7
ಬೆಳ್ಳುಳ್ಳಿ ದರದಲ್ಲಿ ಕುಸಿತ; ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೆ ಬೆಳೆಗಾರರ ಒತ್ತಾಯ

ರಾಣೆಬೆನ್ನೂರು: 3,500 ಚೀಲ ಬೆಳ್ಳುಳ್ಳಿ ಆವಕ

Published:
Updated:
ರಾಣೆಬೆನ್ನೂರು: 3,500 ಚೀಲ ಬೆಳ್ಳುಳ್ಳಿ ಆವಕ

ರಾಣೆಬೆನ್ನೂರು: ನಗರದ ಎಪಿಎಂಸಿ ಉಪ ಪ್ರಾಂಗಣಕ್ಕೆ ಭಾನುವಾರ ಸುಮಾರು 3,500 ಚೀಲಕ್ಕೂ ಹೆಚ್ಚು ಬಿತ್ತನೆಯ ಬೆಳ್ಳುಳ್ಳಿ ಬೀಜ ಆವಕವಾಗಿದ್ದು, ಕ್ವಿಂಟಲ್‌ಗೆ ₹2,500 ರಿಂದ ₹3,500 ಸಾವಿರದಷ್ಟು ಕಡಿಮೆ ದರಕ್ಕೆ ಮಾರಾಟಗೊಂಡಿತು.

ಸುಮಾರು 400ಕ್ಕೂ ಹೆಚ್ಚು ಟಾಟಾ ಏಸ್‌, ಟಂಟಂ, ಲಾರಿಗಳಲ್ಲಿ ಬೆಳೆಗಾರರು ಬೆಳ್ಳುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ವೃತ್ತದವರೆಗೂ ವಾಹನಗಳು ಸರದಿಯಲ್ಲಿ ನಿಂತಿದ್ದವು.

ಉಪಪ್ರಾಂಗಣದದಲ್ಲಿ ಬೆಳ್ಳುಳ್ಳಿ ಚೀಲಗಳು ತುಂಬಿ ತುಳುಕುತ್ತಿದ್ದವು. ಮಾರುಕಟ್ಟೆಯ ರಸ್ತೆಯ ಎರಡೂ ಬದಿ ಮತ್ತು ಈರುಳ್ಳಿ, ತರಕಾರಿ, ಬೆಣ್ಣೆ ಮಾರುಕಟ್ಟೆಯಲ್ಲೂ ರೈತರು ಬೆಳ್ಳುಳ್ಳಿ ಚೀಲಗಳನ್ನಿಟ್ಟು ವ್ಯಾಪಾರಕ್ಕೆ ನಿಂತಿದ್ದರು.

ಕಳೆದ ವಾರಕ್ಕಿಂತ ಈ ಭಾನುವಾರ ಕ್ವಿಂಟಲ್‌ಗೆ ₹500 ದರ ಕಡಿಮೆಯಾಗಿತ್ತು. ಪುಡಿ ಬೆಳ್ಳುಳ್ಳಿ ₹1,500 ರಿಂದ ₹2,200, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹2,800 ದಿಂದ ₹3,500ವರೆಗೆ ದರ ಇದೆ ಎಂದು ವ್ಯಾಪಾರಸ್ಥರಾದ ಸುರೇಶ ನಂದೀಹಳ್ಳಿ ಮತ್ತು ಶಿವಣ್ಣ ಬನ್ನಿಹಟ್ಟಿ ತಿಳಿಸಿದರು.

ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತರು ಬೆಳ್ಳುಳ್ಳಿ ಬಿತ್ತನೆ ಬೀಜವನ್ನು ಮಾರುಕಟ್ಟೆಗೆ ತಂದಿದ್ದಾರೆ. ಇದನ್ನು ಹೆಚ್ಚಾಗಿ ರೈತರೇ ಖರೀದಿಸುತ್ತಾರೆ. ಅವರ ಜೊತೆ ವ್ಯಾಪಾರಿಗಳೂ ಇರುತ್ತಾರೆ. ಅಂದಾಜು 20 ಲಾರಿ ಲೋಡ್‌ನಷ್ಟು ಅಂದರೆ, 200 ಟನ್‌ಗೂ ಹೆಚ್ಚು ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದೆ ಎನ್ನುತ್ತಾರೆ ಹಲಗೇರಿಯ ರೈತ ಸಂಘದ ಮುಖಂಡ ಬಸಣ್ಣ ಕಡೂರ.

ಹಿರೇಕೆರೂರ, ಲಿಂಗಹಳ್ಳಿ, ಅಂತರವಳ್ಳಿ, ಆಲದಕಟ್ಟಿ, ಇಟಗಿ, ಹಲಗೇರಿ, ಕುಪ್ಪೆಲೂರ, ಚಳಗೇರಿ, ಕರೂರು, ಮೇಡ್ಲೇರಿ, ಐರಣಿ, ಬಿಲ್ಲಹಳ್ಳಿ, ಸುಣಕಲ್ಲಬಿದರಿ, ಜೋಯಿಸರಹರಳಳ್ಳಿ, ಯರೇಕುಪ್ಪಿ, ಅಸುಂಡಿ, ಹೂಲಿಹಳ್ಳಿ, ಹೆಡಿಯಾಲ, ಕೋಡ, ಮಾಗೋಡ, ಹಾವೇರಿ, ರಾಹುತನಕಟ್ಟಿ, ಯತ್ತಿನಹಳ್ಳಿ, ಮೈದೂರ, ಹೊನ್ನತ್ತಿ, ಹೊನ್ನಾಳಿ, ನ್ಯಾಮತಿ ಮುಂತಾದ ಕಡೆಯಿಂದ ರೈತರು ಬೆಳ್ಳುಳ್ಳಿ ಮಾರಾಟಕ್ಕೆ ತಂದಿದ್ದರು.

ಗೋವಾ, ಮಹಾರಾಷ್ಟ್ರ, ವಿಜಯಪುರ, ಹಾನಗಲ್‌, ಮಲೇಬೆನ್ನೂರು, ಹರಪನಹಳ್ಳಿ, ಹುಬ್ಬಳ್ಳಿ, ನರಗುಂದ, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಿಂದ ವ್ಯಾಪಾರಿಗಳೂ ಬೆಳ್ಳುಳ್ಳಿ ಖರೀದಿಗೆ ಬಂದಿದ್ದರು.

ಕಳೆದ ಹಂಗಾಮಿನಲ್ಲಿ ಕ್ವಿಂಟಲ್‌ಗೆ ₹10 ಸಾವಿರ ತನಕ ಇತ್ತು. ಇದೀಗ ಕ್ವಿಂಟಲ್‌ಗೆ ₹2,800 ರಿಂದ ‘₹3,500 ತನಕ ಕುಸಿತ ಕಂಡಿದೆ. ಸಾಲ ಮಾಡಿ ಗೊಬ್ಬರ– ಬೀಜ ಹಾಕಿದ್ದೇವೆ, ಆಳು ಮತ್ತಿತರ ಖರ್ಚು ಕಳೆದರೆ, ನಮಗೆ ನಷ್ಟವೇ ಹೆಚ್ಚು. ಅದಕ್ಕಾಗಿ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಬೇಕು’ ಎನ್ನುತ್ತಾರೆ ಮಷ್ಟೂರು ಗ್ರಾಮದ ರಾಜಶೇಖರಪ್ಪ.

**

ಕಳೆದ ಹಂಗಾಮಿನಲ್ಲಿ ಕ್ವಿಂಟಲ್‌ಗೆ ₹10 ಸಾವಿರ ತನಕ ಇತ್ತು. ಇದೀಗ ಕ್ವಿಂಟಲ್‌ಗೆ ₹2,800 ರಿಂದ ‘₹3,500 ತನಕ ಕುಸಿತ ಕಂಡಿದೆ

– ರಾಜಶೇಖರಪ್ಪ, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry