7
ಜಿಲ್ಲೆಯಲ್ಲಿ ಅದ್ಧೂರಿ ಶಾಲೆ ಪ್ರಾರಂಭೋತ್ಸವ; ಪಠ್ಯಪುಸ್ತಕ ಪಡೆದು ಮುಗುಳ್ನಕ್ಕ ಚಿಣ್ಣರು

ಮೊದಲ ದಿನ ಪುಟಾಣಿಗಳ ‘ಹೂ’ ನಗೆ

Published:
Updated:
ಮೊದಲ ದಿನ ಪುಟಾಣಿಗಳ ‘ಹೂ’ ನಗೆ

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಅಧಿಕೃತವಾಗಿ ಆರಂಭಗೊಂಡ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಕೇಳಿಬಂತು. ಶಾಲೆಗೆ ಹೊಸದಾಗಿ ದಾಖಲಾದ ಮಕ್ಕಳನ್ನು ಶಿಕ್ಷಕರು ಗುಲಾಬಿ ಹೂವು ನೀಡಿ ಸ್ವಾಗತಿಸಿದ್ದು ಈ ಬಾರಿ ಶಾಲಾ ಪ್ರಾರಂಭೋತ್ಸವದ ವಿಶೇಷವಾಗಿತ್ತು.

ಶಾಲೆಗಳಲ್ಲಿ ಮೊದಲ ದಿನವೇ ವಿತರಿಸಿದ ಪಠ್ಯಪುಸ್ತಕಗಳನ್ನು ಪಡೆದ ಚಿಣ್ಣರು ಮುಗುಳ್ನಕ್ಕರು. ಇನ್ನು ಕೆಲವರು ಎರಡು ತಿಂಗಳ ದೀರ್ಘ ರಜೆಯಿಂದ ಇನ್ನೂ ಹೊರ ಬರದೆ, ಸಪ್ಪೆ ಮೋರೆ ಹಾಕಿದ್ದು ಕಂಡುಬಂತು.

ಖಾಸಗಿ ಶಾಲೆಗಳ ವ್ಯಾನ್‌ಗಳು ಬೆಳ್ಳಂಬೆಳಿಗ್ಗೆ ಮನೆಗಳ ಮುಂದೆ ಬಂದು ಶಬ್ದ ಮಾಡುತ್ತಿದ್ದಂತೆಯೇ ಪಾಲಕರು ತಮ್ಮ ಮಕ್ಕಳನ್ನು ಆತುರಾತುರವಾಗಿ ಶಾಲೆಗೆ ಕಳುಹಿಸಿಕೊಡುತ್ತಿದ್ದುದೂ ಸಾಮಾನ್ಯವಾಗಿತ್ತು.

ಸಿಹಿ ವಿತರಣೆ: ಶಾಲಾ ಪ್ರಾರಂಭೋತ್ಸವದ ಜಿಲ್ಲಾಮಟ್ಟದ ಕಾರ್ಯಕ್ರಮವು ತಾಲ್ಲೂಕಿನ ಚಿತ್ತಾಕುಲದ ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೆರವೇರಿತು. ಶಾಲೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಬಿಸಿಯೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಎಲ್ಲ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಈಗ ಎಲ್ಲ ಸೌಲಭ್ಯವೂ ದೊರೆಯುತ್ತಿದ್ದು, ಈ ಬಗ್ಗೆ ತಾತ್ಸಾರ ಭಾವನೆ ಬೇಡ’ ಎಂದು

ಹೇಳಿದರು. ‘ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದೆ. ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಅವರು ಕಾಳಜಿ ವಹಿಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸಂಸ್ಕಾರಯುತರಿಂದ ಮಾತ್ರ ದೇಶದ ಪ್ರಗತಿ ಸಾಧ್ಯ’ ಎಂದರು.

ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಕೆ.ಪ್ರಕಾಶ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನವನ್ನುಗಳಿಸಿಕೊಂಡಿದೆ. ಆ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಮುಂದುವರಿದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲದ ಸಾಧನೆಯನ್ನು ಮಾಡಿದ್ದಾರೆ’ ಎಂದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ರವೀಂದ್ರ ಪವಾರ್, ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಶ್ರೀಕಾಂತ ಹೆಗಡೆ ಉಪಸ್ಥಿತರಿದ್ದರು. ಶಾಲೆಗೆ ಹಾಜರಾಗಿದ್ದ ಮಕ್ಕಳಿಗೆ ಚಾಕಲೇಟು ಹಾಗೂ ಬಿಸಿ ಊಟ ನೀಡಲಾಯಿತು.

ಜಾಥಾ: ‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿ’, ‘ಸರ್ಕಾರಿ ಶಾಲೆಯಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ’ ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳಿಂದ ಜಾಥಾವನ್ನು ನಡೆಸಲಾಯಿತು. ಆ ಮೂಲಕ ವಿಶೇಷ ದಾಖಲಾತಿ ಆಂದೋಲನಕ್ಕೆ ಜಿಲ್ಲಾಮಟ್ಟದಲ್ಲಿ ಚಾಲನೆ ನೀಡಲಾಯಿತು.

**

ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಹಿಂದೆ ಇರಬಾರದು ಎನ್ನುವುದಕ್ಕಾಗಿ ಚಿತ್ತಾಕುಲ ಸರ್ಕಾರಿ ಶಾಲೆಗೆ ‘ಇ– ಶಿಕ್ಷಣ’ ವ್ಯವಸ್ಥೆ ಮಾಡಲಾಗುವುದು

- ರಾಜು ತಾಂಡೇಲ, ಚಿತ್ತಾಕುಲ ಗ್ರಾಮ ಪಂಚಾಯ್ತಿ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry