ನಿಫಾ: ಹಣ್ಣುಗಳ ವ್ಯಾಪಾರಕ್ಕೆ ಹೊಡೆತ

7
ಬಾವಲಿ ವೈರಾಣು ಸೋಂಕಿನ ಭೀತಿ: ಖರೀದಿಗೆ ಗ್ರಾಹಕರ ಹಿಂದೇಟು

ನಿಫಾ: ಹಣ್ಣುಗಳ ವ್ಯಾಪಾರಕ್ಕೆ ಹೊಡೆತ

Published:
Updated:

ಹಾಸನ: ‘ನಿಫಾ ವೈರಾಣು ಸೋಂಕಿನ ಸುದ್ದಿ ಕೇಳಿ ಹಣ್ಣುಗಳ ವ್ಯಾಪಾರವೇ ಕುಸಿದಿದೆ. ಗ್ರಾಹಕರು ಹಣ್ಣನ್ನು ಕೈಯಲ್ಲಿ ಹಿಡಿದು ಹಕ್ಕಿ ಕಚ್ಚಿದೆಯೇ ಎಂಬುದನ್ನು ಪರಿಶೀಲಿಸಿ ಖರೀದಿಸದೆ ಹೋಗುತ್ತಾರೆ..’ ಇದು ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಮಾರಾಟ ಮಾಡುವ ಮೊಹಮದ್‌ ಷರೀಫ್‌ ನೀಡಿದ ಮಾಹಿತಿ.

ನೆರೆಯ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಾಣು ಸೋಂಕು ಹಾಸನ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಬಾವಲಿಯ ವೈರಾಣು ಸೋಂಕಿನ ಭೀತಿಯಿಂದ ಮಾವಿನಹಣ್ಣು, ಬಾಳೆಹಣ್ಣು ಹಾಗೂ ಇತರೆ ಹಣ್ಣುಗಳ ಮಾರಾಟ ಕುಸಿತ ಕಂಡಿದೆ.

ಸೋಂಕು ಕಾಣಿಸಿಕೊಳ್ಳುವ ಮುನ್ನ ಮಾವಿನಹಣ್ಣು ದಿನಕ್ಕೆ ₹ 3 ರಿಂದ 5 ಸಾವಿರ ವ್ಯಾಪಾರವಾಗುತ್ತಿತ್ತು , ಈಗ ₹ 500 ಕ್ಕೆ ಇಳಿದಿದೆ. ಅದೇ ರೀತಿ ಬಾಳೆಹಣ್ಣು ವ್ಯಾಪಾರ ಸಹ ಕುಸಿದಿದೆ. ಇದರ ಜತೆ ಇತರೆ ಹಣ್ಣುಗಳಲ್ಲಿ ಸಣ್ಣ ಚುಕ್ಕಿ ಕಂಡರೂ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಹಣ್ಣು ವ್ಯಾಪಾರಿಗಳು ಹಾಕಿದ ಬಂಡವಾಳ ಕೂಡ ವಾಪಸ್‌ ಆಗದಂತಹ ಪರಿಸ್ಥಿತಿ ತಲೆದೋರಿದೆ.

‘ಮಾವಿನ ಹಣ್ಣಿನ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರು ಜಿನುಗುತ್ತದೆ. ಆದರೆ ಹಣ್ಣುಗಳನ್ನು ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ನಿಫಾ ಬರುವ ಮುನ್ನ ದಿನಕ್ಕೆ ₹ 2 ರಿಂದ 3 ಸಾವಿರ ವ್ಯಾಪಾರ ಮಾಡುತ್ತಿದೆ. ಈಗ ದಿನಕ್ಕೆ ₹ 500 ವ್ಯಾಪಾರವಾದರೇ ಹೆಚ್ಚು.

ತಂದ ಮಾಲು ವ್ಯಾಪಾರವಾಗದೆ ಕೊಳೆಯುತ್ತಿದೆ. ಮೊದಲೇ ಸಾಲ ಮಾಡಿ ಮಾಲು ತರುತ್ತೇವೆ. ಸೋಂಕಿನ ಭೀತಿಯಿಂದಾಗಿ ಜನರು ಹಣ್ಣುಗಳನ್ನೇ ಕೊಳ್ಳುತ್ತಿಲ್ಲ’ ಎಂದು ಬಾಳೆಹಣ್ಣು ವ್ಯಾಪಾರಿ ಮೊಹಮ್ಮ ಶಫಿ ಅಳಲು ತೋಡಿಕೊಂಡರು.

ಮಾರುಕಟ್ಟೆಯಲ್ಲಿ ಮಾತ್ರ ಹಣ್ಣುಗಳ ವ್ಯಾಪಾರ ಕುಸಿದಿಲ್ಲ, ಬಡಾವಣೆಗಳಲ್ಲಿನ ವ್ಯಾಪಾರಿಗಳ ಪರಿಸ್ಥಿತಿಯೂ ಇದೆ ಆಗಿದೆ. ಬಾವಳಿಗಳು ಕಚ್ಚಿದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಖರೀದಿಸಲು ಮುಂದೆ ಬರುತ್ತಿಲ್ಲ.

‘ಐದು ದಿನದಿಂದ ವ್ಯಾಪಾರವೇ ಇಲ್ಲ. ಜತೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರುಕಟ್ಟೆಯತ್ತ ಜನರು ಬರುತ್ತಿಲ್ಲ. ಪ್ರಾಣಿ, ಪಕ್ಷಿಗಳು ಕಚ್ಚಿದ ಹಾಗೂ ಮಳೆ ಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು ಎಂದು ಟಿ.ವಿ.ಯಲ್ಲಿ ತೋರಿಸಿದ್ದಾರೆ.

ಹಾಗಾಗಿ ಸೇಬು, ಸಪೋಟ, ಬಾಳೆಹಣ್ಣು, ಸೀಬೆಹಣ್ಣು ಮತ್ತು ಮಾವಿನಹಣ್ಣಿನಲ್ಲಿ ಸಣ್ಣ ಗುರುತು, ಚುಕ್ಕಿ ಇದ್ದರೂ ಖರೀದಿಸುತ್ತಿಲ್ಲ. ಹಕ್ಕಿ ಕಚ್ಚಿಲ್ಲ ಎಂದು ಎಷ್ಟು ಹೇಳಿದರೂ ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಶೇಕಡಾ 50ರಷ್ಟು ವ್ಯಾಪಾರ ಕುಸಿತವಾಗಿದೆ’ ಎಂದು ಹಣ್ಣಿನ ವ್ಯಾಪಾರಿ ಹಬೀಬ್‌ ಅವರು ತಮ್ಮ ಅಳಲು ತೋಡಿಕೊಂಡರು.

ಪಕ್ಷಿಗಳು ಕಚ್ಚಿದ ಹಣ್ಣು ಮಾರಬೇಡಿ

‘ನಿಫಾ ವೈರಾಣು ಸೋಂಕು ಹರಡದಂತೆ ಯಾವುದೇ ಪ್ರಾಣಿ, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಮಾರಾಟ ಮಾಡದಂತೆ ಹಾಗೂ ಪ್ರತಿ ಹಣ್ಣನ್ನು ಪರಿಶೀಲಿಸಿ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದರು.

‘ಜಿಲ್ಲೆಯಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ. ಮುಂಜಾಗ್ರತೆ ವಹಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ರಸ್ತೆ ಬದಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಹಣ್ಣನ್ನು ನೀಡುವಂತಹ ಹಣ್ಣಿನ ಮಂಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೊಳೆತು ಕರಗಿದ ಹಣ್ಣುಗಳನ್ನು ಬೀದಿಗೆ ಬಿಸಾಡದೆ ಕಸದ ವಾಹನಗಳ ಮೂಲಕವೇ ವಿಲೇವಾರಿ ಮಾಡುವಂತೆ ಸಲಹೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry