ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚರ್‌ ವಿರುದ್ಧ ಸ್ವತಂತ್ರ ತನಿಖೆ

ಹಿತಾಸಕ್ತಿ ಸಂಘರ್ಷ ಆರೋಪ: ಐಸಿಐಸಿಐ ಬ್ಯಾಂಕ್‌ ನಿರ್ಧಾರ
Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಸಿಇಒ ಚಂದಾ ಕೊಚ್ಚರ್‌ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ನಿರ್ಧರಿಸಿದೆ.

ಚಂದಾ ಕೊಚ್ಚರ್‌ ಅವರ ಅಧಿಕಾರಾವಧಿಯಲ್ಲಿ ಕೆಲ ಸಾಲಗಳಿಗೆ ಸಂಬಂಧಿಸಿದಂತೆ ಹಿತಾಸಕ್ತಿಗಳ ಸಂಘರ್ಷ, ಕೊಡು – ತೆಗೆದುಕೊಳ್ಳುವ ವ್ಯವಹಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಅನಾಮಧೇಯ ವ್ಯಕ್ತಿ ದೂರು ನೀಡಿದ್ದಾನೆ.

ಆರೋಪಗಳ ಬಗ್ಗೆ ವಿಶ್ವಾಸಾರ್ಹ ವ್ಯಕ್ತಿಯಿಂದ ಸ್ವತಂತ್ರ ತನಿಖೆ ನಡೆಸುವುದಾಗಿ ಬ್ಯಾಂಕ್‌, ಷೇರುಪೇಟೆಗಳಿಗೆ ಮಾಹಿತಿ ನೀಡಿದೆ. ಕೊಚ್ಚರ್‌ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ವಿವರಣೆ ನೀಡಲಾಗಿಲ್ಲ. ವಿಚಾರಣೆಯ ವ್ಯಾಪ್ತಿ ಸಮಗ್ರವಾಗಿರಲಿದೆ. ತನಿಖೆಗೆ ಅಗತ್ಯ ಬಿದ್ದರೆ ಇ–ಮೇಲ್‌ಗಳ ಪರಿಶೀಲನೆ, ಸಂಬಂಧಿತ ಸಿಬ್ಬಂದಿಯ ದಾಖಲಾಗಿರುವ ಹೇಳಿಕೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಚಂದಾ ಕೊಚ್ಚರ್‌ ಅವರಿಗೆ ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಹಿಂದಿನ ವಾರ ನೋಟಿಸ್‌ ಜಾರಿ ಮಾಡಿತ್ತು.

ವಿಡಿಯೊಕಾನ್‌ ಸಮೂಹ ಮತ್ತು ಎನ್‌ಯುಪವರ್‌ ರಿನ್ಯೂವಬಲ್ಸ್‌ ನಡುವಣ ಕೆಲ ವ್ಯವಹಾರಗಳ ಬಗ್ಗೆ ‘ಸೆಬಿ’ ಕೇಳಿದ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿತ್ತು.

ಬ್ಯಾಂಕ್‌, 2012ರಲ್ಲಿ ವಿಡಿಯೊಕಾನ್‌ಗೆ ₹ 3,250 ಕೋಟಿ ಸಾಲ ಮಂಜೂರಾತಿ ಮಾಡಿರುವ ಮತ್ತು ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರು ಈ ಪ್ರಕರಣದಲ್ಲಿ ನಿರ್ವಹಿಸಿರುವ ಪಾತ್ರದ ಬಗ್ಗೆ ಸಿಬಿಐ ಕೂಡ ಪ್ರಾಥಮಿಕ ತನಿಖೆ ಆರಂಭಿಸಿದೆ.

ಐಸಿಐಸಿಐ ಬ್ಯಾಂಕ್‌ ಒಳಗೊಂಡಂತೆ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಮಂಜೂರಾತಿ ಆಗುತ್ತಿದ್ದಂತೆ ವಿಡಿಯೊಕಾನ್‌ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರು, ದೀಪಕ್‌ ಕೊಚ್ಚರ್‌ ಅವರ ಒಡೆತನದ  ಎನ್‌ಯುಪವರ್‌ ರಿನ್ಯೂವಬಲ್ಸ್‌ ಸಂಸ್ಥೆಯಲ್ಲಿ ₹ 64 ಕೋಟಿಗಳನ್ನು ಹೂಡಿಕೆ ಮಾಡಿದ್ದರು. ಇದೊಂದು ಪರಸ್ಪರ ಕೊಡು – ತೆಗೆದುಕೊಳ್ಳುವ ವ್ಯವಹಾರ ಆಗಿತ್ತು ಎಂದು ದೂರಲಾಗಿತ್ತು.

ಈ ಸಾಲ ಮಂಜೂರಾತಿಯಲ್ಲಿ ತನ್ನಿಂದ ಯಾವುದೇ ಲೋಪ ಉಂಟಾಗಿಲ್ಲ. ವಿಡಿಯೊಕಾನ್‌ಗೆ ಸಾಲ ಮಂಜೂರು ಮಾಡಿದ ಬ್ಯಾಂಕ್‌ಗಳ ಒಕ್ಕೂಟದ ಭಾಗವಾಗಿ ಬ್ಯಾಂಕ್ ತನ್ನ ಕರ್ತವ್ಯ ನಿರ್ವಹಿಸಿದೆ ಎಂದು ಐಸಿಐಸಿಐ ಬ್ಯಾಂಕ್‌, ತನ್ನ ವಿರುದ್ಧದ ಆರೋಪಗಳನ್ನು ಈಗಾಗಲೇ ತಳ್ಳಿ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT