ಆಲಮಟ್ಟಿ: ಫಲಕೊಟ್ಟ ನೀರು ನಿರ್ವಹಣೆ ತಂತ್ರ

7
ಜಲಾಶಯದಲ್ಲಿ ಕಳೆದ ಬಾರಿಗಿಂತ ಹೆಚ್ಚು ನೀರು; ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಲಿಲ್ಲ

ಆಲಮಟ್ಟಿ: ಫಲಕೊಟ್ಟ ನೀರು ನಿರ್ವಹಣೆ ತಂತ್ರ

Published:
Updated:
ಆಲಮಟ್ಟಿ: ಫಲಕೊಟ್ಟ ನೀರು ನಿರ್ವಹಣೆ ತಂತ್ರ

ಆಲಮಟ್ಟಿ: ಕಳೆದ ಬಾರಿ ಬೇಸಿಗೆಯಲ್ಲಿ ಡೆಡ್‌ಸ್ಟೋರೇಜ್ ಮಟ್ಟಕ್ಕಿಂತ ಮೂರು ಮೀಟರ್‌ಗೂ ಕಡಿಮೆ ಮಟ್ಟಕ್ಕೆ ಕುಸಿದಿದ್ದ ಆಲಮಟ್ಟಿ ಜಲಾಶಯದ ಮಟ್ಟ ಈ ಬಾರಿ ಬೇಸಿಗೆ ಕೊನೆಯಲ್ಲೂ ಡೆಡ್‌ ಸ್ಟೋರೇಜ್‌ ಮಟ್ಟಕ್ಕಿಂತ ಒಂದೂವರೆ

ಮೀಟರ್‌ ಹೆಚ್ಚು ನೀರು ಜಲಾಶಯದಲ್ಲಿದೆ.

2017ರ ಬೇಸಿಗೆಯಲ್ಲಿ ಡೆಡ್‌ ಸ್ಟೋರೇಜ್ ಮಟ್ಟಕ್ಕಿಂತಲೂ (506.82 ಮೀ ಡೆಡ್‌ಸ್ಟೋರೇಜ್ ಮಟ್ಟ) ಮೂರು ಮೀಟರ್ ಕೆಳಕ್ಕೆ ಅಂದರೆ 503.20 ಮೀವರೆಗೆ ನೀರು ಕುಸಿದಿತ್ತು. ಆಲಮಟ್ಟಿ ಜಲಾಶಯದ ನೀರನ್ನೇ ನಂಬಿದ್ದ ಹಲವಾರು ಹಳ್ಳಿ, ನಗರಗಳ ಕುಡಿಯುವ ನೀರಿನ ಜಾಕವೆಲ್‌ಗಳಿಗೆ ನೀರಿನ ಕೊರತೆಯಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿತ್ತು.

‘2017ರ ಜುಲೈನಿಂದಲೇ ನೀರು ನಿರ್ವಹಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದರ ಪರಿಣಾಮ ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲಿಲ್ಲ. ನೀರಾವರಿಗೆ ಹರಿಸುವ ನೀರನ್ನು ಈ ಬಾರಿ ವಾರಾಬಂಧಿ ಪದ್ಧತಿ ಅಳವಡಿಸಿ ನೀರು ಹರಿಸಲಾಗಿದೆ. ಅತ್ಯಂತ ಕಟ್ಟುನಿಟ್ಟಿನ ಕ್ರಮ ಅಳವಡಿಸಿ, ಮಾರ್ಚ್‌ 31ರವರೆಗೆ 12 ದಿನ ಚಾಲು, 11 ದಿನ ಬಂದ್ ಎಂಬ ವಾರಾಬಂಧಿ ಅನುಗುಣವಾಗಿ ನೀರು ಹರಿಸಿದರೂ ಜಲಾಶಯದಲ್ಲಿ ನೀರಿನ ಕೊರತೆಯಾಗಲಿಲ್ಲ’ ಎಂದು ಕೆಬಿಜೆಎನ್ಎಲ್ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ನೀರು ಸಂಗ್ರಹ: ನೀರಾವರಿ ಉದ್ದೇಶಕ್ಕಾಗಿ ಇರುವ ಜಲಾಶಯಗಳಲ್ಲಿ ಈ ಬಾರಿ ಮೇ 28ರ ಅಂತ್ಯಕ್ಕೆ ಅತಿ ಹೆಚ್ಚು ನೀರು ಸಂಗ್ರಹವಿರುವ ಜಲಾಶಯ ಆಲಮಟ್ಟಿಯಾಗಿದೆ.

ತುಂಗಭದ್ರಾ, ಕೆಆರ್‌ಎಸ್, ಭದ್ರಾ, ವರಾಹಿ, ಕಬಿನಿ, ನಾರಾಯಣಪುರ, ಮಲಪ್ರಭಾ, ಘಟಪ್ರಭಾ ಮೊದಲಾದ ನೀರಾವರಿ ಜಲಾಶಯಗಳಲ್ಲಿನ ನೀರಿನ ಸಂಗ್ರಹವನ್ನು ಗಮನಿಸಿದಾಗ ಆಲಮಟ್ಟಿಯಲ್ಲಿ ಅತಿ ಹೆಚ್ಚು ಅಂದರೆ 21.426 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ವಿದ್ಯುತ್ ಉತ್ಪಾದನೆಗೆ ಮೀಸಲಾಗಿರುವ ಲಿಂಗನಮಕ್ಕಿ, ಸೂಫಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಆದರೆ ಆ ಜಲಾಶಯಗಳಿಂದ ನೀರಾವರಿ ವ್ಯಾಪ್ತಿಯಿಲ್ಲ. ಹೀಗಾಗಿ ನೀರಾವರಿಗಾಗಿ ಇರುವ ರಾಜ್ಯದ ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಗಮನಿಸಿದರೆ ಆಲಮಟ್ಟಿಯಲ್ಲಿಯೇ ಅತಿ ಹೆಚ್ಚು ಸಂಗ್ರಹವಿದೆ ಎನ್ನಲಾಗಿದೆ.

ಮೇ ಅಂತ್ಯಕ್ಕೆ ಇರುವಂತೆ ಕಳೆದ ಏಳು ವರ್ಷಗಳ ಆಲಮಟ್ಟಿ ಜಲಾಶಯದ ಮಟ್ಟವನ್ನು ಗಮನಿಸಿದಾಗ (2011 ರ ನಂತರ) ಅತಿ ಹೆಚ್ಚು ನೀರು ಇರುವುದು ಇದೇ ವರ್ಷ ಎಂದು ಅಧಿಕಾರಿಗಳು ತಿಳಿಸಿದರು. 2011ರಲ್ಲಿ ಮಾತ್ರ ಮೇ ಅಂತ್ಯಕ್ಕೆ ಜಲಾಶಯದ ಮಟ್ಟ 509.50 ಮೀ.ವರೆಗೆ ಇತ್ತು.

ಈ ಬಾರಿ ಆಗಲಿಲ್ಲ ನೀರಿನ ಕೊರತೆ: ‘ಈ ಬಾರಿ ಆಲಮಟ್ಟಿ ಜಲಾಶಯದ ಡೆಡ್‌ ಸ್ಟೋರೇಜ್ ಮಟ್ಟ 506.82 ಇದ್ದು, ಆ ಮಟ್ಟಕ್ಕೆ ವಿವಿಧ ಪಟ್ಟಣ, ಹಳ್ಳಿಗಳ ಕುಡಿಯುವ ನೀರು ಪೂರೈಕೆಯ ಜಾಕ್‌ವೆಲ್‌ಗಳು ಅದೇ ಮಟ್ಟಕ್ಕೆ ಇವೆ. ಆದರೆ ಜಲಾಶಯದಲ್ಲಿ 508.16 ಮೀ ವರೆಗೆ ನೀರು ಸಂಗ್ರಹವಿದೆ. ಹೀಗಾಗಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಲಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ಹಂಗಾಮು ಆರಂಭಗೊಳ್ಳುವ ನಿರೀಕ್ಷೆಯಿದ್ದು, ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗಲಿದೆ, ನೀರು ನಿರ್ವಹಣೆಯಲ್ಲಿ ಅತ್ಯಂತ ವೈಜ್ಞಾನಿಕವಾಗಿ, ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗಿದೆ’ ಎಂದು ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎ. ಇನಾಮದಾರ ತಿಳಿಸಿದರು.

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry