್ನು ಹೆಚ್ಚಿಸಿದ್ದು, ಅದೆಂದಿಗೂ ನನ್ನ ಸೌಂದರ್ಯಕ್ಕೆ ಅಡ್ಡಿಯಾಗಿಲ್ಲ. ನಿರ್ದೇಶಕರು ಕೇಳಿದರಷ್ಟೇ ನಾನು ತಿಳಿ ಮೇಕಪ್ ಮೂಲಕ ಮೊಡವೆಯನ್ನು ಮುಚ್ಚಿಕೊಳ್ಳುತ್ತಿದ್ದೆ ಎಂದು ನಿರ್ಭಿಡೆಯಿಂದ ಹೇಳುವ ಇವರು ಆಧುನಿಕ ಯುವತಿಯರಿಗೆ ಮಾದರಿ.

ಸಿನಿಮಾ ಅಂದರೆ ಗ್ಲ್ಯಾಮರ್‌ ಜಗತ್ತು. ಇಲ್ಲಿ ಎಂತಹ ಬಟ್ಟೆಯನ್ನಾದರೂ ತೊಡಲು ಸಿದ್ಧವಿರಬೇಕು ಎಂಬುದನ್ನು ಸುಳ್ಳು ಮಾಡಿದ್ದ ಖ್ಯಾತಿ ಹಿಂದೆ ಸಿತಾರಾ ಅವರಿಗಿದ್ದರೆ ಬಹುಶಃ ಇಂದು ಸಾಯಿಪಲ್ಲವಿಗೆ ಸೇರಬೇಕು ಎನ್ನಿಸುತ್ತದೆ. ದಕ್ಷಿಣ ಭಾರತದ ಉಡುಪುಗಳಾದ ಸೀರೆ, ಲಂಗ–ದಾವಣಿ, ಚೂಡಿದಾರ್‌ಗಳಲ್ಲಷ್ಟೇ ನಾವು ಇವರನ್ನು ಸಿನಿಮಾ
ಗಳಲ್ಲಿ ನೋಡಲು ಸಾಧ್ಯ. ಅಗತ್ಯ ಬಿದ್ದಾಗಷ್ಟೇ ಪಾಶ್ಚಾತ್ಯ ಬಟ್ಟೆಗಳನ್ನು ತೊಡುವ ಈ ಸುಂದರಿ ಅದರಲ್ಲೂ ಚ್ಯೂಸಿ ಎನ್ನಿಸಿಕೊಳ್ಳುತ್ತಾರೆ.

ಈಗಾಗಲೇ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿ ಬಳಗವನ್ನು ಹುಟ್ಟುಹಾಕಿಕೊಂಡ ಸಾಯಿಪಲ್ಲವಿ ಈವರೆಗೆ ತಾಯಿಯಾಗಿ, ಪ್ರೇಯಿಸಿಯಾಗಿ, ಹೆಂಡತಿಯಾಗಿ, ಶಿಕ್ಷಕಿಯಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಮಲೆಯಾಳಂನ ಬ್ಲಾಕ್‌ಬಸ್ಟರ್ ಸಿನಿಮಾ ‘ಪ್ರೇಮಂ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ತನ್ನ ಚೊಚ್ಚಲ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಪ್ರೇಮಂನ ಮಲ್ಲಾರ್‌ಳ ಮೊದಲ ನೋಟಕ್ಕೆ ಫಿದಾ ಆದವರ ಸಂಖ್ಯೆ ಮಾತ್ರ ಅಗಣಿತ. ಕವಿತೆ ಎಂದರೆ ಏನು ಎಂದು ತಿಳಿಯದ ಅನೇಕ ಮಹಾತ್ಮರು ಈಕೆಯ ನೋಟದ ಮೇಲೆ ಕವಿತೆ ಬರೆದು ತಮ್ಮ ಪೇಸ್‌ಬುಕ್ಕಿನ ಗೋಡೆಯಲ್ಲಿ ಹಂಚಿಕೊಂಡರೆ, ಇನ್ನೂ ಈಗಲೂ ಕೆಲವರ  ವಾಟ್ಸ್ಯಾಪ್‌, ಫೇಸ್‌ಬುಕ್ಕಿನ ಮುಖಪುಟಗಳಲ್ಲಿ ಈ ಸುಂದರಿಯ ಫೋಟೊಗಳೇ ರಾರಾಜಿಸುತ್ತಿರುತ್ತವೆ. ನಾನು ಮದುವೆಯಾಗುವ ಹುಡುಗಿ ಸಾಯಿಪಲ್ಲವಿಯಂತೆ ಇರಬೇಕು ಎಂದು ಕನಸು ಕಾಣುವವರ ಸಂಖ್ಯೆಯೂ ಕಡಿಮೆ ಇಲ್ಲ. ಇನ್ನೂ ಪಡ್ಡೆ ಹುಡುಗರ ಕತೆಯಂತೂ ಕೇಳುವುದೇ ಬೇಡ. ಒಟ್ಟಾರೆ ಸಿನಿಪ್ರಿಯರ ಮನ ಗೆದ್ದ ಸಾಯಿಪಲ್ಲವಿಯನ್ನು ಹೊಸತಲೆಮಾರಿನ ಟ್ರೆಂಡ್ ಸೆಟ್ಟರ್ ಅಂತಲೇ ಹೇಳಬಹುದು.

ಇನ್ನು ತೆಲುಗಿನಲ್ಲಿ ನಟ ವರುಣ್ ತೇಜ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ‘ಫಿದಾ’ ಸಿನಿಮಾದ ‘ವಚ್ಚಿಂದೆ ಮೆಲ್ಲ ಮೆಲ್ಲಗಾ ವಚ್ಚಿಂದೆ’ ಹಾಡಿನಲ್ಲಿ ಆಕೆ ಸೊಂಟ ಬಳುಕಿಸಿದ ರೀತಿಗೆ ಹುಡುಗರೇನು ಹುಡುಗಿಯರೇ ನಿಬ್ಬೆರಗಾಗಿದ್ದರು. ಸಾಯಿಪಲ್ಲವಿಯ ವಚ್ಚಿಂದೆ ಹಾಡು ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು ಎಂದರೆ ತೆಲುಗು ಅರ್ಥವಾಗದವರು ಕೂಡ ಆ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದರು.

ನಟನೆಯನ್ನೇ ಉಸಿರಾಗಿಸಿಕೊಂಡ ಈ ಕೆಂಪುಕೆನ್ನೆಯ ನಟಿ ಓದಿದ್ದು ಎಂಬಿಬಿಎಸ್‌. ತಾಯಿಯಂತೆ ಡಾನ್ಸರ್ ಆಗಬೇಕು ಎಂದುಕೊಂಡಿದ್ದ ಆಕೆ ನಟಿಯಾಗಿದ್ದು ಆಕಸ್ಮಿಕವೇ. ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಇಮೇಜ್ ಹೊಂದಿರುವ ಈ ನಟಿ ಸಿನಿಮಾ ಎನ್ನುವುದು ತಾತ್ಕಾಲಿಕ, ಇಲ್ಲಿ ಪ್ರತಿದಿನ ಹೊಸ ಹೊಸ ಮುಖಗಳ ಪರಿಚಯವಾಗುತ್ತಾ ಇರುತ್ತದೆ. ಹೊಸತು ಬಂದಾಗ ಹಳೆಯದಕ್ಕೆ ಬೆಲೆ ಇಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಹಾಗಾಗಿ ನಾನು ಎಂದಿಗೂ ನೆಚ್ಚಿಕೊಂಡಿರುವುದು ವೈದ್ಯ ವೃತ್ತಿಯಂತೆ ಎಂದು ಅನುಭವಿಯಂತೆ ಹೇಳುತ್ತಾರೆ.

ಪ್ರಯಾಣ ಮಾಡುವುದು ಈಕೆಗೆ ನೆಚ್ಚಿನ ಹವ್ಯಾಸ, ತಾಯಿಯೊಂದಿಗೆ ತಾನು ಇಷ್ಟಪಡುವ ಜಾಗದಲೆಲ್ಲಾ ಸುತ್ತುವ ಈ ಸಹಜ ಸುಂದರಿಗೆ ನೃತ್ಯವೂ ಹವ್ಯಾಸವೇ. ಕಸ್ತೂರಿ ಮಾನ್, ದಾಮ್ ದೂಮ್‌ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಇವರ ಮಾರಿ 2, ಎನ್‌ಜಿಕೆ, ಪಾಡಿ ಪಾಡಿ ಲೆಚ್ಚೆ ಮನಸ್ಸು ಮುಂತಾದ ಸಿನಿಮಾಗಳು ತೆರೆ ಕಾಣಲು ಸಿದ್ಧತೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT