ಲಕ್ಷ್ಮೇಶ್ವರ: ಮಳೆಗೆ ಜನಜೀವನ ತತ್ತರ

7
ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಜನರ ಪರದಾಟ, ವಿದ್ಯುತ್‌ ಪೂರೈಕೆ ಸ್ಥಗಿತ

ಲಕ್ಷ್ಮೇಶ್ವರ: ಮಳೆಗೆ ಜನಜೀವನ ತತ್ತರ

Published:
Updated:
ಲಕ್ಷ್ಮೇಶ್ವರ: ಮಳೆಗೆ ಜನಜೀವನ ತತ್ತರ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ, ನರಗುಂದ, ಗಜೇಂದ್ರಗಡ, ಡಂಬಳ, ಮುಂಡರಗಿ, ಗದಗ–ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಸತತ ಎರಡು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಕೆರೆ ಕಟ್ಟೆ, ಕೃಷಿಹೊಂಡಗಳು ಭರ್ತಿಯಾಗಿವೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಗಾಳಿಯ ಆರ್ಭಟಕ್ಕೆ ಜಿಲ್ಲೆಯಾದ್ಯಂತ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಇದರಿಂದ ವಿದ್ಯುತ್‌ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಲಕ್ಷ್ಮೇಶ್ವರ ಸೇರಿ ಹಲವೆಡೆ ಕತ್ತಲು ಕವಿದಿದೆ.

ಲಕ್ಷ್ಮೇಶ್ವರದಲ್ಲಿ ಮಂಗಳವಾರ ಸಂಜೆ ಗಾಳಿ ಆರ್ಭಟಕ್ಕೆ ಮರ ಬಿದ್ದು, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಕಾಂಪೌಂಡ್ ಕುಸಿಯಿತು. ಹೆಸ್ಕಾಂ ಕಚೇರಿ ಬಳಿ ಮರ ಉರುಳಿ ತಗಡಿನ ಶೆಡ್ ಮೇಲೆ ಬಿತ್ತು. ಶೆಡ್‌ನಲ್ಲಿ ಯಾರೂ ಇರಲಿಲ್ಲ ಆದ್ದರಿಂದ ಜೀವಹಾನಿ ತಪ್ಪಿದೆ. ಪಟ್ಟಣದ ಶಿಗ್ಲಿ ವೃತ್ತದ ಬಳಿ ರಸ್ತೆಯ ಮೇಲೆ ಮರ ಮತ್ತು ವಿದ್ಯುತ್‌ ಕಂಬ ಉರುಳಿ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪುರಸಭೆ ಸಿಬ್ಬಂದಿ ಮರ ತೆರವುಗೊಳಿಸಿದರು. ಅಗಸ್ತ್ಯತೀರ್ಥ ರಸ್ತೆಯ ಅಂಬೇಡ್ಕರ್‌ ನಗರದಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಚರಂಡಿಗೆ ಉರುಳಿದೆ. ಹುಬ್ಬಳ್ಳಿ ರಸ್ತೆಯಲ್ಲಿ ಚನ್ನಪ್ಪ ಕೋಲ್ಕರ್‌ ಅವರ ಕಟ್ಟಿಗೆ ಅಡ್ಡೆ ಎದುರಿನ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು.

ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಹಳ್ಳಗಳು ತುಂಬಿ ಹರಿಯುತ್ತಿದ್ದು, ದೊಡ್ಡೂರು ಬಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪಟ್ಟಣದ ರಂಭಾಪುರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೆ ಹೊದೆಸಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ.

ಶಿರಹಟ್ಟಿ ತಾಲ್ಲೂಕಿನ ಗುಡ್ಡದಪುರ ಗ್ರಾಮದಲ್ಲಿ ಸಿಡಿಲು ಬಡಿದು ಮರಕ್ಕೆ ಕಟ್ಟಿದ ಎತ್ತು ಮೃತಪಟ್ಟಿದೆ. ಸಿಡಿಲಿನಿಂದ ಬೆಂಕಿ

ಹೊತ್ತಿಕೊಂಡು ಜಮೀನಿನಲ್ಲಿ ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದ 10 ಕ್ವಿಂಟಲ್‌ನಷ್ಟು ಹತ್ತಿ ಸುಟ್ಟು ಬೂದಿಯಾಗಿದೆ. ನರಗುಂದ ಪಟ್ಟಣದ ಗ್ರಾಮೀಣ ಸಾರಿಗೆ ಬಸ್‌ ನಿಲ್ದಾಣ ಮಳೆಯಿಂದ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದೆ.

ಗದಗ–ಬೆಟಗೇರಿ ಅವಳಿನಗರದಲ್ಲಿ ಧಾರಾಕಾರ ಮಳೆಯಿಂದ ಜವುಳಗಲ್ಲಿ, ಪಂಚಾಕ್ಷರಿ ನಗರ, ರಾಜೀವಗಾಂಧಿ ನಗರ, ಸರ್ವೋದಯ ಕಾಲೋನಿಯಲ್ಲಿ ಚರಂಡಿ ನೀರು ಮನೆಯೊಳಗೆ ನುಗ್ಗಿ ಜನ ತೀವ್ರ ತೊಂದರೆ ಅನುಭವಿಸಿದರು. ಪಂಪ್‌ ಸರ್ಕಲ್‌ ಹತ್ತಿರ ಬಸ್‌ ಶೆಲ್ಟರ್‌ ಮೇಲೆ ಮರ ಉರುಳಿ ಹಾನಿಯಾಗಿದೆ.

ನರೇಗಲ್‌ನಲ್ಲಿ ಭಾರಿ ಮಳೆ

ನರೇಗಲ್: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ಸಂಜೆ 6.30ರಿಂದ ಜಿಟಿ, ಜಿಟಿ ಮಳೆ ಆರಂಭವಾಯಿತು. ನಂತರ ಗುಡುಗು, ಮಿಂಚು, ಗಾಳಿ ಸಹಿತ ಅರ್ಧ ತಾಸು ಭಾರಿ ಮಳೆಸುರಿದಿದೆ.

ಜೋರು ಮಳೆ

ಡಂಬಳ: ಹೋಬಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಜೋರಾದ ಗಾಳಿ ಗುಡುಗು ಸಹಿತ ಮಳೆ ಸುರಿದಿದೆ. ಪೇಠಾಲೂರ, ಮೇವುಂಡಿ, ಯಕ್ಲಾಸಪುರ, ಬರದೂರ, ಡೋಣಿ, ಕದಾಂಪುರ, ರಾಮೇನಹಳ್ಳಿ, ಅತ್ತಿಕಟ್ಟಿ, ದಿಂಡೂರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಉತ್ತಮ ಮಳೆ: ರೈತರಲ್ಲಿ ಹರ್ಷ

ನರಗುಂದ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಜೋರಾಗಿ ಮಳೆ ಸುರಿದು ರೈತರಲ್ಲಿ ಹರ್ಷ ತಂದಿದೆ. ಆದರೆ, ಕೆಲವೆಡೆ ಮಳೆ ಹಾನಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ನರಗುಂದ ಪಟ್ಟಣದಲ್ಲಿ 1 ಗಂಟೆ ಮಳೆಯಾಗಿದೆ. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಹಾಲಭಾವಿ ಕೆರೆ ಸುತ್ತಲಿನ ನಿವಾಸಿಗಳ ಮನೆಗೆ ಚರಂಡಿ ನೀರು ನುಗ್ಗಿ ತೊಂದರೆ ಉಂಟಾಯಿತು. ಪಟ್ಟಣದ ಅರ್ಬಾಣ ಹಾಗೂ ಪೇಟದಲ್ಲಿ ಎರಡು ಮನೆಗಳು ಕುಸಿದಿವೆ. ತಾಲ್ಲೂಕಿನ ಭೈರನಟ್ಟಿಯಲ್ಲಿ ಒಂದೂವರೆ ಗಂಟೆ ಮಳೆ ಸುರಿದಿದ್ದು, ಚರಂಡಿ ನೀರು ಹಲವು ಮನೆಗಳಿಗೆ ನುಗ್ಗಿದೆ. ಹೆದ್ದಾರಿ ಪಕ್ಕದಲ್ಲಿರುವ ಚರಂಡಿ ನೀರಿಗೆ ಮಾರ್ಗ ತೆರವುಗೊಳಿಸುವ ತುರ್ತು ಕಾಮಗಾರಿ ಕೈಗೊಂಡಿದ್ದರಿಂದ ಹುಬ್ಬಳ್ಳಿ– ವಿಜಯಪುರ ಹೆದ್ದಾರಿಯಲ್ಲಿ ಸುಮಾರು 1 ಗಂಟೆಯವರೆಗೆ ಸಂಚಾರ ತಡೆಹಿಡಿಯಲಾಗಿತ್ತು. ಸಂಜೆ 6ರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಒಂದು ವಾರದಿಂದ ಪ್ರತಿದಿನ ಸುರಿಯುತ್ತಿರುವ ಮಳೆ–ಗಾಳಿಯಿಂದ ಪಟ್ಟಣದಲ್ಲಿ ಪ್ರತಿ ದಿನ ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಆಕ್ರೋಶಗೊಳ್ಳುವಂತಾಗಿದೆ. ಸೋಮವಾರ ಸಂಜೆ ಹಾಗೂ ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್ ತಂತಿಗಳು, ಡಿಸ್ಕ್‌, ಇನ್ಸುಲೇಟರ್‌ಗಳು ಹಾಳಾಗಿ ಸೋಮವಾರ ಹಾಗೂ ಮಂಗಳವಾರ ಕೆಲವಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

46.5 ಮೀ ಮಳೆ: ಸೋಮವಾರ ಸಂಜೆ ಪಟ್ಟಣ ಹಾಗೂ ತಾಲ್ಲೂಕಿನ ಕೆಲವಡೆ 46.5 ಮೀ.ಮೀ ಮಳೆ ಸುರಿದ ವರದಿಯಾಗಿದೆ.

ಹಾವು ಕಚ್ಚಿ ಯುವಕ ಅಸ್ವಸ್ಥ

ನರೇಗಲ್: ಸಮೀಪದ ತೋಟಗಂಟಿ ಗ್ರಾಮದ ಯುವಕನಿಗೆ ಮಂಗಳವಾರ ಸಂಜೆ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರಿಂದ ವರನ್ನು ಚಿಕಿತ್ಸೆಗಾಗಿ ಗದಗ ನಗರದ ಬಾಸೆಲ್ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಕುಂಡಿ ಸಂತೆಗೆ ವ್ಯಾಪರಕ್ಕೆ ಹೋಗಿ ಮರಳುವ ಸಂದರ್ಭದಲ್ಲಿ ಕನಗಿನಹಾಳ ಗ್ರಾಮದ ಹಳ್ಳ ದಾಟುವಾಗ ಟಂ–ಟಂ ವಾಹನ ತಗ್ಗಿನಲ್ಲಿ ಸಿಕ್ಕಿದ್ದು. ಆಗ ಪರಸಪ್ಪ ವಾಲ್ಮೀಕಿ (22) ಎಂಬ ಯುವಕ ಟಂ–ಟಂ ವಾಹನಕ್ಕೆ ಹಚ್ಚಲೆಂದು ಕಲ್ಲು ತರಲು ವಾಹನದಿಂದ ಕೆಳಗೆ ಇಳಿದಿದ್ದಾನೆ. ಆಗ ಕಲ್ಲಿನ ಕೆಳಗೆ ಇದ್ದ ನಾಗರ ಹಾವು ಯುವಕನಿಗೆ ಕಚ್ಚಿದೆ. ತಕ್ಷಣ ವಾಹನದಲ್ಲಿದ್ದವರು ಆತನನ್ನು ಗದಗಿನ ಬಾಸೆಲ್ ಮಿಶನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಯುವಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry