ಸಕಾಲಕ್ಕೆ ರಸಗೊಬ್ಬರ ಪೂರೈಕೆಯಾಗಲಿ– ಪರಿವಾಣ

4
ಅಖಂಡ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ

ಸಕಾಲಕ್ಕೆ ರಸಗೊಬ್ಬರ ಪೂರೈಕೆಯಾಗಲಿ– ಪರಿವಾಣ

Published:
Updated:

ಶಹಾಪುರ: ಮುಂಗಾರು ಹಂಗಾಮಿನ ಬೆಳೆಗಳಿಗೆ ಸಕಾಲಕ್ಕೆ ರಸಗೊಬ್ಬರ ಹಾಗೂ ಗುಣಮಟ್ಟದ ಬೀಜ ಪೂರೈಕೆಯಾಗುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಜಾಗೃತಗೊಳ್ಳಬೇಕು. ಕಳಪೆ ಬೀಜ ಮಾರಾಟವಾಗದಂತೆ ಎಚ್ಚರಿಕೆವಹಿಸಬೇಕು ಎಂದು ಆಗ್ರಹಿಸಿ ಸೋಮವಾರ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಚರಬಸವೇಶ್ವರ ಕಮಾನ ಬಳಿ ಪ್ರತಿಭಟನೆ ನಡೆಸಿದರು.

‘ಉತ್ತಮ ಮಳೆ ಬಂದರೆ ಸಾಕು ರೈತರು ಬಿತ್ತನೆಗೆ ಸಜ್ಜಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹಾಗೂ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ತಕ್ಷಣ ಹೊಸ ಸಾಲ ನೀಡಿ, ರೈತರ ನೆರವಿಗೆ ಮುಂದಾಗಬೇಕು. ಇಲ್ಲದಿದ್ದರೆ, ಬ್ಯಾಂಕ್‌ನ ಅಧಿಕಾರಿಗಳಿಂದ ಕಿರುಕುಳ ಶುರುವಾಗುತ್ತದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ತಿಳಿಸಿದರು.

‘ಎರಡು ತಿಂಗಳಿಂದ ಬೀಸುತ್ತಿರುವ ಗಾಳಿಗೆ ರೈತ ಜಮೀನುಗಳಲ್ಲಿ ಹಾಕಿದ ವಿದ್ಯುತ್ ಕಂಬ ಹಾಗೂ ವೈರ್ ನೆಲಕ್ಕೆ ಬಿದ್ದಿವೆ. ಜೆಸ್ಕಾಂ ಅಧಿಕಾರಿಗಳು ಗಮನಹರಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಅಧಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ವಂತಿಗೆ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಡ ರೈತರ ಮಕ್ಕಳನ್ನು ಶಾಲೆಗೆ ಕಳಹಿಸುವುದು ದುಸ್ತರವಾಗಿದೆ. ಇನ್ನೂ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಶಾಲೆಗೆ ಬರುವುದೆ ಅಪರೂಪ. ಪಾಠ ಮಾಡುವುದೆ ಅನುಮಾನ. ಕಡ್ಡಾಯವಾಗಿ ಶಿಕ್ಷಕರು ಶಾಲೆಗೆ ತೆರಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಡಿಕೊಳ್ಳಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದರು.

ಮುಖಂಡರಾದ ಭೀಮಣ್ಣಗೌಡ ಹುಲಕಲ್, ಸಿದ್ರಾಮರಡ್ಡಿ ಮದರಕಲ್, ಭೀಮಾಶಂಕರ ಸಲಾದಪೂರ, ಚಂದ್ರಶೇಖರ ಸಲಾದಪೂರ, ಮಲ್ಲಣ್ಣ ಮುಡಬೂಳ, ಮಲ್ಲಪ್ಪ ತಡಿಬಿಡಿ, ಲಾಲಸಾಹೇಬ ಚೌದ್ರಿ, ಚಂದ್ರಶೇಖರ ಬ್ಯಾರಿ, ಶರಣಗೌಡ, ಮುದಕಪ್ಪ ಮದ್ರಿಕಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry