‘6ತಿಂಗಳಲ್ಲಿ ಮನೆ ನಿರ್ಮಿಸದಿದ್ದರೆ ಅನುದಾನ ರದ್ದು’

7
ಅಂಬೇಡ್ಕರ್ ಆವಾಸ್‌ ಯೋಜನೆ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯ ಫಲಾನುಭವಿಗಳ ಸಭೆ

‘6ತಿಂಗಳಲ್ಲಿ ಮನೆ ನಿರ್ಮಿಸದಿದ್ದರೆ ಅನುದಾನ ರದ್ದು’

Published:
Updated:
‘6ತಿಂಗಳಲ್ಲಿ ಮನೆ ನಿರ್ಮಿಸದಿದ್ದರೆ ಅನುದಾನ ರದ್ದು’

ರಾಮನಗರ: ವಸತಿ ಯೋಜನೆಗಳ ಫಲಾನುಭವಿಗಳು ಅನುದಾನ ಪಡೆದ ಆರು ತಿಂಗಳ ಒಳಗೆ ಮನೆ ನಿರ್ಮಾಣ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅನುದಾನವು ರದ್ದಾಗಿ ಸರ್ಕಾರಕ್ಕೆ ವಾಪಸ್ ಆಗುತ್ತದೆ ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ಎಚ್ಚರಿಸಿದರು.

ನಗರಸಭಾ ಕಚೇರಿಯಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಆವಾಸ್‌ ಯೋಜನೆ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಫಲಾನುಭವಿಗಳ ಕುಂದು-ಕೊರತೆಯ ವಿಚಾರಣಾ ಸಭೆಯಲ್ಲಿ ಅವರು ಮಾತನಾಡಿದರು.

ಫಲಾನುಭವಿಗಳು ಅರ್ಜಿಯಲ್ಲಿ ತಿಳಿಸಿರುವ ವಿಸ್ತೀರ್ಣಕ್ಕಿಂತ ಹೆಚ್ಚು ಹಾಗೂ ಬಹು ಮಹಡಿಗಳ ಕಟ್ಟಡವನ್ನು ಕಟ್ಟುತ್ತಿದ್ದರೆ ಅಂತಹವರಿಗೆ ಬಿಡುಗಡೆ ಮಾಡಲಾಗಿರುವ ಹಣವನ್ನು ತಡೆ ಹಿಡಿಯಲಾಗುವುದು. ಬಿಡುಗಡೆ ಮಾಡಲಾಗಿರುವ ಹಣಕ್ಕೆ ಶೇ.11ರಷ್ಟು ಬಡ್ಡಿ ವಿಧಿಸಿ ಸರ್ಕಾರದಿಂದ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಯೋಜನೆಯಲ್ಲಿ ನಿಗದಿಗೊಳಿಸಿರುವ ವಿಸ್ತೀರ್ಣಕ್ಕನುಗುಣವಾಗಿ ಮನೆಗಳನ್ನು ನಿರ್ಮಾಣ ಮಾಡಬೇಕು. ಸಾಕಷ್ಟು ಫಲಾನುಭವಿಗಳು ಇರುವ ಮನೆಯನ್ನು ನವೀಕರಣಗೊಳಿಸಲು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುತ್ತಾರೆ. ಅಂತಹವರಿಗೆ ಮುಂದಿನ ಕಂತುಗಳಲ್ಲಿ ದೊರೆಯಬಹುದಾದ ಹಣವನ್ನು ತಡೆ ಹಿಡಿದು ನೀಡಲಾಗಿರುವ ಹಣವನ್ನು ವಸೂಲಿ ಮಾಡಲು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿವಾದವಿರುವ ನಿವೇಶನಗಳ ಬಗ್ಗೆ ಎಚ್ಚರಿಕೆ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾರಸಿ ಹಾಕಿಕೊಳ್ಳಲು ಯೋಜನೆಯಲ್ಲಿ ನೀಡಲಾಗುವ ಹಣ ಸಾಲದಿದ್ದ ಪಕ್ಷದಲ್ಲಿ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಿಸಿದ ಕಚೇರಿಯ ಸಿಬ್ಬಂದಿಗೆ ನೀಡಿದರೆ ಹೆಚ್ಚಿನ ಹಣಕ್ಕಾಗಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುವುದು. ತಾರಸಿ ಹಾಕಿಕೊಳ್ಳಲು ಅಸಾಯಕರಾದ ಯೋಜನೆಯ ಫಲಾನುಭವಿಗಳು ಜಂಕ್ ಶೀಟ್‌ ಚಾವಣಿಗಳನ್ನು ಬಳಸುವುದು ಉತ್ತಮ. ಆಯ್ಕೆಯಾದ ಫಲಾನುಭವಿ ಪಾಯ ಕಟ್ಟದ ಹೊರತು ಯಾವುದೇ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿ ಮನೆ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ತಟಸ್ಥರಾದರೆ ಅಂತಹ ಫಲಾನುಭವಿಯನ್ನು ಮುಂದೆ ನಗರಸಭೆಯ ಯಾವುದೇ ಯೋಜನೆಗೆ ಪರಿಗಣಿಸಲಾಗುವುದಿಲ್ಲ. ಯೋಜನೆಯ ಫಲಾನುಭವಿಗಳು ಆರು ತಿಂಗಳಲ್ಲಿ ಸಂಪೂರ್ಣಗೊಳಿಸಿರುವ ವಸತಿಯ ಭಾವಚಿತ್ರ ಮತ್ತು ದಾಖಲಾತಿಗಳನ್ನು ಕಚೇರಿಯ ಅಧಿಕಾರಿಗಳಿಗೆ ನೀಡಿದಲ್ಲಿ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ, ಕಳೆದ ಎರಡು ಸಾಲಿನಲ್ಲಿ ವಸತಿ ಯೋಜನೆಗಳ ಫಲಾನುಭವಿಗಳಿಗೆ ಕಚೇರಿಯಿಂದ ಬಿಡುಗಡೆ ಮಾಡಿರುವ ಅನುದಾನವನ್ನು ಪರಿಶೀಲಿಸಲಾಗುವುದು. ಮನೆ ನಿರ್ಮಾಣವಾಗಿದ್ದರೂ ಅನುದಾನ ಬಿಡುಗಡೆ ಆಗದೇ ಇದ್ದಲ್ಲಿ ಅದಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.

ಯೋಜನೆಯಲ್ಲಿ ಆಯ್ಕೆಯಾಗಿ ಮನೆ ನಿರ್ಮಿಸುತ್ತಿರುವ ಫಲಾನುಭವಿಗಳು ತಮಗೆ ಅನುದಾನ ಬಿಡುಗಡೆ ಹಾಗೂ ಇನ್ನಿತರ ಅನುಮೋದನೆಗೆ ಕಚೇರಿಯ ಸಿಬ್ಬಂದಿ ಸ್ಪಂದಿಸದಿದ್ದಲ್ಲಿ ಅಂತಹವರ ವಿರುದ್ಧ ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು. ನಗರಸಭೆಯ ಲೆಕ್ಕ ಪರಿಶೋಧಕ ಶಿವಣ್ಣ, ವ್ಯವಸ್ಥಾಪಕಿ ಸುಮಾ, ಸಿಬ್ಬಂದಿಯಾದ ಶ್ರೀಧರ್, ನಂಜುಂಡ ಇದ್ದರು.

ಕೆಲವರಿಂದ ಅಹವಾಲು ಸಲ್ಲಿಕೆ

ಸಭೆಯಲ್ಲಿ ವಿವಿಧ ಯೋಜನೆಗಳ ನೂರಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡರು. `ಆಯ್ಕೆಯಾಗಿ ಆರು ತಿಂಗಳಾದರೂ ಇನ್ನೂ ಸಹ ಹಣ ಬಿಡುಗಡೆಯಾಗಿಲ್ಲ’ ಎಂದು ಕೆಲವರು ಅಹವಾಲು ಸಲ್ಲಿಸಿದರು. ‘ಎಲ್ಲವೂ ಮುಗಿದಿದ್ದರೂ ತಾರಸಿ ಹಾಕಲು ಬರಬೇಕಾಗಿರುವ ಬಾಕಿ ಹಣ ಬಿಡುಗಡೆಯಾಗಿಲ್ಲ’ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಮತ್ತೆ ಕೆಲವರು ‘ಮನೆ ಕಟ್ಟಿ ಮುಗಿಸಿ ಭಾವಚಿತ್ರ ಮತ್ತು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದರೂ ಯೋಜನೆಯ ಕೊನೆಯ ಕಂತು ಇನ್ನೂ ಸಹ ಬಿಡುಗಡೆಯಾಗಿಲ್ಲ’ ಎಂದು ದೂರಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಹಾಗೂ ಅಧ್ಯಕ್ಷರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry