ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಆರೋಪ

ಅವೈಜ್ಞಾನಿಕ ವಿನ್ಯಾಸಕ್ಕೆ ಆಶ್ರಯ ಮನೆ ಫಲಾನುಭವಿಗಳ ಆಕ್ರೋಶ
Last Updated 30 ಮೇ 2018, 14:12 IST
ಅಕ್ಷರ ಗಾತ್ರ

ಇಳಕಲ್: ‘ವಿಜಯ ಮಹಾಂತೇಶ ಕತೃ ಗದ್ದುಗೆ ಹತ್ತಿರದ ಆಶ್ರಯ ಬಡಾವಣೆಯಲ್ಲಿ ನಿರ್ಮಿತಿ ಸಂಸ್ಥೆ ನಿರ್ಮಿಸುತ್ತಿರುವ ಆಶ್ರಯ ಮನೆಗಳು ನಿರ್ಮಾಣ ಹಂತದಲ್ಲಿಯೇ ಕರಗುತ್ತಿವೆ. ಈ ಆಶ್ರಯ ಮನೆಗಳು ಲೆಕ್ಕಕ್ಕುಂಟು, ಆದರೆ ಆಸರೆಗಲ್ಲ, ಬಾಳಕೆಗಲ್ಲ ಎಂಬಂತಾಗಿವೆ’ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಸರ್ವೆ ನಂಬರ್ 22/1ರಲ್ಲಿ 240 ಮನೆಗಳು ಹಾಗೂ 23/1ರಲ್ಲಿ 91 ಮನೆಗಳನ್ನು ತಲಾ ₹ 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ನಿರ್ಮಾಣಕ್ಕೆ ಬಳಸುವ ವಸ್ತುಗಳು ಹಾಗೂ ತಂತ್ರಜ್ಞಾನ ನೋಡಿದರೆ ಇವು ಒಂದು ತಲೆಮಾರು ಕೂಡ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವ ಭರವಸೆ ಇಲ್ಲ.

ಕಪ್ಪು ಮಣ್ಣಿನಿಂದ ಕೂಡಿದ ಇಲ್ಲಿಯ ನಿವೇಶನಗಳಲ್ಲಿ ಕೇವಲ 6 ಮತ್ತು 8 ಎಂಎಂ ಕಬ್ಬಿಣದ ಸರಳುಗಳನ್ನು ಬಳಿಸಿ ನೆಲಮಟ್ಟದಲ್ಲಿ ಬೀಮ್‍ ಹಾಕಲಾಗುತ್ತಿದೆ. ಕೆಳಗಡೆ ಕಲ್ಲಿನ ಗೊಡೆ ಇಲ್ಲ. ಕಪ್ಪು ಮಣ್ಣಿನ ಮೇಲೆ ಹಾಕಿದ ಅನೇಕ ಬೀಮ್‍ಗಳು ಈಗಲೇ ಬೆಂಡ್‍ (ವಕ್ರ) ಆಗಿವೆ. ಈ ಬೀಮ್ ಮೇಲೆ ಕಟ್ಟಿದ ಸಿಮೆಂಟ್ ಇಟ್ಟಿಗೆಗಳು ಅಲ್ಪಸ್ವಲ್ಪ ಮಳೆಗೆ ಕರಗಿ ಹೋಗಿವೆ.

300 ಚದರ ಅಡಿಯ ಮನೆ ನಿರ್ಮಾಣಕ್ಕೆ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ
ದಿಂದ ₹ 1.2 ಲಕ್ಷ, ಕೇಂದ್ರ ಸರ್ಕಾರದಿಂದ ₹ 1.5 ಲಕ್ಷ, ಫಲಾನುಭವಿಯ ವಂತಿಗೆ ₹ 30 ಸಾವಿರ, ಬ್ಯಾಂಕ್ ನೀಡಿದ ₹ 50 ಸಾಲ ಸೇರಿ ಒಟ್ಟು ₹ 3.5 ಲಕ್ಷ ಖರ್ಚು ಮಾಡಲಾಗುತ್ತಿದೆ. ಬ್ಯಾಂಕಿನ ಸಾಲ ಮರುಪಾವತಿಗೂ ಮೊದಲೇ ಈ ಮನೆಗಳು ನೆಲ ಸಮವಾಗಬಹುದು ಎನ್ನುವುದು ಫಲಾನುಭವಿಗಳಾದ ಮಹಾಂತೇಶ ಯಲಬುರ್ಗಿ ಹಾಗೂ ಪರಶುರಾಮ ಅವರ ಆತಂಕ.

ಸೂಕ್ತ ಅಳತೆ ಇಲ್ಲ: ಈ ಆಶ್ರಯ ಕಾಲೊನಿಯ ಬಹುತೇಕ ಫಲಾನುಭವಿಗಳು ನೇಕಾರರು. ಆದರೆ ಈ ಮನೆಗಳ ನೀಲನಕ್ಷೆ ನೋಡಿದರೆ ಒಂದೇ ಒಂದು ಮಗ್ಗ ಹಾಕಿಕೊಳ್ಳಲು ಸಹ ಅಲ್ಲಿ ಜಾಗ ಇಲ್ಲ. ಈ ಬಗ್ಗೆ ನಿರ್ಮಾಣದ ಮೇಲ್ವಿಚಾರಣೆ ನಡೆಸುವ ನಿರ್ಮಿತಿ ಕೇಂದ್ರದ ಎಂಜನಿಯರ್ ಅವರನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಫಲಾನುಭವಿಗಳ ಆತಂಕಕ್ಕೆ ಸ್ಪಂದಿಸುತ್ತಿಲ್ಲ.

‘ಮಗ್ಗ ಹಾಕಲು ಆಗದಂತಹ ಸಣ್ಣ ಕೊಠಡಿಗಳು, ಕಳಪೆ ಕಟ್ಟಡದ ಸಾಮಗ್ರಿಗಳು, ಅವೈಜ್ಞಾನಿಕ ತಂತ್ರಜ್ಞಾನ
ದಿಂದ ಕಟ್ಟುತ್ತಿರುವ ಈ ಮನೆಗಳನ್ನು ಪಡೆದುಕೊಳ್ಳಲು ಸಾಲ ಮಾಡಿ ಹಣ ಕಟ್ಟುವುದು ವ್ಯರ್ಥ. ಕೂಡಲೇ ಶಾಸಕರು, ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿ, ಗುಣಮಟ್ಟದ ಹಾಗೂ ಮಗ್ಗ ಇಟ್ಟುಕೊಳ್ಳಲು ಅನುಕೂಲಕರವಾಗಬಲ್ಲ ವಿನ್ಯಾಸದಲ್ಲಿ ಮನೆಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.

**
ಕಟ್ಟಡ ನಿರ್ಮಾಣಕ್ಕೆ ಕಳಪೆ ಸಾಮಗ್ರಿ ಬಳಸುತ್ತಿಲ್ಲ. ನಿಯಮಾನುಸಾರ ಸಾಮಗ್ರಿಗಳನ್ನು ಬಳಸಿ, ನೀಡಿದ ವಿನ್ಯಾಸದಲ್ಲಿಯೇ ನಿರ್ಮಿಸಲಾಗುತ್ತಿದೆ
ಎಸ್.ಎಂ. ಪಾಟೀಲ, ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT