ಜಿಲ್ಲೆಯಲ್ಲಿ 45 ಡೆಂಗಿ ಪ್ರಕರಣ ಪತ್ತೆ

7
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಪ್ರಕಟಿಸಬೇಕು: ಡಿಎಚ್‌ಒ

ಜಿಲ್ಲೆಯಲ್ಲಿ 45 ಡೆಂಗಿ ಪ್ರಕರಣ ಪತ್ತೆ

Published:
Updated:

ಹಾಸನ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಈ ವರೆಗೆ 45 ಡೆಂಗಿ ಪ್ರಕರಣಗಳ ಪತ್ತೆಯಾಗಿದ್ದು, ಜನರ ಸಹಭಾಗಿತ್ವ ದಿಂದ ಕಾಯಿಲೆ ಹರಡುವುದನ್ನು ತಪ್ಪಿಸ ಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಅಲ್ಲಲ್ಲಿ ನಿಲ್ಲುವ ಮಳೆ ನೀರು, ಹಾಗೂ ಮನೆಯಲ್ಲಿನ ನೀರಿನ ತೊಟ್ಟಿಗಳಿಂದ ಡೆಂಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ವರೆಗೆ 475 ರೋಗಿಗಳನ್ನು ತಪಾಸಣೆಗೆ ಒಳಪಡಿಸಿದ್ದು, ಅದರಲ್ಲಿ 45 ಮಂದಿಗೆ ಡೆಂಗಿ ಪತ್ತೆಯಾಗಿದೆ. ಹಾಸನ 26, ಆಲೂರು 1, ಅರಕಲಗೂಡು 3, ಅರಸೀಕೆರೆ 6, ಬೇಲೂರು 4, ಚನ್ನರಾಯಪಟ್ಟಣ 1, ಹೊಳೆನರಸಿಪುರ 3, ಸಕಲೇಶಪುರ ತಾಲ್ಲೂಕಿನಲ್ಲಿ 1 ಡೆಂಗಿ ಪ್ರಕರಣ ಪತ್ತೆಯಾಗಿದೆ. 3 ಮಂದಿಗೆ ಚಿಕುನ್‌ಗುನ್ಯ ಇರುವುದು ಪತ್ತೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.

ಡೆಂಗಿ ಜ್ವರ ‘ಈಡೀಸ್ ಈಜಿಪ್ತಿ’ ಜಾತಿಗೆ ಸೇರಿದ ಸೋಂಕುಳ್ಳ ಹೆಣ್ಣು ಸೊಳ್ಳೆ ಕಡಿತದಿಂದ ಬರುತ್ತದೆ. ಈ ಸೊಳ್ಳೆ ವಾಸಸ್ಥಳಗಳ ಸುತ್ತಮುತ್ತಲಿನ ನಿರುಪಯುಕ್ತ ಟೈರ್, ತೆಂಗಿನ ಚಿಪ್ಪು, ಏರಕೂಲರ್, ಹೂವಿನ ಕುಂಡಗಳಲ್ಲಿಯೂ ಶುದ್ಧ ನೀರಿನಲ್ಲಿ ಮೊಟ್ಟೆಗಳು ಇಟ್ಟು 8-10 ದಿನಗಳಲ್ಲಿ ಮರಿ ಮಾಡುತ್ತದೆ. ಈ ಸೊಳ್ಳೆ ಕೇವಲ ಹಗಲು ಹೊತ್ತಿನಲ್ಲಿ ಕಡಿಯುತ್ತದೆ ಎಂದು ವಿವರಿಸಿದರು.

ಶೀಘ್ರವಾಗಿ ಕಾಣಿಸಿಕೊಳ್ಳುವ ಅತಿಯಾದ ಜ್ವರ, ಕಣ್ಣುಗಳ ಹಿಂಭಾಗದಲ್ಲಿ ನೋವು, ಅತಿಯಾದ ಮೈ-ಕೈ ನೋವು, ಗಂಟಲು ನೋವು, ಮೈಮೇಲೆ ಗಂಧೆಗಳು ಅಥವಾ ಗುಳ್ಳೆಗಳು, ಚರ್ಮದಡಿಯಲ್ಲಿ ಗುಪ್ತ ರಕ್ತ ಸ್ರಾವ ಕಲೆಗಳು, ಬಾಯಿ, ಮೂಗು ಹಾಗೂ ಒಸಡುಗಳಿಂದ ರಕ್ತಸ್ರಾವ ಮತ್ತು ರಕ್ತಭೇದಿ ರೋಗದ ಲಕ್ಷಣಗಳು. ಇದಕ್ಕೆ ನಿರ್ದಿಷ್ಟವಾದ ಔಷಧಿ ಅಥವಾ ಲಸಿಕೆ ಇಲ್ಲ. ರೋಗ ಲಕ್ಷಣಗಳಿಗೆ ಅನುಸಾರವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು ಎಂದು ಸಲಹೆ ನೀಡಿದರು.

ಪ್ಲೇಟ್ ಲೇಟ್ ಮತ್ತು ರಕ್ತ ಪರೀಕ್ಷೆಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಏಕ ಬೆಲೆ ನಿಗದಿ ಮಾಡಲಾಗಿದೆ. ಎಲಿಸಾ ಪರೀಕ್ಷೆ ನಂತರ ಡೆಂಗಿ ಖಚಿತಪಡಿಸಿಕೊಳ್ಳಬಹುದು. ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಡೆಂಗಿ ಪರೀಕ್ಷೆಗೆ ತಗಲುವ ವೆಚ್ಚದ ಫಲಕ ಹಾಕುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮುಖ್ಯವಾಗಿದ್ದು, ಎಲ್ಲಾ ನೀರಿನ ತೊಟ್ಟಿ, ಡ್ರಮ್ , ಬ್ಯಾರೆಲ್, ಏರ್‌ ಕೂಲರ್‌ಗಳ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಹಳೆಯ ಟೈರ್, ಎಳನೀರು ಬುರುಡೆ, ಚಿಪ್ಪು, ಒಡೆದ ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರು ಖಾಲಿ ಮಾಡಲು ಆಗದ ತೊಟ್ಟಿಗಳಿಗೆ ಸೂಕ್ತ ರೀತಿಯಲ್ಲಿ ಮುಚ್ಚಳ ಮುಚ್ಚಬೇಕು ಅಥವಾ ಸೊಳ್ಳೆ ಪರದೆಗಳನ್ನು ಬಳಸಬೇಕು ಎಂದರು.

ಆಹಾರ ಗುಣಮಟ್ಟ ಸುರಕ್ಷಿತಾಧಿಕಾರಿ ಡಾ. ಹೀರಣ್ಣಯ್ಯ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜ್ ಗೋಪಾಲ್, ಕೀಟ ತಜ್ಞ ರಾಜೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry