ಹತ್ಯೆಗೆ ‘ಅಧರ್ಮೀಯರ ವಿನಾಶ’ ಮಿಷನ್!

7

ಹತ್ಯೆಗೆ ‘ಅಧರ್ಮೀಯರ ವಿನಾಶ’ ಮಿಷನ್!

Published:
Updated:
ಹತ್ಯೆಗೆ ‘ಅಧರ್ಮೀಯರ ವಿನಾಶ’ ಮಿಷನ್!

ಬೆಂಗಳೂರು: ಸಾಹಿತಿ ಕೆ.ಎಸ್.ಭಗವಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಹಂತಕರು, ಆ ಕಾರ್ಯಾಚರಣೆಗೆ ಇಟ್ಟಿದ್ದ ಹೆಸರು ‘ಮಿಷನ್–1. ಅಧರ್ಮೀಯರ ವಿನಾಶ’.‌

2017ರ ಸೆ.5ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆಯಿತು. ಆ ನಂತರ ಭಗವಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ನವೆಂಬರ್‌ನಲ್ಲಿ ಶಿಕಾರಿಪುರದ ಸುಜಿತ್ ಅಲಿಯಾಸ್ ಪ್ರವೀಣ್‌ಗೆ ಕರೆ ಮಾಡಿದ್ದ.

‘ನಮ್ಮ ಮುಂದಿನ ಗುರಿ ಭಗವಾನ್. ಅದಕ್ಕೆ ಶೂಟರ್‌ಗಳನ್ನು ಹೊಂದಿಸು. ಕೆಲ ಹುಡುಗರನ್ನು ಭಗವಾನ್ ಮನೆ ಹತ್ತಿರ ಬಿಟ್ಟಿರು’ ಎಂದಿದ್ದ ಎಂದು ಹೆಸರು ಹೇಳಲಿಚ್ಛಿಸದ ಎಸ್‌ಐಟಿ ಅಧಿಕಾರಿಯೊಬ್ಬರು ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಗೌರಿ ಹತ್ಯೆ ಪ್ರಕರಣದಲ್ಲಿ ಹಂತಕರಿಗೆ ಗುಂಡುಗಳನ್ನು ಸರಬರಾಜು (ಪ್ರೊಕ್ಯೂರ್) ಮಾಡಿದ್ದು ನವೀನ್. ಆ ಕೆಲಸ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ, ಮುಂದಿನ ಸಂಚಿನ ಬಗ್ಗೆ ಯೋಜನೆ (ಪ್ಲಾನಿಂಗ್) ರೂಪಿಸುವಂಥ ಹೆಚ್ಚುವರಿ ಜವಾಬ್ದಾರಿಯನ್ನು (ಬಡ್ತಿ) ಜಾಲದ ಮುಖಂಡರು ನವೀನ್‌ಗೆ ನೀಡಿದ್ದರು. ಅಂತೆಯೇ ಆತ ಭಗವಾನ್ ಹತ್ಯೆಗೆ ಸುಜಿತ್ ಜತೆ ಸೇರಿ ಸಂಚು ರೂಪಿಸಿದ್ದ’ ಎಂದು

ಹೇಳಿದರು.

ಗೋವಾದಲ್ಲಿ ಪರಿಚಯ: ‘ಹಿಂದೂ ಯುವ ಸೇನೆ’ ಹೆಸರಿನಲ್ಲಿ ಸಂಘಟನೆ ಕಟ್ಟಿದ್ದ ಚಿಕ್ಕಮಗಳೂರಿನ ನವೀನ್‌ಕುಮಾರ್, 2017ರ ಜೂನ್‌ನಲ್ಲಿ ಗೋವಾದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಪಾಲ್ಗೊಂಡಿದ್ದ. ‘ಬಂದೂಕು ತೆಗೆದುಕೊಂಡು ಅಧರ್ಮೀಯರನ್ನು ಸುಟ್ಟು ಹಾಕಬೇಕು’ ಎಂದು ಆಕ್ರೋಶಭರಿತ ಭಾಷಣವನ್ನೂ ಮಾಡಿದ್ದ. ಆಗ ಅಲ್ಲೇ ಇದ್ದ ಸುಜಿತ್‌, ಭಾಷಣದಿಂದ ಪ್ರಚೋದನೆಗೊಂಡು ತಾನೇ ಹೋಗಿ ನವೀನ್‌ನನ್ನು ಪರಿಚಯ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಎಸ್ಸೆಸ್ಸೆಲ್ಸಿವರೆಗೆ ಓದಿರುವ ಸುಜಿತ್, ಕೃಷಿಕ ದಂಪತಿಯ ಮಗ. ಹಿಂದುತ್ವದ ಬಗ್ಗೆ ಅಪಾರ ಒಲವು ಹೊಂದಿದ್ದ ಆತ, ಯಾವುದೇ ನಿರ್ದಿಷ್ಟ ಸಂಘಟನೆಯಲ್ಲಿ ಗುರುತಿಸಿಕೊಂಡವನಲ್ಲ’ ಎಂದರು.

‘2001ರಲ್ಲಿ ಮನೆ ತೊರೆದು, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಓಡಾಡಿಕೊಂಡಿದ್ದ. ಅಲ್ಲಿ ಆತನಿಗೆ ಶಾರ್ಪ್‌ ಶೂಟರ್‌ಗಳಾದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್ ಹಾಗೂ ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ ಎಂಬುವರ ಜತೆ ಸಂಪರ್ಕ ಬೆಳೆದಿತ್ತು’ ಎಂದು ಅಧಿಕಾರಿಗಳು ವಿವರಿಸಿದರು.

‘ನವೀನ್, ಸುಜಿತ್, ಅಮಿತ್, ಅಮೋಲ್, ಮನೋಹರ್ ದುಂಡಪ್ಪ ಯಡವೆ ಹಾಗೂ ನಿಹಾಲ್, ಚಾಮರಾಜನಗರದ ಗುಂಡಾಲ್ ಜಲಾಶಯ ಸಮೀಪದ ಅರಣ್ಯ ಪ್ರದೇಶದಲ್ಲಿ 2017ರ ನವೆಂಬರ್‌ನಲ್ಲಿ ಸಭೆ ಸೇರಿದ್ದರು. ಭಗವಾನ್ ಹತ್ಯೆಗೆ ಅಲ್ಲೇ ಸಂಚು ರೂಪಿಸಿ, ಅದಕ್ಕೆ ‘ಮಿಷನ್–1 ಅಧರ್ಮೀಯರ ವಿನಾಶ’ ಎಂಬ ಹೆಸರನ್ನೂ ಇಟ್ಟಿದ್ದರು.’

‘ನವೀನ್ ಹೊರತುಪಡಿಸಿ, ಗೌರಿ ಹತ್ಯೆಯಲ್ಲಿ ಉಳಿದವರ ಪಾತ್ರವಿರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ, ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದಕ್ಕೆ ಮೊಬೈಲ್‌ ಕರೆ ವಿವರ (ಸಿಡಿಆರ್), ನವೀನ್–ಸುಜಿತ್ ನಡೆಸಿರುವ ಸಂಭಾಷಣೆಯ ಧ್ವನಿಮುದ್ರಿಕೆ, ಶ್ರೀರಂಗಪಟ್ಟಣದ ಅನಿಲ್‌ಕುಮಾರ್ ಎಂಬುವವರು ನ್ಯಾಯಾಧೀಶರಿಗೆ ನೀಡಿರುವ ಹೇಳಿಕೆ.. ಹೀಗೆ, ಸಾಕಷ್ಟು ಪೂರಕ ದಾಖಲೆಗಳಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಸಂಭಾಷಣೆಗೆ ಕೋಡ್‌ ವರ್ಡ್‌

‘ಮಹಾರಾಷ್ಟ್ರದ ಅಮಿತ್ ಹಾಗೂ ಅಮೋನ್ ಅವರನ್ನು ನವೀನ್‌ಗೆ ಪರಿಚಯ ಮಾಡಿಕೊಟ್ಟಿದ್ದು ಸುಜಿತ್. ಅವರಿಬ್ಬರೂ ತಮ್ಮ ಮೂಲ ಹೆಸರುಗಳನ್ನು ನವೀನ್ ಬಳಿ ಹೇಳಿಕೊಂಡಿರಲಿಲ್ಲ. ಪರಸ್ಪರ ಸಂಪರ್ಕಕ್ಕೆ ಯಾರೂ ಮೊಬೈಲ್ ಬಳಸುತ್ತಿರಲಿಲ್ಲ. ಕಾಯಿನ್‌ ಬಾಕ್ಸ್‌ಗಳ ಮೂಲಕವೇ ಮಾತುಕತೆ ನಡೆಸುತ್ತಿದ್ದರು. ಬಾಯ್‌ಸಾಬ್, ಛೋಟೆ, ಆಯಿಲ್ ಹಾಗೂ ದಾದಾ ಎಂಬ ಕೋಡ್‌ ವರ್ಡ್‌ಗಳಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಸುಜಿತ್ ಸದ್ಯ ಉಪ್ಪಾರಪೇಟೆ ಪೊಲೀಸರ ವಶದಲ್ಲಿದ್ದಾನೆ. ಗುರುವಾರ ಆತನ ಕಸ್ಟಡಿ ಅವಧಿ ಮುಗಿಯಲಿದ್ದು, ಬಾಡಿ ವಾರಂಟ್ ಮೇಲೆ ಆತನನ್ನು ವಶಕ್ಕೆ ಪಡೆಯುತ್ತೇವೆ.’

–ಎಂ.ಎನ್‌. ಅನುಚೇತ್‌, ಡಿಸಿಪಿ ಎಸ್‌ಐಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry