ಮೊದಲ ದಿನ ಮಕ್ಕಳಿಗೆ ‘ಸಿಹಿ’ ಸ್ವಾಗತ

7
ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷಕ್ಕೆ ಚಾಲನೆ; ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಶಾಲಾ ಆವರಣ

ಮೊದಲ ದಿನ ಮಕ್ಕಳಿಗೆ ‘ಸಿಹಿ’ ಸ್ವಾಗತ

Published:
Updated:
ಮೊದಲ ದಿನ ಮಕ್ಕಳಿಗೆ ‘ಸಿಹಿ’ ಸ್ವಾಗತ

ಚಿಕ್ಕಬಳ್ಳಾಪುರ: ಬೇಸಿಗೆ ರಜೆ ಮುಗಿಸಿ ಮಂಗಳವಾರ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ವಿವಿಧ ಶಾಲೆಗಳಲ್ಲಿ ಸಂತಸ, ಸಂಭ್ರಮದ ಸ್ವಾಗತ ನೀಡಲಾಯಿತು.

ಮೊದಲ ದಿನ ಶಾಲೆಗಳಲ್ಲಿ ಹಬ್ಬದ ರಂಗು ತುಂಬುವ ಉದ್ದೇಶದಿಂದ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಪಾಯಸ, ಕೇಸರಿ ಬಾತ್‌, ಪೊಂಗಲ್‌ ಸಿದ್ಧಪಡಿಸಿ, ವಿದ್ಯಾರ್ಥಿಗಳಿಗೆ ಸಿಹಿ ಊಟದ ಸವಿ ಉಣಬಡಿಸಲಾಯಿತು. ಪಠ್ಯಪುಸ್ತಕ, ಸಮವಸ್ತ್ರ ಕೈ ಸೇರುತ್ತಿದಂತೆ ವಿದ್ಯಾರ್ಥಿಗಳು ಸಂತಸದಿಂದ ಪಠ್ಯದ ಪುಟ ತಿರುವಿ ಹಾಕಿದರು.

ರಜೆಯ ಮೋಜಿನಲ್ಲಿದ್ದ ಮಕ್ಕಳ ಪೈಕಿ ಹಿರಿಯ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳ ರೀತಿ ಶಾಲೆಗಳತ್ತ ಮುಖ ಮಾಡಿದ್ದು ಕಾಣುತ್ತಿತ್ತು. ಹೊಸದಾಗಿ ಶಾಲೆ ಸೇರಿದ ಮಕ್ಕಳು ಹಟ ಹಿಡಿದಿದ್ದರು. ಪಾಲಕರು ಮಕ್ಕಳನ್ನು ಸಮಾಧಾನಪಡಿಸಿ, ಓಲೈಸಿಕೊಂಡು ಶಾಲೆಗೆ ಕಳುಹಿಸಲು ಬರುತ್ತಿದ್ದ ದೃಶ್ಯ ಕುತೂಹಲಕರವಾಗಿ ಎಲ್ಲರ ಗಮನ ಸೆಳೆಯುತ್ತಿತ್ತು. ಇನ್ನು ಕೆಲವೆಡೆ ಪೋಷಕರು ಮಕ್ಕಳಿಗೆ ವಿವಿಧ ಆಮಿಷ ಒಡ್ಡಿ ಶಾಲೆಗಳತ್ತ ಕರೆದುಕೊಂಡು ಹೋಗುತ್ತಿದ್ದರು.

ಶಾಲೆಗೆ ಬಂದವರ ಪೈಕಿ ಕೆಲವರು ಉಲ್ಲಾಸದಿಂದ ಆಟಗಳಲ್ಲಿ ತೊಡಗಿಸಿಕೊಂಡರೆ, ಅನೇಕರು ರಜೆ ಮೋಜಿನಿಂದ ಹೊರ ಬರದೆ ಮಂಕಾಗಿದ್ದರು. ಆದರೆ ಶಾಲೆಗಳಲ್ಲಿ ಮೊದಲ ದಿನ ಪಾಠ ಇಲ್ಲದ ಕಾರಣ ವಿದ್ಯಾರ್ಥಿಗಳು ಸಿಹಿಯೂಟದ ಸವಿಯುಂಡು ಕುಣಿದು ಕುಪ್ಪಳಿಸಿದರು.

ಬಿ.ಬಿ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಷಯ ಪರಿವೀಕ್ಷಕ ರಾಮಕೃಷ್ಣಪ್ಪ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿದರು. ಈ ಸಂದರ್ಭ ದಲ್ಲಿ ಮಾತನಾಡಿದ ಅವರು, ‘ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಸರ್ಕಾರ ದಿಂದ ಸಿಗುವ ಎಲ್ಲ ಸವಲತ್ತು ನೀಡುತ್ತೇವೆ. ಪೋಷಕರು ತಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.

‘ಶಾಲೆಗೆ ಸೇರಿಸಿದರೆ ಜವಾಬ್ದಾರಿ ಮುಗಿಯಿತು ಎಂಬ ಭಾವನೆ ಪೋಷಕರಲ್ಲಿ ಇರಬಾರದು. ಆಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು. ಜ್ಞಾನ ಸಂಪಾದಿಸುವ ಉಡುಗೊರೆ ಕೊಡಿಸಿ, ಮನೆಯಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಬೇಕು’ ಎಂದು ಪೋಷಕರಿಗೆ ಸಲಹೆ ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಅಶ್ವತ್ಥ್‌ನಾರಾಯಣ, ಶಿಕ್ಷಕಿಯರಾದ ಚಂದ್ರಕಲಾ, ಕಾಂತಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry