ಈ ಮಕ್ಕಳಿಗಿಲ್ಲ ಶಾಲಾ ಆರಂಭದ ಖುಷಿ

5
ಈ ಮಕ್ಕಳಿಗಿಲ್ಲ ಶಾಲಾ ಆರಂಭದ ಖುಷಿ

ಈ ಮಕ್ಕಳಿಗಿಲ್ಲ ಶಾಲಾ ಆರಂಭದ ಖುಷಿ

Published:
Updated:
ಈ ಮಕ್ಕಳಿಗಿಲ್ಲ ಶಾಲಾ ಆರಂಭದ ಖುಷಿ

ಸಂತೇಮರಹಳ್ಳಿ: ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಆದರೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಪಾಠ ಪ್ರವಚನ ಕೇಳುವಂತಾಗಿದೆ.

ನೂತನ ವರ್ಷದಲ್ಲಿ ಅಕ್ಷರ ಕಲಿಯಬೇಕು ಎಂಬ ಆಸೆಯಿಂದ ಬರುವ ಮಕ್ಕಳಿಗೆ ಈ ಕೊಠಡಿಗಳನ್ನು ನೋಡಿದಾಕ್ಷಣ ನಿರಾಸೆ ಉಂಟಾಗುತ್ತಿದೆ.

ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು 5 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿವೆ. ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಕುಸಿದಿದೆ. ಪ್ರವೇಶದ್ವಾರದ ಕಡೆಗೆ ಹೆಂಚುಗಳು ಹಾರಿ ಹೋಗಿವೆ. ಕಿಟಕಿ, ಬಾಗಿಲುಗಳು ಕಳಚಿ ಬಿದ್ದಿವೆ. ಜೋರು ಮಳೆ ಹಾಗೂ ಗಾಳಿ ಬಂದರೆ ಗೋಡೆಗಳು ಕುಸಿದು ಬೀಳುವಂತಿವೆ. ಹೀಗಾಗಿ, ಮಕ್ಕಳು, ಶಿಕ್ಷಕರು ಪ್ರಾಣಭಯದಲ್ಲಿ ಓಡಾಡುವಂತಾಗಿದೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದೆ. 103 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕೊಠಡಿಗಳು ಹಾಳಾಗಿರುವುದರಿಂದ ಬೇರೆ ಕಡೆಗೆ ಇರುವ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ.

ಮಳೆ ಬಂದಾಗ ಮಕ್ಕಳು ನೆನೆಯುತ್ತ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಆದರೆ, ಈ ಕೊಠಡಿಗಳನ್ನು ದುರಸ್ತಿಗೊಳಿಸಲು ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಯಾವುದೇ ಅವಘಡ ಸಂಭವಿಸುವ ಮುನ್ನ ಕೊಠಡಿಗಳನ್ನು ತೆರವುಗೊಳಿಸಬೇಕು. ಅಲ್ಲಿ ಹೊಸದಾಗಿ ಕೊಠಡಿಗಳನ್ನು ನಿರ್ಮಿಸಬೇಕು. ಮಕ್ಕಳು ಹಾಗೂ ಶಿಕ್ಷಕರು ನೆಮ್ಮದಿಯಿಂದ ಪಾಠ–ಪ್ರವಚನಗಳಲ್ಲಿ ತೊಡಗಿಸುವಂತೆ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದರು.

‘ಹಾಳಾಗಿರುವ ಕೊಠಡಿಗಳನ್ನು ನೆಲಸಮಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಕೊಠಡಿಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದರಿಂದ ಮಕ್ಕಳು, ಶಿಕ್ಷಕರಿಗೆ ತೊಂದರೆ ಉಂಟಾಗಿದೆ’ ಎಂದು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry