ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ಮುಗಿಸಿ ಶಾಲೆಗೆ ಮರಳಿದ ಮಕ್ಕಳು

ಹೂಗುಚ್ಛ ಕೊಟ್ಟು ಬರಮಾಡಿಕೊಂಡ ಶಿಕ್ಷಕರು
Last Updated 30 ಮೇ 2018, 13:45 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ಶಾಲೆಗಳು ಪುನಾರಂಭಗೊಂಡಿದ್ದು, ಬೇಸಿಗೆ ರಜೆ ಮುಗಿಸಿ ಮಕ್ಕಳು ಶಾಲೆಗೆ ಮರಳಿದರು.

ಜಿಲ್ಲೆಯಲ್ಲಿ ಸೋಮವಾರವೇ ಶಾಲೆಗಳು ತೆರೆದುಕೊಂಡಿದ್ದವು. ಆ ದಿನ ಸ್ವಚ್ಛತೆ ಕಾರ್ಯಗಳು ನಡೆದವು. ಮಂಗಳವಾರ ಪ್ರಾರಂಭೋತ್ಸವ ದೊಂದಿಗೆ ತರಗತಿ ಗಳು ಪ್ರಾರಂಭಗೊಂಡವು.

ಪ್ರಾರಂಭೋತ್ಸವ ಪ್ರಯುಕ್ತ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಶಾಲಾ ಕೋಣೆಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ಆವರಣದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಕಪ್ಪು ಹಲಿಗೆಯ ಮೇಲೆ ‘ಸುಸ್ವಾಗತ’ ಎಂದು ಬರೆಯಲಾಗಿತ್ತು. ಶಿಕ್ಷಕರು ಹೂಗುಚ್ಛ ನೀಡಿ ಶಾಲೆಗೆ ಬಂದ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು.

ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿರಾ, ಹುಗ್ಗಿ ಮತ್ತಿತರ ಸಿಹಿ ತಿಂಡಿ ಕೊಡಲಾಯಿತು. ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.

ರಜೆ ಕಳೆದ ನಂತರ ಮಕ್ಕಳು ಖುಷಿ, ಖುಷಿಯೊಂದಿಗೆ ಶಾಲೆಯತ್ತ ಹೆಜ್ಜೆ ಹಾಕಿದರು. ಹೊಸದಾಗಿ ಒಂದನೇ ತರಗತಿಯಲ್ಲಿ ಪ್ರವೇಶ ಪಡೆದ ಮಕ್ಕಳು ಪಾಲಕರೊಂದಿಗೆ ಆಗಮಿಸಿದರು. ಆದರೂ, ಮೊದಲ ದಿನ ಮಕ್ಕಳ ಹಾಜರಾತಿ ಪ್ರಮಾಣ ಕಡಿಮೆ ಆಗಿತ್ತು.

‘ಜಿಲ್ಲೆಯಲ್ಲಿ ಇರುವ 1,258 ಸರ್ಕಾರಿ ಪ್ರಾಥಮಿಕ, 166 ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭಗೊಂಡಿವೆ.

ಸರ್ಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಬಹಳ ಸಂಭ್ರಮದಿಂದ ನಡೆಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಇನಾಯತ್ ಅಲಿ ಶಿಂದೆ ತಿಳಿಸಿದರು.

‘ಶಿಕ್ಷಕರು ಒಂದು ವಾರದಿಂದ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ನಡೆಸಿದ್ದರು. ಶಾಲೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಿ ಪ್ರಾರಂಭೋತ್ಸವ ಆಚರಿಸಿದರು’ ಎಂದು ಹೇಳಿದರು.

‘15 ದಿನಗಳ ಹಿಂದೆಯೇ ಸಮವಸ್ತ್ರಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. 1 ರಿಂದ 10ನೇ ತರಗತಿವರೆಗಿನ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು ಈಗಾಗಲೇ ಬಂದಿವೆ. ಉರ್ದು ಹಾಗೂ ಮರಾಠಿ ಮಾಧ್ಯಮದ ಪಠ್ಯಪುಸ್ತಕಗಳು ಬುಧವಾರ ಬರಲಿವೆ’ ಎಂದು ತಿಳಿಸಿದರು.

ಮೈಲೂರ ಶಾಲೆ: ನಗರದ ಮೈಲೂರನಲ್ಲಿ ಇರುವ ಸರ್ಕಾರಿ ಕನ್ಯಾ ಪ್ರೌಢ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ (ಉರ್ದು ಹಾಗೂ ಕನ್ನಡ ಮಾಧ್ಯಮ)ಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಳವಂತರಾವ್‌ ಪಾಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಗೌರೆ, ನಗರಸಭೆ ಸದಸ್ಯ ಶಿವಾನಂದ ಒಂಟೆ, ಮಾಜಿ ಸದಸ್ಯ ಫಾರೂಕ ಪಟೇಲ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಲಾಲ ದೇವಿಪ್ರಸಾದ, ಪ್ರಮುಖರಾದ ಮಾರುತಿ, ಶ್ರಾವಣಕುಮಾರ, ಮಹಮ್ಮದ್‌ ಖಲೀಲ್ ಇದ್ದರು.

ನಾಗನಾಥ ಬಿರಾದಾರ ಸ್ವಾಗತಿಸಿದರು. ಹಾವಯ್ಯ ಸ್ವಾಮಿ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.

**
ಬರುವ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೀದರ್‌ ಜಿಲ್ಲೆಯ ಫಲಿತಾಂಶ ಸುಧಾರಿಸಲು ಅಗತ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು
ಇನಾಯತ್ ಅಲಿ ಶಿಂದೆ, ಡಿಡಿಪಿಐ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT