4
ಮೂಗು ಮುಚ್ಚಿ ಓಡಾಡುತ್ತಿರುವ ಜನರು, ವ್ಯಾಪಾರಿಗಳು ಪರದಾಟ

ಗಬ್ಬೆದ್ದು ನಾರುತ್ತಿದೆ ತರಕಾರಿ ಮಾರುಕಟ್ಟೆ

Published:
Updated:
ಗಬ್ಬೆದ್ದು ನಾರುತ್ತಿದೆ ತರಕಾರಿ ಮಾರುಕಟ್ಟೆ

ಮಂಡ್ಯ: ನಗರದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದರೆ ಕೊಳಚೆ ನೀರಿನ ರಾಡಿ ಮೈಗೆ ತಾಕುತ್ತದೆ. ಸಹಿಸಲಾಗದ ದುರ್ವಾಸನೆ ಮೂಗಿಗೆ ರಾಚುತ್ತದೆ. ಜನರು ಮೂಗುಮುಚ್ಚಿಕೊಂಡು ಓಡಾಡುತ್ತಿದ್ದರೆ ವ್ಯಾಪಾರಿಗಳು ನರಕಸದೃಶ ವಾತಾವರಣದಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಮಳೆ ಬಂದರೆ ತರಕಾರಿ ಮಾರುಕಟ್ಟೆಯಲ್ಲಿ ದುರ್ವಾಸನೆ ಸಾಮಾನ್ಯ ಎಂಬ ವಾತಾವರಣ ಇದೆ. ರೈಲ್ವೆ ಗೇಟ್‌ನಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಕಚೇರಿವರೆಗೂ ದುರ್ವಾಸನೆ ಹರಡಿದ್ದು ಜನರ ಪರದಾಟ ಹೇಳತೀರದಾಗಿದೆ. ವ್ಯಾಪಾರಿಗಳು ಕೊಳೆತ ತರಕಾರಿಯನ್ನು ರೈಲ್ವೆ ಹಳಿ ಪಕ್ಕದಲ್ಲಿ ಸುರಿಯುತ್ತಿರುವ ಕಾರಣ ವಾಸನೆ ಇಮ್ಮಡಿಯಾಗಿದೆ. ಹೂವು ಮಾರಾಟ ಮಳಿಗೆಯ ಬಳಿ ಅತೀ ಹೆಚ್ಚು ದುರ್ವಾಸನೆ ಉಂಟಾಗಿದ್ದು, ವ್ಯಾಪಾರಿಗಳು ಮೂಗಿಗೆ ಬಟ್ಟೆ ಸುತ್ತಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮಳೆ ನೀರು ರಸ್ತೆಯಲ್ಲಿ ನಿಂತಿದೆ. ರಾಡಿ ನೀರು ಹಾರುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

‘ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದಷ್ಟು ದುರ್ವಾಸನೆ ಅನುಭವಿಸಬೇಕಾಗಿದೆ. ಎಲ್ಲರೂ ಮಳೆ ಬೇಕು ಎಂದು ಬೇಡುತ್ತಾರೆ. ಆದರೆ ನಮಗೆ ಮಳೆ ಬಂದರೆ ವಹಿವಾಟು ನಿಂತು ಹೋಗುತ್ತದೆ. ನಗರಸಭೆ ಅಧಿಕಾರಿಗಳು ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಮಾರುಕಟ್ಟೆಯ ಈ ಸ್ಥಿತಿ ನೋಡಿ ಜನರು ಮಾರುಕಟ್ಟೆಗೆ ಬರುತ್ತಿಲ್ಲ. ನಮಗೆ ವ್ಯಾಪಾರವೂ ಆಗದೆ ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಹೂವಿನ ವ್ಯಾಪಾರಿ ಮಹೇಶ್‌ ಹೇಳಿದರು.

ಇಲ್ಲದ ಚರಂಡಿ: ರೈಲು ಹಳಿ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ಕಾಂಪೌಂಡ್‌ ಪಕ್ಕದಲ್ಲೇ ಚರಂಡಿ ಇದೆ. ಆದರೆ ಆ ಚರಂಡಿಯಲ್ಲಿ ನೀರು ಹರಿಯುತ್ತಿಲ್ಲ. ವ್ಯಾಪಾರಿಗಳು ಚರಂಡಿ ಮೇಲೆಯೇ ತರಕಾರಿ ಮಾರಾಟ ಮಾಡುತ್ತಿದ್ದು ಚರಂಡಿ ಮುಚ್ಚಿ ಹೋಗಿದೆ. ಹೀಗಾಗಿ ಮಳೆ ಬಿದ್ದಾಗ ನೀರು ಹರಿಯಲು ಸಾಧ್ಯವಾಗದೇ ಅಲ್ಲೇ ನಿಂತಿರುತ್ತದೆ. ನಿಂತ ನೀರಿನಿಂದ ದುರ್ವಾಸನೆ ಉಂಟಾಗುತ್ತಿದೆ.

ಈಚೆಗೆ ನಗರಸಭೆ ಕಾಲುವೆ ತೋಡಿಸಿತ್ತು. ಆದರೆ ಮೇಲೆ ಕಲ್ಲು ಹಾಸು ಅಳವಡಿಸದ ವ್ಯಾಪಾರಿಗಳು ಮತ್ತೆ ಕಾಲುವೆಯ ಮೇಲೆ ವ್ಯಾಪಾರ ಆರಂಭಿಸಿದರು. ಮತ್ತೆ ಚರಂಡಿ ಮುಚ್ಚಿಹೋಯಿತು.

‘ಎಲ್ಲೆಂದರಲ್ಲಿ ನೀರು ನಿಂತಿರುವ ಕಾರಣ ನಮಗೆ ರೋಗಭೀತಿ ಎದುರಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಗಾನ ಆರಂಭವಾಗುತ್ತದೆ. ಸೂಕ್ತ ಬೆಳಕಿನ ವ್ಯವಸ್ಥೆಯೂ ಇಲ್ಲ. ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯನ್ನು ನಗರಸಭೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿಲ್ಲ’ ಎಂದು ವ್ಯಾಪಾರಿಗಳ ಸಂಘದ ಸದಸ್ಯ ಶಂಕರಪ್ಪ ಹೇಳಿದರು.

ನನೆಗುದಿಗೆ ಬಿದ್ದ ಕಾಮಗಾರಿ: ತಕರಾರಿ ಮಾರುಕಟ್ಟೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ 2007ರಲ್ಲಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ₹ 6.5 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಕಾಮಗಾರಿ ನಡೆಯುವವರೆಗೆ ತಾತ್ಕಾಲಿಕವಾಗಿ ವಹಿವಾಟು ನಡೆಸಲು ₹ 26 ಲಕ್ಷ ವೆಚ್ಚದಲ್ಲಿ ಪೇಟೆಬೀದಿಯ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಾಣ ಮಾಡಲಾಗಿತ್ತು. ಆದರೆ ವ್ಯಾಪಾರಿಗಳು ಅಲ್ಲಿಗೆ ತಮ್ಮ ಅಂಗಡಿಗಳನ್ನು ಸ್ಥಳಾಂತರಿಸಲು ಹಿಂದೇಟು ಹಾಕಿದರು. ಹೊಸ ಮಾರುಕಟ್ಟೆ ಕಾಮಗಾರಿಯೂ ಆರಂಭವಾಗಲಿಲ್ಲ. ಹೀಗಾಗಿ ಕಾಮಗಾರಿ ನನೆಗುದಿಗೆ ಬಿತ್ತು. ಈಗ ಮಾರುಕಟ್ಟೆ ನಿರ್ಮಾಣ ಸವಾಲಾಗಿ ಪರಿಣಮಿಸಿದ್ದು, ಕಾಮಗಾರಿ ವೆಚ್ಚ ಐದು ಪಟ್ಟು ಹೆಚ್ಚಾಗಲಿದೆ.

‘ಈಗ ಎಂ.ಶ್ರೀನಿವಾಸ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಮನವೊಲಿಸಿ ಆದ್ಯತೆಯ ಮೇರೆಗೆ ಹೊಸ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಒತ್ತಾಯಿಸಲಾಗುವುದು. ಶೀಘ್ರ ಶಾಸಕನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡುತ್ತೇನೆ’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry