ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಒಳಿತೇ ಇಲ್ಲದ ಕೆಡುಕುಗಳು

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ದೇಶವ್ಯಾಪಿಯಾಗಿ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಸರ್ಕಾರಗಳಿಗೆ ಈ ಬಿಕ್ಕಟ್ಟನ್ನು ಎದುರಿಸಲು ಸರಿಯಾದ ಯೋಜನೆಗಳೇ ಹೊಳೆಯುತ್ತಿಲ್ಲವೇ ಅಥವಾ ಹೊಳೆದರೂ ಅವನ್ನು ಜನರಿಗೆ ಮನವರಿಕೆಯಾಗುವಂತೆ ವಿವರಿಸುವ ಸಾಮರ್ಥ್ಯವಿಲ್ಲವೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಮತ್ತೆ ಮತ್ತೆ ಬಡ್ಡಿರಹಿತ ಸಾಲ, ಸಾಲಮನ್ನಾ ಕಾರ್ಯಕ್ರಮಗಳನ್ನು ಘೋಷಿಸಿ ತಮ್ಮ ಬೊಕ್ಕಸವನ್ನು ಬರಿದಾಗಿಸುವ– ಆದರೆ ಅದರಿಂದ ಒಂದೂ ನಯಾಪೈಸೆಯ ಲಾಭ ಕಾಣದ ಕಾರ್ಯಕ್ರಮಗಳ ಹಿಂದೆ ಓಡುತ್ತಿವೆ. ಚುನಾವಣೆಗೆ ಮುನ್ನ ಮೋದಿಯವರು ನೀಡಿದ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ ₹ 15 ಲಕ್ಷ ಜಮೆ ಮಾಡುತ್ತೇನೆಂಬ ಜುಮ್ಲಾದಂತೆಯೇ, ಸಾಲಮನ್ನಾ ಮಾಡುತ್ತೇವೆನ್ನುವುದು ಬೇಜವಾಬ್ದಾರಿಯ ಮಾತು.

ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಗಂಭೀರವಾದದ್ದು. ಇದು ಅನೇಕ ವರ್ಷಗಳ ಅಸಡ್ಡೆಯಿಂದ ಉಂಟಾಗಿರುವ ಮಹಾಮಾರಿ. ಸಾಲಮನ್ನಾ, ಅದಕ್ಕೆ ಹಾಕುವ ಅತೀ ದುಬಾರಿ ತೇಪೆಯಷ್ಟೇ. ಅದರಿಂದಾಗಿ ನಾವು ರೈತಸ್ನೇಹಿಯೆಂದು ತೋರಿಸಿಕೊಳ್ಳಬಹುದಾದರೂ, ನಿಜಕ್ಕೂ ಅದು ರೈತವಿರೋಧಿ ಕ್ರಮವೇ ಆಗಿರುತ್ತದೆ.

ಮೊದಲಿಗೆ ಈ ಸಾಲಮನ್ನಾ ‘ಆಮ್ದನಿ ಅಠ್‌ಆಣಿ ಖರ್ಚಾ ರುಪೈಯಾ’ ಕಾರ್ಯಕ್ರಮ ಏಕೆ ಎನ್ನುವುದನ್ನು ಗಮನಿಸೋಣ. ಕಳೆದ ಬಾರಿ ಸಿದ್ದರಾಮಯ್ಯನವರು 2018-19ಕ್ಕೆ ಮಂಡಿಸಿದ ಆಯವ್ಯಯ ಪತ್ರದಲ್ಲಿ ರಾಜ್ಯಕ್ಕೆ ಒಟ್ಟಾರೆ ಬರುವ ತೆರಿಗೆಯ ಆದಾಯ (ಕೇಂದ್ರ ಅನುದಾನವೂ ಸೇರಿದಂತೆ) ಸುಮಾರು ₹ 1,62,765 ಕೋಟಿ. ಇಷ್ಟರ ಮೇಲೆ ರಾಜ್ಯ ಬಂಡವಾಳ ಲೆಕ್ಕದಲ್ಲಿ ಮಾಡಲಿರುವ ಸಾಲ ಸುಮಾರು ₹ 39,328 ಕೋಟಿ. ರಾಜ್ಯದ ಎಲ್ಲ ರಾಜಸ್ವ ಖರ್ಚುಗಳಿಗೂ ಮತ್ತ ಬಂಡವಾಳ ಖರ್ಚುಗಳಿಗೂ ಇರುವ ಅಂದಾಜು ಮೊತ್ತ ಇಷ್ಟೇ. ಇದರಲ್ಲಿ ಜಲಸಂಪನ್ಮೂಲಕ್ಕೆ ₹ 18,112 ಕೋಟಿ, ಗ್ರಾಮೀಣಾಭಿವೃದ್ಧಿಗೆ ₹ 14,268 ಕೋಟಿ, ಸಮಾಜ ಕಲ್ಯಾಣಕ್ಕೆ ₹11,821 ಕೋಟಿ ಕಾಪಿಡಲಾಗಿದೆ. ಒಟ್ಟಾರೆ ಕೃಷಿ ಮತ್ತು ತೋಟಗಾರಿಕೆಗೆ ಮಾಡಿರುವ ಅಂದಾಜು ₹ 7,301 ಕೋಟಿ ಮಾತ್ರ. ಈ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ನೋಡಿದರೆ ಸಾಲ ಮನ್ನಾ ಪ್ರಸ್ತಾಪ ‘ನನಗೆ ತಿನ್ನಲು ಅನ್ನವಿಲ್ಲ– ತಗೋ ನಿನಗೆ ಅರ್ಥ ರಾಜ್ಯ ಕೊಡುತ್ತೇನೆ’ ಎನ್ನುವಂಥ ಮಾತು.

₹ 55,000 ಕೋಟಿ ಸಾಲಮನ್ನಾ ಮಾಡಬೇಕಾದರೆ ದುಡ್ಡು ಎಲ್ಲಿಂದ ಬರುತ್ತದೆ? ಜಿ.ಎಸ್.ಟಿ ಇರುವುದರಿಂದ, ನಾವು ಸ್ಥಳೀಯ ತೆರಿಗೆಯನ್ನು ಹೆಚ್ಚಿಸುವ ಹಾಗಿಲ್ಲ. ಜಿಎಸ್‌ಟಿಯಿಂದ ರಾಜ್ಯಕ್ಕೆ ದೊರೆಯುವ ಪಾಲಿನ ಅಂದಾಜು ಮೊತ್ತ ಕೇವಲ ₹ 65,800 ಕೋಟಿ. ಇದರ ನಿರ್ಧಾರ ಜಿಎಸ್‌ಟಿ ಮಂಡಳಿಯ ಕೈಯಲ್ಲಿದೆ. ರಾಜ್ಯ ಸರ್ಕಾರಕ್ಕೆ ಈ ವಿಷಯದಲ್ಲಿ ಯಾವ ಹಿಡಿತವೂ ಇಲ್ಲ. ಈ ಅತಂತ್ರ ಸ್ಥಿತಿಯನ್ನು ನಾವು ಕೋಆಪರೇಟಿವ್ ಫೆಡರಲಿಸಂ ಹೆಸರಿನಲ್ಲಿ ಸ್ವಾಗತಿಸೋಣ!

14ನೇ ಹಣಕಾಸು ಆಯೋಗ ₹ 36,215 ಕೋಟಿ ರೂಪಾಯಿಗಳನ್ನು ಕರ್ನಾಟಕದ ಪಾಲಾಗಿ ನೀಡುತ್ತಿದೆ. ಇದರ ಹೊರತಾಗಿ ಕೇಂದ್ರದ ವಿವೇಚನಾ ಅನುದಾನವಾಗಿ ₹ 14,942 ಕೋಟಿ ದೊರೆಯುತ್ತದೆ (ಅದೃಷ್ಟವಶಾತ್ 15ನೇ ಹಣಕಾಸು ಆಯೋಗ ಇನ್ನೂ ತನ್ನ ವರದಿಯನ್ನು ನೀಡಿಲ್ಲ, ಅದು ನೀಡಿದಾಗ ನಮ್ಮ ಪರಿಸ್ಥಿತಿ ಏನೋ?). ತೆರಿಗೆಯನ್ನು ನಿರ್ಧರಿಸುವ ಅಧಿಕಾರವನ್ನು ಜಿಎಸ್‌ಟಿ ಮಂಡಳಿಗೆ ಬಿಟ್ಟುಕೊಟ್ಟಿರುವುದರಿಂದ ರಾಜ್ಯವೇ ತನ್ನ ಇರಾದೆಯಂತೆ ಹೇರಬಹುದಾದ ತೆರಿಗೆಯ ಮೊತ್ತ– ವಾಹನ, ನೋಂದಣಿ ಶುಲ್ಕ, ಅಬಕಾರಿ ಮತ್ತು ಇತ್ಯಾದಿಗಳಿಂದ ಸಂಗ್ರಹವಾಗುವುದು ₹ 37,644 ಕೋಟಿ ಮಾತ್ರ. ಪರಿಸ್ಥಿತಿ ಹೀಗಿರುವಾಗ ₹ 55,000 ಕೋಟಿಗಳನ್ನು ತರುವುದಾದರೂ ಎಲ್ಲಿಂದ?

ಕರ್ನಾಟಕವು ವರ್ಷಗಳಿಂದ ವಿತ್ತೀಯ ಹೊಣೆಗಾರಿಕೆಯ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುವ ರಾಜ್ಯ. ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.0 ದಾಟದೇ ಇರುವಂತೆ ನಿಖರವಾಗಿ ಹೇಳಬೇಕೆಂದರೆ ಶೇಕಡ 2.5ರಷ್ಟೇ ಇರುವಂತೆ ಸಿದ್ದರಾಮಯ್ಯನವರು ನೋಡಿಕೊಂಡಿದ್ದಾರೆ. ಹಾಗೆಯೇ ರಾಜ್ಯದ ಒಟ್ಟಾರೆ ಹಣಕಾಸು ಹೊಣೆಗಾರಿಕೆ ಒಟ್ಟು ಆಂತರಿಕ ಉತ್ಪನ್ನದ ಶೇಕಡ 25ಕ್ಕಿಂತ ಕಡಿಮೆ ಇದೆ. ಕಳೆದ ಬಜೆಟ್‌ನ ಅಂಕಿ ಅಂಶಗಳಂತೆ ಇದು ಶೇಕಡ 20.36ರಷ್ಟಿದೆ.

ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದಡಿ ಮುಂದಕ್ಕೆ ಸಾಗಬೇಕಾದರೆ ಸರ್ಕಾರ ಇನ್ನು ₹ 7,200 ಕೋಟಿಗಳಷ್ಟು ಸಾಲ ಪಡೆಯಬಹುದು. ಈ ಮೊತ್ತ ಹೊಣೆಗಾರಿಕೆಯ ಮಾಪಕಕ್ಕೆ ಅನುಗುಣವಾಗಿಯೇನೋ ಇದೆ. ಆದರೆ ಇದರಿಂದ ಬಹು ದೊಡ್ಡ ಹೊರೆಯನ್ನು ಮುಂದಿನ ಪೀಳಿಗೆಯ ಮೇಲೆ ಹೇರಿದಂತಾಗುತ್ತದೆ. ಈ ದೃಷ್ಟಿಯಲ್ಲಿ ಸಾಲಮನ್ನಾ ಮಾಡಲು ಯಾವುದೇ ರೀತಿಯ ಸಾಧ್ಯತೆಯೂ ರಾಜ್ಯದ ಲೆಕ್ಕಪತ್ರಗಳು ಮತ್ತು ಕಾನೂನಿನ ಮಿತಿಯಲ್ಲಿ ಕಾಣಿಸುತ್ತಿಲ್ಲ.

ಪ್ರಣಾಳಿಕೆಗಳನ್ನು ರೂಪಿಸಿದ ಕಾಲದಲ್ಲಿಯೂ ಇದೇ ಸತ್ಯವಾಗಿತ್ತು. ಅಂದರೆ ಚುನಾವಣಾ ಪ್ರಣಾಳಿಕೆಗಳು, ಸಾಕಾರಗೊಳಿಸುವ ಅಗತ್ಯವಿಲ್ಲದ ಕನಸಿನ ಮಾರಾಟ ಮಾತ್ರ ಎಂಬ ವಾದಕ್ಕೆ ಇದೊಂದು ಹೊಸ ಸಾಕ್ಷಿ. ಸರ್ಕಾರ ರಚಿಸಿದ ಮೇಲೂ ಇದು ಜಾರಿ ಮಾಡಲಾಗದ ಘೋಷಣೆಯಾಗಿಯೇ ಉಳಿಯುತ್ತದೆ. ಯಡಿಯೂರಪ್ಪನವರು ಮೊದಲ ದಿನವೇ ಸಾಲ ಮನ್ನಾದ ಘೋಷಣೆಗೆ ಹೊರಟಿದ್ದರೆಂದರೆ ತಮ್ಮ ಸರ್ಕಾರ ಹೆಚ್ಚು ಕಾಲ ಬಾಳುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು ಅನ್ನಿಸುತ್ತದೆ. ಕುಮಾರಸ್ವಾಮಿಯವರ ಮಟ್ಟಿಗೆ ಅವರ ಮುಖ್ಯಮಂತ್ರಿ ಕನಸು ನನಸಾಗಿದೆ. ಪರಿಣಾಮವಾಗಿ ಅವರು ಸಾಲ ಮನ್ನಾ ಎಂಬ ಮುಳ್ಳಿನ ಕಿರೀಟವನ್ನು ಧರಿಸಬೇಕಾಗಿ ಬಂದಿದೆ. ಯಡಿಯೂರಪ್ಪನವರು ಈ ಅವಕಾಶವನ್ನು ಬಳಸಿಕೊಂಡು ವಿರೋಧ ಪಕ್ಷದಲ್ಲಿ ಕುಳಿತು ಆ ಕಿರೀಟವನ್ನು ಕುಮಾರಸ್ವಾಮಿಯವರ ತಲೆಗೆ ಹೆಚ್ಚು ಹೆಚ್ಚು ಬಾಧೆ ಕೊಡುವಂತೆ ಟೈಟ್ ಮಾಡುತ್ತಿದ್ದಾರೆ. ಇದರಲ್ಲಿ ನಿಜಕ್ಕೂ ಭಾಗ್ಯವಂತ ಸಿದ್ದರಾಮಯ್ಯನವರೇ. ಅವರು ಈ ಘೋಷಣೆಯನ್ನು ಮಾಡಲೂ ಇಲ್ಲ, ಇದನ್ನು ಜಾರಿಗೆ ತರಬೇಕಾದ ಪೇಚಿಗೂ ಸಿಕ್ಕಿಲ್ಲ. ಹಾಗೂ ಪೇಚಿಗೆ ಸಿಕ್ಕವರ ಗೊಂದಲವನ್ನು ಹೊರಗೆ ಅನುಕಂಪದಿಂದ (ಬಹುಶಃ ಆಂತರಿಕವಾಗಿ ಖುಷಿಯಿಂದ) ಕಾಣುತ್ತಿರಬಹುದು.

ಒಂದು ವೇಳೆ ಸರ್ಕಾರ ಸಂಪೂರ್ಣ ಸಾಲ ಮನ್ನಾ ಘೋಷಣೆಗೆ ಬದ್ಧವಾಗಿ ಉಳಿಯಲು ಹೊರಟರೆ ಜನರು ಭಾರಿ ಪ್ರಮಾಣದ ತೆರಿಗೆ ಪಾವತಿಗೆ ಸಿದ್ಧವಾಗಬೇಕಾಗುತ್ತದೆ. ಜಿಎಸ್‌ಟಿಯಿಂದಾಗಿ ಕಡಿಮೆಯಾಗಿರುವ ತೆರಿಗೆ ಮೂಲಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಕರ್ನಾಟಕದಲ್ಲಿ ವಾಹನ ನೋಂದಣಿ, ವರ್ಗಾವಣೆ, ಆಸ್ತಿ ನೋಂದಣಿ ವರ್ಗಾವಣೆಯಂಥ ಕೆಲಸಗಳಿಗೆ ಮತ್ತು ಮದ್ಯಕ್ಕೆ ಭಾರಿ ಪ್ರಮಾಣದ ತೆರಿಗೆಯನ್ನು ಜನರು ಪಾವತಿಸಬೇಕಾಗುತ್ತದೆ. ಇಷ್ಟೆಲ್ಲಾ ತೆರಿಗೆಯನ್ನು ವಿಧಿಸಿದರೂ ಸಾಲಮನ್ನಾಕ್ಕಾಗಿ ವ್ಯಯಿಸಬೇಕಾದಷ್ಟು ಹಣ ವಸೂಲಾಗುವ ಸಾಧ್ಯತೆಯಿಲ್ಲ. ತೆರಿಗೆ ಹೇರಿಯೇ ಬಿಟ್ಟರೆಂದರೆ ಕರ್ನಾಟಕದ ಪ್ರಜೆಗಳು ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಮಹಾರಾಷ್ಟ್ರಕ್ಕೆ ಗುಳೇ ಹೋಗಬೇಕಾಗಬಹುದು!

ಇದು ಲೆಕ್ಕಪತ್ರದ ಮಾತಾಯಿತು. ಇನ್ನು ಈ ಕೆಲಸ ಯಾಕೆ ರೈತವಿರೋಧಿ ಎನ್ನುವುದನ್ನೂ ಗಮನಿಸೋಣ. ಸಾಲ ಮನ್ನಾ ಮಾಡುವುದರಿಂದ ರೈತರಿಗೆ ತಕ್ಷಣದ ಪರಿಹಾರ ಸಿಗುತ್ತದೆ. ಹೇಗೂ ಕಟ್ಟಲು ಸಾಧ್ಯವೇ ಆಗದ ಸಾಲವನ್ನು ಮನ್ನಾ ಮಾಡಿದರೆ ಮುಂದಿನ ಫಸಲಿಗೆ ಸಾಲ ಸಿಗಬಹುದೇ? ಆ ಖಾತ್ರಿ ಇಲ್ಲ. ಸಾಲದ್ದಕ್ಕೆ ಸಾಲಮನ್ನಾಕ್ಕೆ ಪಾತ್ರರಾದ ರೈತರಿಗೆ ಯಾರು ತಾನೇ ಹೊಸ ಸಾಲವನ್ನು ಕೊಡುತ್ತಾರೆ? ಬ್ಯಾಂಕುಗಳನ್ನು ಕೇಳಿನೋಡಿ – ಸಾಲ ಮನ್ನಾದ ಭಯವಿರುವ ಯಾವುದೇ ಸಾಲ ವಿತರಣೆಗೆ ಮುನ್ನ ಅವರು ಸಾವಿರಾರು ಬಾರಿ ಆಲೋಚಿಸುತ್ತಾರೆ. ಹೀಗೇ ಸಾಲಮನ್ನಾ ಮಾಡುವುದರಿಂದ ರೈತರ ತಲೆಯಲ್ಲಿರುವ ಒಂದು ಭಾರ ಕಡಿಮೆಯಾಗುತ್ತದೆಯೇ ಹೊರತು, ಮುಂದಿನ ಬೆಳೆಗೆ ಬೇಕಿರುವ ದುಡ್ಡು ಅವರ ಜೇಬುಗಳಿಗೆ ಬೀಳುವುದಿಲ್ಲ. ಹೀಗಾಗಿ ಅವರ ಬಿಕ್ಕಟ್ಟು ಮುಂದುವರೆಯುತ್ತದೆ. ಅಷ್ಟೇ ಅಲ್ಲ ಬ್ಯಾಂಕುಗಳ ದೃಷ್ಟಿಯಲ್ಲೂ ಅವರು ಗೌರವ ಕಳೆದುಕೊಳ್ಳುತ್ತಾರೆ. ಇದು ವೈಯಕ್ತಿಕ ನೆಲೆಯಲ್ಲಿ ರೈತರಿಗಾಗುವ ನಷ್ಟ.

ಸಾಂಸ್ಥಿಕ ನೆಲೆಯಲ್ಲೂ ರೈತರಿಗೆ ಇದರಿಂದ ನಷ್ಟವೇ ಆಗುತ್ತದೆ. 1989ರಲ್ಲಿ ದೇಶವ್ಯಾಪಿಯಾಗಿ ಮೊದಲ ಸಾಲಮನ್ನಾ ಯೋಜನೆ ಜಾರಿಗೊಂಡಿತು. ಇದರಿಂದ ದೊಡ್ಡ ಹೊಡೆತ ತಿಂದದ್ದು ಸಹಕಾರ ಸಂಘಗಳು. ಇದು ಬ್ಯಾಂಕುಗಳಿಗೆ ದೊಡ್ಡ ಹೊಡೆತವನ್ನು ಕೊಡಲಿಲ್ಲ ಎನ್ನುವಂತೆ ಕಂಡರೂ, ಅಲ್ಲಿಂದ ಮುಂದಕ್ಕೆ 2008ರ ಚಿದಂಬರಂ ಅವರ ಸಾಲಮನ್ನಾ ಮತ್ತು ಇತರ ರಾಜ್ಯ ಸರ್ಕಾರಗಳು ಘೋಷಿಸಿದ ಬಡ್ಡಿ ಸಬ್ಸಿಡಿ, ಬಡ್ಡಿರಹಿತ ಸಾಲ, ಮತ್ತು ಸಾಲಮನ್ನಾ ಕಾರ್ಯಕ್ರಮಗಳು ದೀರ್ಘಕಾಲೀನವಾಗಿ ರೈತ ವಿರೋಧಿಯೇ ಆದವು. ಕೃಷಿ ಸಾಲ ಕ್ಷೇತ್ರದಲ್ಲಿ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಪಾಲು ಕುಸಿಯುತ್ತಿರುವುದು ಮತ್ತು ಬಡ್ಡಿ ವ್ಯಾಪಾರಿಗಳ ಮತ್ತು ವೃತ್ತಿಪರ ಬಡ್ಡಿವ್ಯಾಪಾರಿಗಳ ಪಾಲು ಹೆಚ್ಚಾಗುತ್ತಿರುವುದು ನೋಡಿದರೆ, ಪ್ರತಿ ಸಾಲ ಮನ್ನಾ ಕಾರ್ಯಕ್ರಮ ರೈತರನ್ನು ಬ್ಯಾಂಕುಗಳಿಂದ ದೂರ ಮಾಡಿ ಬಡ್ಡಿವ್ಯಾಪಾರಿಗಳ ತೆಕ್ಕೆಗೆ ತಳ್ಳುತ್ತಿರುವುದನ್ನು ನಾವು ಕಾಣಬಹುದು (ಟೇಬಲ್ ನೋಡಿ).

ತಿಪ್ಪರಲಾಗ ಹಾಕಿ ಸಾಲ ಮನ್ನಾ ಮಾಡಿದರೂ ಅದರಿಂದಾಗುವ ಉಪಕಾರ ರೈತರು ಮಾಡಿದ ಸಾಂಸ್ಥಿಕ ಸಾಲಗಳಿಗಷ್ಟೇ ಸೀಮಿತವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ರೈತರು ಸಾಂಸ್ಥಿಕ ಮೂಲಗಳಿಂದ ದೂರವಾಗುತ್ತಿರುವ ಈ ಹೊತ್ತಿನಲ್ಲಿ ಬಡ್ಡಿ ವ್ಯಾಪಾರಿಗಳಿಂದ ಪಡೆದ ಸಾಲದ ಮೊತ್ತವೇ ದೊಡ್ಡದಿರುತ್ತದೆ. ಅದರ ಗತಿ ಏನು? ಸರಳವಾಗಿ ಹೇಳುವುದಾದರೆ ರೈತರ ಬಹುಪಾಲು ಸಾಲ ಅವರ ತಲೆಯ ಮೇಲೇ ಇರುತ್ತದೆ!

ಚಿದಂಬರಂ ಅವರು ಮಾಡಿದಂತೆ ರಾಷ್ಟ್ರವ್ಯಾಪಿಯಾಗಿ ಸಾಲಮನ್ನಾ ಮಾಡದೇ ಅದನ್ನು ರಾಜ್ಯಗಳಿಗೇ ಬಿಟ್ಟಿರುವ ಮೋದಿ ಸರ್ಕಾರದ ಚಾಣಾಕ್ಷತೆಯನ್ನು ಕರ್ನಾಟಕ ಸರ್ಕಾರ ಗಮನಿಸಬೇಕು. ಭಾರತೀಯ ಜನತಾ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಈ ಸಾಲಮನ್ನಾವನ್ನು ಘೋಷಿಸುತ್ತಿರುವುದನ್ನು ಈ ದೃಷ್ಟಿಯಲ್ಲೇ ನೋಡಬೇಕಾಗುತ್ತದೆ. ಮೇಲ್ನೋಟಕ್ಕೆ ಇದು ಆಯಾ ರಾಜ್ಯಗಳ ಹೊಣೆಗಾರಿಕೆ ಎನಿಸಿದರೂ ವಿವೇಚನಾನುದಾನದ ಮೂಲಕ ಅವರಿಗೆ ಹೊರೆಯನ್ನು ತಾಳಿಕೊಳ್ಳುವುದಕ್ಕೆ ಕೇಂದ್ರ ಸಹಕರಿಸುವ ಸಾಧ್ಯತೆ ಇದೆ.

ಇನ್ನು ಮೂರನೆಯ ವಾದಕ್ಕೆ ಬರೋಣ. ದೊಡ್ಡ ಉದ್ಯಮಿಗಳ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತಿದೆ. ಹೀಗಾಗಿ ರೈತರ ಸಾಲವನ್ನೇಕೆ ಮನ್ನಾ ಮಾಡಬಾರದು ಎಂಬ ವಾದವಿದು. ಇದೊಂದು ವಿತಂಡವಾದವೇ ಸರಿ. ದೊಡ್ಡ ಉದ್ಯಮಿಗಳ ಸಾಲವನ್ನು ವಸೂಲು ಮಾಡುವ ಪ್ರಯತ್ನವನ್ನು ಆಯಾ ಬ್ಯಾಂಕುಗಳು ಮಾಡುತ್ತಿವೆ. ಎಲ್ಲಿ ಉದ್ಯಮಗಳು ಕಷ್ಟದಲ್ಲಿವೆಯೋ ಅಲ್ಲಿ ನಿಯಮಾನುಸಾರ ಅವುಗಳನ್ನು ವಸೂಲು ಮಾಡಲಾಗದ ಸಾಲವೆಂದು ಘೋಷಿಸುವುದು, ಅವುಗಳನ್ನು ವಸೂಲು ಮಾಡಲು ಸಂಸ್ಥೆಗಳನ್ನು ದಿವಾಳಿ ಕಾಯಿದೆಯಡಿಯಲ್ಲಿ ತಂದು ಆದಷ್ಟೂ ವಸೂಲು ಮಾಡುವ ಪ್ರಯತ್ನವನ್ನು ಮಾಡಿದ ನಂತರ, ಬ್ಯಾಂಕುಗಳ ಲೆಕ್ಕದಿಂದ ಆ ಸಾಲಗಳನ್ನು ತೆಗೆದುಹಾಕಲಾಗುತ್ತದೆ (ಈ ಪ್ರಕ್ರಿಯೆಯಲ್ಲಿ ಹಣಕಾಸು ಸಚಿವಾಲಯದಿಂದ ಬ್ಯಾಂಕುಗಳಿಗೆ ದೂರವಾಣಿ ಕರೆ ಬಂದರೆ ಅದು ಬೇರೆಯ ಮಾತು!). ಇಲ್ಲೊಂದು ನಿಯಮಬದ್ಧ ವ್ಯವಸ್ಥೆ ಇದೆ. ಈ ಸಾಲಗಳನ್ನು ಸರ್ಕಾರ ಮನ್ನಾ ಮಾಡುವುದಿಲ್ಲ. ಆದರೆ, ಹೀಗೆ ವಸೂಲಾಗದ ಸಾಲದ ಹೊರೆ ಹೆಚ್ಚಾಗಿ ಬ್ಯಾಂಕುಗಳು ನಷ್ಟವನ್ನನುಭವಿಸಿದರೆ, ಆಗ ಸರ್ಕಾರ ತನ್ನ ಮಾಲೀಕತ್ವವನ್ನು ಬಳಸಿ ಈ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳವನ್ನು ಕೊಡುವ ಕೆಲಸ ಮಾಡುತ್ತದೆ. ಇದು ಒಂದು ಸಂಕೀರ್ಣವಾದ ಪ್ರಕ್ರಿಯೆ. ರೈತರ ಸಾಲದಲ್ಲೂ ಇದೇ ಪ್ರಕ್ರಿಯೆಯನ್ನು ಅಳವಡಿಸಸಲು ಸರ್ಕಾರ ಮುಂದಾಗುವುದಿಲ್ಲ. ಏಕೆಂದರೆ ಈ ಸಾಲದ ಮೊತ್ತಗಳು ಸಣ್ಣವು ಹಾಗೂ ಅವು ಎಲ್ಲೆಡೆಯೂ ಹಂಚಿ ಹೋಗಿರುವುದರಿಂದ ಸಾಲಮನ್ನಾ ಮಾಡುವುದೇ ಸರ್ಕಾರಕ್ಕೆ ಸರಳೋಪಾಯವಾಗಿ ಕಾಣಿಸುತ್ತದೆ. ತಕ್ಷಣದ ರಾಜಕೀಯದಲ್ಲಿ ಇದು ಪರಿಹಾರದಂತೆ ಕಂಡರೂ ರೈತರ ಹಿತದೃಷ್ಟಿಯಿಂದ ಮತ್ತು ಸಾಂಸ್ಥಿಕ ಮೂಲಸೌಕರ್ಯದ ದೃಷ್ಟಿಯಿಂದ ಇದು ಆತ್ಮಘಾತುಕವಾದ ಕ್ರಿಯೆ.

ಈ ಎಲ್ಲ ವಿಚಾರಗಳನ್ನೂ ಕುಮಾರಸ್ವಾಮಿಯವರು ಮನಗಂಡು ರೈತರಿಗೆ ಭಿನ್ನ ರೀತಿಯಲ್ಲಿ – ಹಾಗೂ ರೈತವಿರೋಧಿಯಲ್ಲದ ರೀತಿಯ ಕ್ರಮವನ್ನು ಕೈಗೊಳ್ಳಬಹುದೆಂದು ಆಶಿಸೋಣ. ಈ ವಿಷಯದಲ್ಲಿ ಅವರು ತಜ್ಞರನ್ನೂ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳೂ (ವಿತ್ತೀಯ ಜವಾಬ್ದಾರಿಯನ್ನು ಬಿಟ್ಟುಕೊಡದ ಹಣಕಾಸು ಸಚಿವರೂ) ಆಗಿದ್ದ ಸಿದ್ದರಾಮಯ್ಯನವರ ಅನುಭವ ಮತ್ತು ಬುದ್ಧಿಮತ್ತೆಯ ಉಪಯೋಗ ಮಾಡಿಕೊಂಡಾರೆಂದು ಆಶಿಸೋಣ.

ಸಾಲ ಮನ್ನಾದಿಂದ ಕೇಂದ್ರ ಸರ್ಕಾರಕ್ಕೆ ಲಾಭ!

ಸಾಲಮನ್ನಾ ಆದಾಗ ರೈತರ ಕೈಗೆ ಹೆಚ್ಚಿನ ದುಡ್ಡೇನೂ ಸಿಗುವುದಿಲ್ಲ. ಬದಲಿಗೆ ರೈತರ ಸಾಲವನ್ನು ಬ್ಯಾಂಕುಗಳಿಗೆ ಸರ್ಕಾರ ನೇರವಾಗಿ ಕಟ್ಟಿ ತೀರಿಸುತ್ತದೆ. ಹೀಗಾಗಿ ಬ್ಯಾಂಕುಗಳು ರೈತರ ಮನೆಮನೆಗೆ ಹೋಗಿ ವಸೂಲು ಮಾಡಬೇಕಿದ್ದ ಸಾಲವು ಒಂದೇ ಏಟಿಗೆ, ಅನಾಯಾಸವಾಗಿ ತಿಜೋರಿಗೆ ಬಂದು ಬೀಳುತ್ತದೆ. ಇದರ ಉಪಯೋಗವಾಗುವುದು ರೈತರಿಗಿಂತ ಬ್ಯಾಂಕುಗಳಿಗೇ ಹೆಚ್ಚು.

ಇನ್ನೂ ಗಮ್ಮತ್ತಿನ ವಿಚಾರವೆಂದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲವನ್ನು ರಾಜ್ಯ ಸರ್ಕಾರ ತೀರಿಸಿದರೆ ಅದು ಸುತ್ತು ಬಳಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವೇ ಅನುದಾನ ನೀಡಿದಂತೆ ಆಗುತ್ತದೆ!

ಅಂದರೆ ಈ ಸಾಲ ಮರುಪಾವತಿಯಾಗದಿದ್ದರೆ ಆಗುತ್ತಿದ್ದ ನಷ್ಟವನ್ನು ರಾಜ್ಯ ಸರ್ಕಾರ ತನ್ನ ಖರ್ಚಿನಿಂದ ಭರಿಸುತ್ತಿದೆ. ಅಕಸ್ಮಾತ್ ರಾಜ್ಯ ಸರ್ಕಾರ ಮನ್ನಾ ಮಾಡದಿದ್ದರೆ ರೈತರ ಸಾಲದ ಬಾಕಿಯಿಂದ ಆಗುವ ನಷ್ಟದ ಪರಿಹಾರಕ್ಕೆ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳವನ್ನು ಕೊಡಬೇಕಾಗುತ್ತದೆ. ವಸೂಲಾಗದ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದರೆ ಅದರ ಫಾಯಿದೆ ಬ್ಯಾಂಕುಗಳ ಮಾಲೀಕರಾದ ಕೇಂದ್ರ ಸರ್ಕಾರಕ್ಕೆ ಹೆಚ್ಚು!

(ನಾಳೆ: ರೈತರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳು)

ಲೇಖಕರು ಐಐಎಂ-ಬಿಯಲ್ಲಿ ಸಂದರ್ಶಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT