ಅತಿ ಆತ್ಮವಿಶ್ವಾಸದಿಂದ ಕೇಶವಮೂರ್ತಿ ಸೋಲು

7
ಆತ್ಮಾವಲೋಕನ ಸಭೆಯಲ್ಲಿ ಸಂಸದ ಆರ್. ಧ್ರುವನಾರಾಯಣ ಬೇಸರ

ಅತಿ ಆತ್ಮವಿಶ್ವಾಸದಿಂದ ಕೇಶವಮೂರ್ತಿ ಸೋಲು

Published:
Updated:

ನಂಜನಗೂಡು: ‘ಕಳೆದ ಉಪ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ ಅವರು 22 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಕನಿಷ್ಠ  5ರಿಂದ 6 ಸಾವಿರ ಮತಗಳಿಂದ ಗೆಲ್ಲಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದೇ ಸೋಲಿಗೆ ಕಾರಣ’ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ನಗರದ ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಮತದಾರರಿಗೆ ಕೃತಜ್ಞತೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಸೋಲಿನ ಆತ್ಮಾವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಗುಪ್ತದಳ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವುದಾಗಿ ತಿಳಿಸಿದ್ದವು. ಚುನಾವಣೆ ಆರಂಭದಿಂದಲೂ ಕ್ರಮ ಬದ್ಧವಾಗಿ ಪ್ರಚಾರ ನಡೆಸಲಾಗಿತ್ತು. ಕೊನೆಯ 3–4 ದಿನಗಳಲ್ಲಿ ಎಡವಿದ್ದೇವೆ. ಮತದಾರರ ತೀರ್ಪನ್ನು ತಲೆಬಾಗಿ ಒಪ್ಪಿಕೊಂಡಿದ್ದೇವೆ ಎಂದ ಅವರು, ರಾಜ್ಯದಾದ್ಯಂತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ 38 ಮತಗಳು ಬಂದಿವೆ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ರಾಹುಲ್ ಗಾಂಧಿಯವರ ಆಶಯದಂತೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ₹80 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಲಾಗಿತ್ತು. ಸ್ಥಳೀಯರಾದ ಕೇಶವಮೂರ್ತಿ ಅವರು ದಿನದ 24 ಗಂಟೆ ಕ್ಷೇತ್ರದಲ್ಲಿದ್ದು ಮತದಾರರ ಕಷ್ಟ–ಸುಖಗಳಿಗೆ ಸ್ಪಂದಿಸುತ್ತಿದ್ದರು. ಇಂತಹ ಪ್ರಾಮಾಣಿಕ ವ್ಯಕ್ತಿಗೆ ಬೆಂಬಲ ವ್ಯಕ್ತಪಡಿಸದೆ, ಜನ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ತುಡಿಯುತ್ತಿದ್ದ ವ್ಯಕ್ತಿ ಸೋತಿದ್ದು ನನಗೆ ನೋವು ತಂದಿದೆ ಎಂದು ಸಂಸದ ಆರ್.ಧ್ರುವನಾರಾಯಣ ಬೇಸರ ವ್ಯಕ್ತಪಡಿಸಿದರು.

ಸರ್ಕಾರ ನಮ್ಮದೇ ಆಗಿರುವು ದರಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ಮುಂದಿನ ನಗರಸಭೆ ಹಾಗೂ ಲೋಕಸಭಾ ಚುನಾವಣೆಗಳಿಗಾಗಿ ಪಕ್ಷ ಹಾಗೂ ಕಾರ್ಯಕರ್ತರನ್ನು ಸಂಘಟಿಸಬೇಕಾಗಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕೇಶವಮೂರ್ತಿ ಅವರಿಗೆ 65 ಸಾವಿರಕ್ಕೂ ಹೆಚ್ಚಿನ ಮತ ನೀಡಿದ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.

ಮಾಜಿ ಶಾಸಕ ಎನ್.ಕೇಶವಮೂರ್ತಿ ಮಾತನಾಡಿ, ಉಪ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಜೆಡಿಎಸ್ ಈ  ಚುನಾವಣೆಯಲ್ಲಿ ಸ್ಪರ್ಧಿಸಿ 13 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದು ಹಾಗೂ ನಗರ ಪ್ರದೇಶದಲ್ಲಿ ಕಳೆದ ಬಾರಿಗಿಂತ 8 ಸಾವಿರ ಮತಗಳು ಕಡಿಮೆ ಬಂದಿದ್ದು  ಸೋಲಿಗೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಿಸಿಕೊಂಡು ಚುನಾವಣೆ ಎದುರಿಸುತ್ತೇವೆ. ಆಗಿರುವ ಲೋಪ ತಿದ್ದಿಕೊಂಡು ಗ್ರಾಮ ಪಂಚಾ ಯಿತಿ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆ ಹೊರುತ್ತೇನೆ ಎಂದರು.

ನಗರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ಮಾಜಿ ಉಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಬಿದ್ದ ಆಪ್ತ ಸಚಿವರೊಬ್ಬರು ಎದುರಾಳಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ  ಕಾಂಗ್ರೆಸ್‌ 23 ರಿಂದ 24 ಸ್ಥಾನಗಳನ್ನು ಕಳೆದು ಕೊಳ್ಳುವಂತಾಯಿತು.   ಈಗ ಅವರೂ ಸೋಲುವುದಲ್ಲದೆ ಪಕ್ಷವನ್ನು ಅಧೋ ಗತಿಗೆ ತಂದಿದ್ದಾರೆ. ಅವರಿಗೆ ಪಕ್ಷದಿಂದ ನೀಡಿರುವ ಸ್ಥಾನಮಾನ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡ ಉಪ್ಪನಹಳ್ಳಿ ಶಿವಣ್ಣ ಮಾತನಾಡಿ, ನಮ್ಮ ಪಕ್ಷದ ಕೆಲವು ತಾ.ಪಂ. ಹಾಗೂ ಜಿ.ಪಂ.ಸದಸ್ಯರು ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಕೆ.ಪಿ.ಸಿ.ಸಿ. ಸದಸ್ಯ ಅಕ್ಬರ್ ಅಲೀಂ, ಜಿ.ಪಂ.ಸದಸ್ಯರಾದ ಲತಾ ಸಿದ್ದಶೆಟ್ಟಿ , ಪುಷ್ಪಾ ನಾಗೇಶ್ ರಾಜ್, ತಾ.ಪಂ ಸದಸ್ಯ ಮೂಗಶೆಟ್ಟಿ, ಎ.ಪಿ.ಎಂ.ಸಿ. ಅಧ್ಯಕ್ಷ ಮಾದಪ್ಪ, ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರಸಭೆ ಅಧ್ಯಕ್ಷೆ ಪುಪ್ಪಲತಾ, ಉಪಾಧ್ಯಕ್ಷ ಪ್ರದೀಪ್, ಸದಸ್ಯರಾದ ಸಿ.ಎಂ.ಶಂಕರ್, ಚಂದ್ರಶೇಖರ್,  ಜಗದೀಶ್, ಎಂ.ಶ್ರೀಧರ್, ಗಂಗಾಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry