ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

7

ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

Published:
Updated:
ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

ಧಾರ್ಮಿಕವಾಗಿ ಮುಸ್ಲಿಮನಾದವನು ರಂಜಾನ್ ತಿಂಗಳು ಪೂರ್ತಿ 30 ದಿನಗಳು ಉಪವಾಸ ವ್ರತವನ್ನು ಆಚರಿಸಬೇಕಾದದ್ದು ಕಡ್ಡಾಯವಾಗಿರುತ್ತದೆ. ರಂಜಾನ್ ತಿಂಗಳನ್ನು ಕೆಡುಕುಗಳಿಂದ ದೂರವಿಟ್ಟು ಮನುಷ್ಯನನ್ನು ಒಳಿತಿನ ಹಾದಿಗೆ ತರುವಂತಹ ಮಾಸವೆಂದು ಪರಿಗಣಿಸಲಾಗುತ್ತದೆ. ಮನುಷ್ಯನ ಬದುಕಿನಲ್ಲಿ ಹಲವಾರು ದೌರ್ಬಲ್ಯಗಳು ಎದುರಾಗುವುದು ಸಹಜ. ಅವುಗಳಲ್ಲಿ ಮುಖ್ಯವಾಗಿ ದ್ವೇಷ, ಅಸೂಯೆ, ಆಸೆ-ಅಮಿಷ, ಸುಳ್ಳು, ಅಹಂಕಾರ, ದ್ರೋಹ, ವಂಚನೆ, ಪರದೂಷಣೆ, ಚಾಡಿ ಹೇಳುವುದು ಮುಖ್ಯವಾದವು. ಇವುಗಳಿಗೆ ಸ್ವಯೇಚ್ಛೆಯಿಂದ ಕಡಿವಾಣ ಹಾಕಿಕೊಳ್ಳದಿದ್ದಲ್ಲಿ ಮನುಷ್ಯನನ್ನು ಪಥ ಭ್ರಷ್ಟನನ್ನಾಗಿಸುತ್ತವೆ. ಈ ಪರಿಸ್ಥಿತಿ ಮಾನವನ ಸೃಷ್ಟಿಯೊಂದಿಗೆ ತಳುಕುಹಾಕಿಕೊಂಡಿವೆ. ಮಾನವನ ದಿನನಿತ್ಯದ ಬದುಕಿನಲ್ಲಿ ಸಹಜವಾಗಿ ಇವುಗಳಿಗೆ ಅವಕಾಶ ಒದಗಿದೆ. ಪ್ರತಿಕ್ಷಣವೂ ಮನುಷ್ಯನನ್ನು ಒಂದಲ್ಲ ಒಂದು ರೀತಿಯಲ್ಲಿ ಈ ದೌರ್ಬಲ್ಯಗಳು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ. ಅಧ್ಯಾತ್ಮ ಸಾಧಕನು ಈ ದೌರ್ಬಲ್ಯಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಮಾತ್ರವಲ್ಲ, ಅವನ್ನು ಮೀರಿ ಸಾಧನೆಗಳನ್ನು ಮಾಡಬೇಕಾಗುತ್ತದೆ.

ದೌರ್ಬಲ್ಯವನ್ನು ಮನುಷ್ಯ ಅಂಕೆಯಲ್ಲಿಟ್ಟುಕೊಳ್ಳುವುದಕ್ಕೆ ಉಪವಾಸ ವ್ರತ(ಸೌಮ್), ದಾನ ಧರ್ಮ(ಸದಕಾ), ನಿಯಮಿತ ಪ್ರಾರ್ಥನೆ(ನಮಾಜ್), ಪ್ರಾಯಶ್ಚಿತ್ತ(ತೌಬ) ಸಹಕಾರಿಯಾಗುತ್ತದೆ. ಈ ದೌರ್ಬಲ್ಯಗಳನ್ನು ಅಂಕೆಯಲ್ಲಿರಿಸಿಕೊಂಡವನಿಗೆ ಲೌಕಿಕವಾಗಿಯೂ ಪಾರಮಾರ್ಥಿವಾಗಿ ಲಾಭವಿದೆ. ವಿವೇಚನೆಯ ಸಾಮರ್ಥ್ಯಹೊಂದಿರುವ ಮನುಷ್ಯನು ಈ ದೌರ್ಬಲ್ಯಗಳಿಗೆ ದಾಸನಾಗಿರುವಾಗ ‘ಕುರಾನಿನ ಸಂದೇಶಗಳನ್ನು ಪಾಲಿಸದ ಇವರ ಹೃದಯಗಳಿಗೆ ಬೀಗ ಜಡಿಯಲ್ಪಟ್ಟಿದೆ’(ಕುರಾನ್ 47:24) ಎಂದು ಕುರಾನ್ ಹೇಳುತ್ತದೆ. "ಮನುಷ್ಯನ ದೇಹದಲ್ಲಿ ಅಮೂಲ್ಯವಾದ ಮಾಂಸದ ತುಣುಕೊಂದಿದೆ. ಅದು ಅನಾರೋಗ್ಯಕ್ಕೆ ತುತ್ತಾದರೆ ಇಡೀ ದೇಹದ ಆರೋಗ್ಯ ಕೆಡುತ್ತದೆ. ಅದುವೇ ಹೃದಯ" ಎಂದು ಪ್ರವಾದಿಯವರು ಹೇಳಿರುತ್ತಾರೆ.

ಇನ್ನೊಂದು ಸಂದರ್ಭದಲ್ಲಿ ‘ಉಪವಾಸವು ಒಂದು ಗುರಾಣಿಯ ರೀತಿ ಎಲ್ಲರೀತಿಯ ದೌರ್ಬಲ್ಯಗಳಿಂದಲೂ ರಕ್ಷಿಸುತ್ತದೆ. ಅಸಭ್ಯ ನಡವಳಿಕೆ, ಹಿಡಿತ ಮೀರಿದ ಮಾತುಗಳಿಗೆ ಸಂಯಮದ ಕಡಿವಾಣಹಾಕಿಕೊಳ್ಳುವುದು ರಂಜಾನ್ ಉಪವಾಸದ ಬಹಳ ಮುಖ್ಯ ಭಾಗವಾಗಿದೆ. ಯಾರಾದರೂ ಉಪವಾಸ ಆಚರಿಸುತ್ತಿರುವವರೊಂದಿಗೆ ಜಗಳಾಡಲು ಬಂದರೆ, ನಾನು ಉಪವಾಸ ವೃತದಲ್ಲಿದ್ದೇನೆಂದು ಹೇಳಲಿ!’ ಎಂದು ಪ್ರವಾದಿಯವರು ಉಪದೇಶಿಸಿದ್ದಾರೆ. ‘ಯಾರು ಉಪವಾಸವಿದ್ದು ಸುಳ್ಳು, ಕಪಟ, ವಂಚನೆಗಳ ಹಿಡಿತದಲ್ಲಿರುತ್ತಾರೋ ಅವರ ಉಪವಾಸ ವ್ರತಾಚರಣೆಯನ್ನು ಅಲ್ಲಾಹ ಇಷ್ಟಪಡುವುದಿಲ್ಲ’ ಎಂದು ಪ್ರವಾದಿಯವರು ಹೇಳಿರುತ್ತಾರೆ. ಉಪವಾಸವು ಲೌಕಿಕ ವ್ಯಾಮೋಹವನ್ನು ನಿಯಂತ್ರಣದಲ್ಲಿ ಇಡುತ್ತದೆ.

ದೌರ್ಬಲ್ಯಗಳು ಉಗಮದ ಆದಿಯಿಂದಲೇ ಮಾನವನನ್ನು ಹಿಂಬಾಲಿಸಿವೆ, ಆದರೆ ಜೊತೆಗೇನೆ ಇದರಿಂದ ಪಾರಾಗುವ ದಾರಿಗಳೂ ಕಂಡುಬಂದಿವೆ. ಈ ಪಥವನ್ನು ಉಪಯೋಗಿಸುವ ಮನಸ್ಸು ಮಾತ್ರ ಇರಬೇಕು. ರಂಜಾನ್ ಪವಿತ್ರ ತಿಂಗಳಲ್ಲಿ ಹಗಲಲ್ಲಿ ಉಪವಾಸ, ರಾತ್ರಿ ಹಗಲು ದೇವರ ಆರಾಧನೆ, ಆತ್ಮಾವಲೋಕನ, ಪ್ರಾಯಶ್ಚಿತ್ತಗಳ ಮೂಲಕ ದೌರ್ಬಲ್ಯಗಳ ಹಿಡಿತದಿಂದ ಪಾರಾಗುವುದು ಪ್ರಮುಖವಾಗಿರುತ್ತದೆ. ಒಂದು ತಿಂಗಳ ಉಪವಾಸ ಮುಗಿದ ನಂತರ ವರ್ಷವಿಡೀ ಹನ್ನೊಂದು ತಿಂಗಳೂ ಈ ದೌರ್ಬಲ್ಯಗಳಿಗೆ ದಾಸನಾಗಿರುವುದಲ್ಲ, ದೌರ್ಬಲ್ಯಗಳ ಹಿಡಿತದಿಂದ ಪಾರಾಗುವುದಕ್ಕೆ ಒಂದು ತಿಂಗಳ ಆರಾಧನೆ ಉಪವಾಸಗಳು ಕಲಿಸಿದ ಪಾಠವನ್ನು ಜೀವನವಿಡೀ ದೃಢಸಂಕಲ್ಪದೊಂದಿಗೆ ಪಾಲಿಸುವುದು ಅತ್ಯಂತ ಮಹತ್ವಪೂರ್ಣವೆನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry