ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಶುಭಾರಂಭ: ಮುನ್ನೆಚ್ಚರಿಕೆ ವಹಿಸಿ

Last Updated 30 ಮೇ 2018, 19:49 IST
ಅಕ್ಷರ ಗಾತ್ರ

ರಾಜ್ಯದ ಕರಾವಳಿಗೆ ಮುಂಗಾರು ಮಳೆ ಅವಧಿಗೂ ಮುನ್ನ ಅಬ್ಬರದ ಪ್ರವೇಶ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಧಾರವಾಡ, ಗದಗ, ಬಾಗಲಕೋಟೆ ಮುಂತಾದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಧಾರಾಕಾರ ಮಳೆ ಸುರಿದಿರುವುದು ರೈತರಲ್ಲಿ ಸಂತಸ ತಂದಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡದ್ದು ಈ ಸಲ ಕರಾವಳಿಯಲ್ಲಿ ಮಳೆಯ ‘ಅಬ್ಬರ’ಕ್ಕೆ ಕಾರಣವಾಗಿದ್ದು ಜನಸಾಮಾನ್ಯರು ತೊಂದರೆ ಅನುಭವಿಸಿರುವುದು ನಿಜ. ಅದರ ಹೊರತಾಗಿಯೂ ಸಾಮಾನ್ಯವಾಗಿ ಜೂನ್‌ ಒಂದರಿಂದ ಆರಂಭವಾಗುವ ಮುಂಗಾರು ಮಳೆ ಈ ಸಲ ನಾಲ್ಕು ದಿನ ಮೊದಲೇ ಶುರುವಾಗಿರುವುದು ಶುಭಸೂಚಕ. ಇನ್ನು ಸೆಪ್ಟೆಂಬರ್‌ವರೆಗೂ ಮುಂಗಾರು ಸುಗಮವಾಗಿ ಸುರಿಯುವ ನಿರೀಕ್ಷೆಯನ್ನೂ ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.

‘ಈ ಸಲ ಉತ್ತಮವಾಗಿ (ಶೇ 96ರಿಂದ ಶೇ 104ರಷ್ಟು) ಮಳೆಯಾಗಲಿದೆ’ ಎಂಬ ಭವಿಷ್ಯವನ್ನೂ ಹವಾಮಾನ ಇಲಾಖೆ ನುಡಿದಿದೆ. ಹಾಗೆ ನೋಡಿದರೆ, ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯೂ ಈ ಸಲ ಚೆನ್ನಾಗಿಯೇ ಇತ್ತು. ಕಳೆದ ಎರಡು ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಾಗ್ಗೆ ಮಳೆ ಸುರಿದಿರುವುದು ರೈತರ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಮುಖ್ಯವಾಗಿ ತೀವ್ರ ಕುಸಿತ ಕಂಡಿದ್ದ ಅಂತರ್ಜಲ ಹೆಚ್ಚಳಕ್ಕೆ ಈ ಮುಂಗಾರುಪೂರ್ವ ಮಳೆ ಬಹಳಷ್ಟು ಕೊಡುಗೆ ನೀಡಿದೆ. ಬೇಸಿಗೆಯಲ್ಲಿ ಕೆರೆ ಕಟ್ಟೆಗಳು ಪೂರಾ ಬತ್ತಿಹೋಗುವುದನ್ನು ತಡೆಹಿಡಿದಿದೆ.

ಈ ಹಿನ್ನೆಲೆಯಲ್ಲಿ ಒಂದೆರಡು ಜಿಲ್ಲೆಗಳನ್ನು ಬಿಟ್ಟರೆ, ರಾಜ್ಯದ ಎಲ್ಲೆಡೆ ಈ ಸಲ ಬೇಸಿಗೆಯಲ್ಲಿ ನೀರಿನ ಕೊರತೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಮುಂಗಾರುಪೂರ್ವದ ಮಳೆ ಈ ಸಲ ಸಾಕಷ್ಟು ಚೆನ್ನಾಗಿ ಬಿದ್ದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಸೂಕ್ತ ಚಾಲನೆ ದೊರೆಯಲಿದೆ. ಸಾಮಾನ್ಯವಾಗಿ ಒಟ್ಟು ಮಳೆಯ ಶೇ 70ರಷ್ಟು ಮಳೆ ಮುಂಗಾರು ಅವಧಿಯಲ್ಲಿಯೇ ಸುರಿಯುತ್ತದೆ. ಈ ದೃಷ್ಟಿಯಿಂದಲೂ ಈ ಬಾರಿ ಮುಂಗಾರು ಮಳೆ ಭರವಸೆ ಹುಟ್ಟಿಸಿರುವುದು ಆಶಾದಾಯಕ.

ರಾಜ್ಯದ ವಿವಿಧೆಡೆ ಮಳೆಯ ಅಬ್ಬರದಲ್ಲಿ ಸಿಡಿಲು ಬಡಿದು ಮತ್ತು ಗೋಡೆ ಕುಸಿದು ಒಂಬತ್ತು ಜನ ಮೃತಪಟ್ಟಿರುವುದು ದುರದೃಷ್ಟಕರ. ಮಂಗಳೂರು ನಗರದಲ್ಲಿ ಸತತ ಎಂಟು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ನೀರಿನಲ್ಲಿ ಶಾಲಾ ಬಾಲಕಿ ಕೊಚ್ಚಿ ಹೋದ ಪ್ರಕರಣವೂ ವರದಿಯಾಗಿದೆ. ಎಂದರೆ ಅಲ್ಲಿನ ನಗರಾಡಳಿತವು ಮುಂಗಾರಿನ ಅಬ್ಬರದ ಅಪಾಯಗಳನ್ನು ಎದುರಿಸಲು ಸನ್ನದ್ಧವಾಗಿಲ್ಲ ಎನ್ನುವುದನ್ನು ಸೂಚಿಸುವಂತಿದೆ. ಬೆಂಗಳೂರು ಸಹಿತ ರಾಜ್ಯದ ಇತರ ನಗರಗಳಿಗೂ ಇದು ಎಚ್ಚರಿಕೆಯ ಮುನ್ಸೂಚನೆ. ಬೆಂಗಳೂರು ಸಹಿತ ಬಹುತೇಕ ನಗರಗಳಲ್ಲಿ ಮುಂಗಾರುಪೂರ್ವ ಮಳೆಯಿಂದ ರಸ್ತೆಗಳಲ್ಲಿ ಹೊಂಡಗಳು ಬಿದ್ದಿವೆ.

ಒಳಚರಂಡಿಯನ್ನು ಪೂರ್ಣ ಸ್ವಚ್ಛಗೊಳಿಸಿ, ಮಳೆಗಾಲವನ್ನು ಎದುರಿಸಲು ತಯಾರಿ ನಡೆಸುವ ಕೆಲಸವೂ ಸರಿಯಾಗಿ ಆಗಿಲ್ಲ. ಸ್ಥಳೀಯ ಆಡಳಿತ ಯಂತ್ರವನ್ನು ಈ ನಿಟ್ಟಿನಲ್ಲಿ ಚುರುಕುಗೊಳಿಸಬೇಕಾದ ಅಗತ್ಯವಿದೆ. ಇನ್ನೆರಡು ದಿನಗಳಲ್ಲಿ  ದಕ್ಷಿಣದ ಬಹುತೇಕ ಎಲ್ಲ ಜಿಲ್ಲೆಗಳನ್ನೂ ಆವರಿಸಲಿರುವ ಮುಂಗಾರು ಮಳೆ ಹೆಚ್ಚಿನ ಅನಾಹುತ ಉಂಟು ಮಾಡುವುದನ್ನು ತಡೆಯಲು ಅಧಿಕಾರಿಗಳ ಕಾರ್ಯಪಡೆಯನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಅನಿಶ್ಚಿತತೆ ಈ ನಿಟ್ಟಿನಲ್ಲಿ ಅಡ್ಡಿಯಾಗದಂತೆ ಮುಖ್ಯಮಂತ್ರಿ ಗಮನ ಹರಿಸಬೇಕಾದ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT