ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ತೂರಾಟ, ಬಸ್‌ಗಳು ಜಖಂ

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಿಕುರಳಿಯಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದ ಬಸ್‌ ನಿಲ್ದಾಣದ ಮೇಲೆ ಬುಧವಾರ ಬೆಳಿಗ್ಗೆ ಕಲ್ಲು ತೂರಾಟ ಮಾಡಿದ್ದರಿಂದ, ಎರಡು ಬಸ್‌ ಜಖಂಗೊಂಡಿವೆ. ನಿಲ್ದಾಣದ ನಿಯಂತ್ರಣ ಕೊಠಡಿಯ ಕಿಟಕಿ ಗಾಜುಗಳು ಪುಡಿಯಾಗಿವೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ನಂದಿಕುರಳಿಯಲ್ಲಿ ಕ್ರಷರ್‌ ಹಾಕಿರುವುದರ ವಿರುದ್ಧ ಗುಂಪೊಂದು ಮಂಗಳವಾರ ತಡರಾತ್ರಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನಾಕಾರರು ಹಾಗೂ ಅಲ್ಲಿ ಕೆಲಸ ಮಾಡುವವರ ನಡುವೆ ಕಲ್ಲು ತೂರಾಟ ನಡೆದಿತ್ತು. ಆ ಸಂದರ್ಭದಲ್ಲಿ ರೆಹಮತಬಿ ಮೀರಾಸಾಬ ಮುಲ್ತಾನಿ (34) ಎಂಬುವರು ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಗುಂಪೊಂದು ಬುಧವಾರ ಪಟ್ಟಣದಲ್ಲಿ ದಾಂದಲೆ ನಡೆಸಿತು.

‘ನನ್ನ ಪತ್ನಿ ಮುಲ್ತಾನಿ ಸತ್ತಿದ್ದಲ್ಲ. ಅವರನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿ ಮೀರಾಸಾಬ ಮುಲ್ತಾನಿ, 23 ಮಂದಿ ವಿರುದ್ಧ ದೂರು ನೀಡಿದ್ದಾರೆ.

ಕಲ್ಲು ತೂರಾಟದಲ್ಲಿಗಾಯಗೊಂಡಿರುವ, ಲಾಲಸಾಬ ಮುಲ್ತಾನಿ ಮತ್ತು ಪೀರ್‌ಸಾಬ್‌ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿಕುರಳಿ ಹಾಗೂ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ಇದೆ. ಸ್ವಯಂ ಘೋಷಿತ ಬಂದ್ ವಾತಾವರಣವಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸ
ಲಾಗಿದೆ.

‘ಕ್ರಷರ್ ಹಾಕಿರುವ ಜಾಗದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಮುಲ್ತಾನಿ ಅವರು ಅಲ್ಲಿನ ಕೊಠಡಿಯ ಮೆಟ್ಟಿಲಿಂದ ಜಾರಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ಎಸ್ಪಿ ಸುಧೀರ್‌ ಕುಮಾರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆಗೆ ಸಂಬಂಧಿಸಿದಂತೆ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ವದಂತಿಗಳಿಗೆ ಕಿವಿಗೊಡಬಾರದು’ ಎಂದು ಹೇಳಿದರು.

‘ಕಾನೂನು ಪ್ರಕಾರ ಗಣಿಗಾರಿಕೆ ಮಾಡುತ್ತಿದ್ದೇವೆ. ಕೆಲವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕುರಿತು ದೂರನ್ನೂ ನೀಡಿದ್ದೇವೆ. ಇದನ್ನು ಎಸ್ಪಿ ಗಮನಕ್ಕೂ ತರಲಾಗಿದೆ’ ಎಂದು ಸಿಎಚ್‌ವಿ ರಾಜು ಕ್ರಷರ್‌ ಪರ ವಕೀಲ ಉದಯಕುಮಾರ ಮೋಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT