‘ರೈತರಿಗೆ ನೇರ ದಿಟ್ಟತನ ಕಲಿಸಿದ ಸಂಸ್ಥೆ’

7
‌ಚನ್ನಪಟ್ಟಣ ತಾಲ್ಲೂಕು ವಿವಿಧ ಗ್ರಾಮಗಳಲ್ಲಿ ರೈತಸಂಘದ ಶಾಖೆಗಳ ಉದ್ಘಾಟನೆ

‘ರೈತರಿಗೆ ನೇರ ದಿಟ್ಟತನ ಕಲಿಸಿದ ಸಂಸ್ಥೆ’

Published:
Updated:

ಚನ್ನಪಟ್ಟಣ: ರೈತಸಂಘವು ದೇಶ ಮತ್ತು ರಾಜ್ಯದಲ್ಲಿ ಜಾಗೃತಿ ಹಾಗೂ ಶಕ್ತಿಯುತ ವಿರೋಧ ಪಕ್ಷವಾಗಿ ಆಳುವ ಸರ್ಕಾರಗಳಿಗೆ ಎಚ್ಚರಿಕೆ ಗಂಟೆಯಾಗಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.

ತಾಲ್ಲೂಕಿನ ಶ್ಯಾನುಭೋಗನಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಅಂಚೀಪುರ, ಹೊನ್ನಿಗನಹಳ್ಳಿ, ಮಾದೇಗೌಡನದೊಡ್ಡಿ, ಜಗದಾಪುರ, ಜೆ.ಬ್ಯಾಡರಹಳ್ಳಿ ಗ್ರಾಮಗಳಲ್ಲಿ ಭಾನುವಾರ ರೈತ ಸಂಘದ ನೂತನ ಶಾಖೆಗಳನ್ನು ಉದ್ಘಾಟಿಸಿ ಬ್ಯಾಡರಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ನಡು ಬಗ್ಗಿಸಿ, ಧ್ವನಿ ತಗ್ಗಿಸಿ, ದೈನ್ಯ ಸ್ಥಿತಿಯಲ್ಲಿದ್ದ ಅನ್ನದಾತರಿಗೆ, ಎದೆಯುಬ್ಬಿಸಿ, ದಿಟ್ಟತನ ಹಾಗೂ ಸ್ವಾಭಿಮಾನದ ಕಿಡಿಯಾಗಿ ಬದುಕಲು ಕಲಿಸಿದ್ದು ರಾಜ್ಯ ರೈತ ಸಂಘ ಎಂಬುದು ಹೆಮ್ಮೆಯ ವಿಷಯ. ಎಚ್.ಎಸ್.ರುದ್ರಪ್ಪ, ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ಹುಟ್ಟಿದ ಈ ಚಳವಳಿ ಸ್ವಾತಂತ್ರ್ಯ ಚಳವಳಿಯ ನಂತರ ಬಹುದೊಡ್ಡ ಚಳವಳಿಯಾಗಿದೆ ಎಂದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ಸರ್ಕಾರಗಳು ಹಾಗೂ ಭ್ರಷ್ಟ ಅಧಿಕಾರಿಗಳ ದುರ್ವತನೆಯಿಂದ ನೊಂದ ಜನರ ಆಕ್ರೋಶ ಸ್ಪೋಟಗೊಂಡು ಅಸ್ತಿತ್ವಕ್ಕೆ ಬಂದಿದ್ದು ರೈತ ಸಂಘಟನೆ. ರೈತರು ಸಂಕಷ್ಟದಲ್ಲಿದ್ದರೂ ರೈತರಿಗೆ ನೀಡುವ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆಯಲ್ಲಿ ತಾರತಮ್ಯ ಮಾಡುತ್ತಿವೆ. ಯಾವುದೇ ಪಕ್ಷಗಳಾಗಲೀ ರೈತರ ಏಳಿಗೆಗಾಗಿ ಶ್ರಮಿಸುವುದನ್ನು ಬಿಟ್ಟು ತಮ್ಮ ಹಿತಾಸಕ್ತಿಗಾಗಿ ಹೋರಾಡುತ್ತಿವೆ. ರೈತರು ತಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಪ್ರತಿಯೊಂದು ಗ್ರಾಮದಲ್ಲಿಯೂ ರೈತ ಸಂಘ ಶಾಖೆ ಹುಟ್ಟು ಹಾಕಿ ಹೋರಾಟದ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ, ಹಿರಿಯ ಮುಖಂಡ ಸಿದ್ದೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಕೃಷ್ಣಯ್ಯ, ಸಚಿನ್ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಪಿ.ವಿಜಯಕುಮಾರ್, ಅಬ್ಬೂರುದೊಡ್ಡಿ ಎ.ಆರ್.ವೆಂಕಟಪ್ಪ, ಹುಲುವಾಡಿ ಎಚ್.ಪಿ.ಪ್ರಕಾಶ್, ಚಿಕ್ಕನದೊಡ್ಡಿ ಶಿವಪ್ಪ ಭಾಗವಹಿಸಿದ್ದರು.

**

ಇಂತಹ ದೊಡ್ಡ ಚಳವಳಿ ಹಾಗೂ ಸುದೀರ್ಘ ಅವಧಿಯ ಚಳವಳಿಯ ನಿರಂತರತೆಗೆ ರಾಜ್ಯದ ಹಲವು ರೈತ ನಾಯಕರ ತ್ಯಾಗ ಬಲಿದಾನವಿದೆ. ಈ ಸಂಘಟನೆಯನ್ನು ಪ್ರತಿಯೊಬ್ಬ ರೈತರು ಬೆಂಬಲಿಸಿ ಶಕ್ತಿ ತುಂಬಬೇಕು

ಚಾಮರಸಮಾಲಿ ಪಾಟೀಲ್, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry