7

ಮುಷ್ಕರ: ಬ್ಯಾಂಕ್ ಸೇವೆ ವ್ಯತ್ಯಯ

Published:
Updated:
ಮುಷ್ಕರ: ಬ್ಯಾಂಕ್ ಸೇವೆ ವ್ಯತ್ಯಯ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರು ಎರಡು ದಿನಗಳ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ದೇಶದಾದ್ಯಂತ ಬುಧವಾರ ಬ್ಯಾಂಕಿಂಗ್‌ ವಹಿವಾಟಿಗೆ ತೀವ್ರ ಧಕ್ಕೆ ತಟ್ಟಿತು.

ಅಂದಾಜು 10 ಲಕ್ಷ ಬ್ಯಾಂಕ್‌ ಉದ್ಯೋಗಿಗಳು ಈ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಇರಿಸುವ, ನಿಶ್ಚಿತ ಠೇವಣಿ (ಎಫ್‌.ಡಿ) ನವೀಕರಿಸುವ, ಸರ್ಕಾರಿ ಖಜಾನೆ ಚಟುವಟಿಕೆ, ಹಣ ಮಾರುಕಟ್ಟೆಯ ವಹಿವಾಟುಗಳ ಮೇಲೆ ಈ ಮುಷ್ಕರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗುರುವಾರವೂ ಈ ಮುಷ್ಕರ ಮುಂದುವರೆಯಲಿದೆ.

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ಗಳಲ್ಲಿ  ಚೆಕ್‌ ಕ್ಲಿಯರೆನ್ಸ್‌ ಹೊರತುಪಡಿಸಿ ಉಳಿದಂತೆ ವಹಿವಾಟು ಎಂದಿನಂತೆ ಇತ್ತು. ತಿಂಗಳ ಅಂತ್ಯದಲ್ಲಿ ಈ ಮುಷ್ಕರ ನಡೆಯುತ್ತಿರುವುದರಿಂದ ಬ್ಯಾಂಕ್‌ ಶಾಖೆಗಳಿಂದ ವೇತನ ಪಡೆಯುವುದಕ್ಕೆ ತೊಂದರೆ ಆಗುತ್ತಿದೆ. ಕೆಲ ಎಟಿಎಂಗಳಲ್ಲಿ ಹಣ ಸಿಗದಿರುವ ಸಾಧ್ಯತೆ ಎದುರಾಗಿದೆ.

‘ಭಾರತೀಯ ಬ್ಯಾಂಕ್‌ ಸಂಘ  (ಐಬಿಎ) ಮುಂದಿಟ್ಟಿರುವ ಶೇ 2ರಷ್ಟು ವೇತನ ಹೆಚ್ಚಳದ ಪ್ರಸ್ತಾವ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಗಳು ಮತ್ತು ‘ಐಬಿಎ’ ಮಧ್ಯೆ ನಡೆದ ಹಲವಾರು ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ. ಬ್ಯಾಂಕಿಂಗ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ಆಶ್ರಯದಲ್ಲಿ ಈ ಮುಷ್ಕರ ನಡೆಯುತ್ತಿದೆ. ಹಿಂದಿನ ಬಾರಿ ಶೇ 15ರಷ್ಟು ವೇತನ ಪರಿಷ್ಕರಿಸಲಾಗಿತ್ತು’ ಎಂದು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ. ಎಚ್‌. ವೆಂಕಟಾಚಲಂ ಹೇಳಿದ್ದಾರೆ.

‘ಇಷ್ಟು ಅಲ್ಪ ಪ್ರಮಾಣದ ವೇತನ ಪರಿಷ್ಕರಿಸುವುದಾಗಿ ಹೇಳಿರುವುದು ಬ್ಯಾಂಕ್‌ ನೌಕರರ ಪಾಲಿಗೆ ಅವಮಾನಕರವಾಗಿದೆ. ಹೀಗಾಗಿ ಮುಷ್ಕರ ನಡೆಸದೆ ನಮಗೆ ಬೇರೆ ದಾರಿಯೇ ಇದ್ದಿರಲಿಲ್ಲ’ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಜಂಟಿ ಪ್ರಧಾನ ಕಾರ್ಯದರ್ಶಿ ರವೀಂದರ್‌ ಗುಪ್ತಾ ಹೇಳಿದ್ದಾರೆ.

‘ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಜನಧನ್‌ ಕಾರ್ಯಕ್ರಮ ಮತ್ತು ನೋಟು ರದ್ದತಿ ನಿರ್ಧಾರಗಳ ಯಶಸ್ಸಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು (ಪಿಎಸ್‌ಬಿ) ಪ್ರಮುಖ ಪಾತ್ರ ನಿರ್ವಹಿಸಿವೆ. ಆದರೆ, ನಮ್ಮ ಕೆಲಸಕ್ಕೆ ಕೇವಲ ಶೇ 2ರಷ್ಟು ಪುರಸ್ಕಾರ ನೀಡಲು ಮುಂದಾಗಿರುವುದು, ದೇಶ ನಿರ್ಮಾಣದಲ್ಲಿ ತೊಡಗುವ ಬ್ಯಾಂಕ್‌ ಸಿಬ್ಬಂದಿಗೆ ಮಾಡಿರುವ ಅನ್ಯಾಯವಾಗಿದೆ’ ಎಂದು ಹೇಳಿದ್ದಾರೆ.

ರಾಜಧಾನಿಯಲ್ಲೂ ವಹಿವಾಟು ಸ್ಥಗಿತ

ಬೆಂಗಳೂರು:
ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ಕರೆಯ ಮೇರೆಗೆ ಕೆಲಸ ಬಹಿಷ್ಕರಿಸಿ ನಗರದ ಬ್ಯಾಂಕ್‌ ಉದ್ಯೋಗಿಗಳು ಗುರುವಾರ ಮುಷ್ಕರ ನಡೆಸಿದರು.

ತಮ್ಮ, ತಮ್ಮ ಬ್ಯಾಂಕ್‌ಗಳಿಂದ ಮೆರವಣಿಗೆ ಮೂಲಕ ನಗರದ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಬಂದು ಸೇರಿದ ಉದ್ಯೋಗಿಗಳು, ಬಹಿರಂಗ ಸಭೆ ನಡೆಸಿದರು. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.

‘ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ‘ಐಬಿಎ’ ಜತೆ ನಡೆಸಿರುವ ಮಾತುಕತೆ ವಿಫಲವಾಗಿದೆ. ಹೀಗಾಗಿ, ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಪ್ರತಿಭಟನಾನಿರತರು ಹೇಳಿದರು.

ಮುಷ್ಕರದಿಂದಾಗಿ ಗ್ರಾಹಕರು ತೊಂದರೆ ಅನುಭವಿಸಿದರು. ಕೆಲವೆಡೆ ಎಟಿಎಂ ಯಂತ್ರಗಳಲ್ಲಿ ಹಣ ಸಿಗಲಿಲ್ಲ. ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್‌ ಸೇವೆಯಲ್ಲೂ ವ್ಯತ್ಯಯ ಉಂಟಾಯಿತು. ಶುಕ್ರವಾರವೂ ಬ್ಯಾಂಕ್ ಮುಷ್ಕರ ಮುಂದುವರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry