ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌– ಎತ್ತಿನ ಬಂಡಿ ಮೆರವಣಿಗೆ

ಕೋಲಾರ: ತೈಲೋತ್ಪನ್ನಗಳ ಬೆಲೆ ಏರಿಕೆಗೆ ಖಂಡಿಸಿ ರೈತ ಸಂಘ, ಹಸಿರು ಸೇನೆ ಧರಣಿ
Last Updated 30 ಮೇ 2018, 12:09 IST
ಅಕ್ಷರ ಗಾತ್ರ

ಕೋಲಾರ: ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಮಂಗಳವಾರ ಸೈಕಲ್‌ ಹಾಗೂ ಎತ್ತಿನ ಬಂಡಿಗಳ ಮೆರವಣಿಗೆ ಮಾಡಿ ಧರಣಿ ನಡೆಸಿದರು.

ನಚಿಕೇತ ವಿದ್ಯಾರ್ಥಿನಿಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಬಂದ ಧರಣಿನಿರತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರು ಗತಿಯಲ್ಲಿ ಸಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರವು ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಲೀಟರ್‌ ಪೆಟ್ರೋಲ್‌ ಬೆಲೆ ₹ 80 ಹಾಗೂ ಡೀಸೆಲ್‌ ಬೆಲೆ ₹ 70ರ ಗಡಿ ದಾಟಿದೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹ 700ರ ಆಸುಪಾಸಿನಲ್ಲಿದೆ. ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಜನರ ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು, ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದರು.

ಕಷ್ಟದ ಅರಿವಿಲ್ಲ: ‘ಪ್ರಧಾನಿ ಮೋದಿ 4 ವರ್ಷಗಳಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿಲ್ಲ. ನೋಟು ಅಮಾನ್ಯೀಕರಣ ಕ್ರಮದಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಸಣ್ಣ ವ್ಯಾಪಾರಿಗಳು ಹಾಗೂ ಉದ್ದಿಮೆದಾರರು ಬೀದಿ ಪಾಲಾಗಿದ್ದಾರೆ’ ಎಂದು ಆರೋಪಿಸಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಅನುಗುಣವಾಗಿ ಬಸ್‌ ಪ್ರಯಾಣ ದರ ಹೆಚ್ಚಳವಾಗಿದೆ. ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ. ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ಕಿಡಿಕಾರಿದರು.

ಬೀದಿಗಿಳಿದು ಹೋರಾಟ: ‘ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನ ಹಿಡಿಶಾಪ ಹಾಕುತ್ತಿದ್ದಾರೆ. ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸದಿದ್ದರೆ ದೇಶಕ್ಕೆ ಭವಿಷ್ಯದಲ್ಲಿ ಮತ್ತಷ್ಟು ಕಷ್ಟದ ದಿನಗಳು ಎದುರಾಗುತ್ತವೆ. ಜನ ಬೀದಿಗಿಳಿದು ಹೋರಾಟ ನಡೆಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಕೃಷ್ಣೇಗೌಡ, ಮುರಳಿ, ಮಂಜುನಾಥ್‌, ಸಾಗರ್‌, ಪ್ರತಾಪ್, ರಾಮಚಂದ್ರಪ್ಪ ಪಾಲ್ಗೊಂಡಿದ್ದರು.

**
ಸದಾ ವಿದೇಶ ಪ್ರವಾಸ ಮಾಡುವ ಪ್ರಧಾನಿ ಮೋದಿ ದೇಶದ ಆಂತರಿಕ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. ಕೇಂದ್ರವು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ
ಶ್ರೀನಿವಾಸ್, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT