ಸಾಲ ಮನ್ನಾಕ್ಕೆ ಸಿದ್ಧ: ಷರತ್ತು ಬದ್ಧ

7
ರಾಹುಲ್‌ಗಾಂಧಿ ಜತೆ ಚರ್ಚಿಸಿ ತೀರ್ಮಾನ: ಎಚ್‌ಡಿಕೆ

ಸಾಲ ಮನ್ನಾಕ್ಕೆ ಸಿದ್ಧ: ಷರತ್ತು ಬದ್ಧ

Published:
Updated:
ಸಾಲ ಮನ್ನಾಕ್ಕೆ ಸಿದ್ಧ: ಷರತ್ತು ಬದ್ಧ

ಬೆಂಗಳೂರು: ಸಣ್ಣ ಮತ್ತು ಅತಿ ಸಣ್ಣ ರೈತರ ಬೆಳೆ ಸಾಲ ಮನ್ನಾ ಮಾಡಲು ಬದ್ಧ. ಈ ಕುರಿತು 15 ದಿನಗಳ ಒಳಗೆ ಮಾರ್ಗಸೂಚಿ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸಾಲ ಮನ್ನಾ ಕುರಿತು ಚರ್ಚಿಸಲು ರೈತ ಮುಖಂಡರ ಸಭೆಯನ್ನು ಬುಧವಾರ ಅವರು ಕರೆದಿದ್ದರು. ರೈತರ ಅಹವಾಲು, ಸಲಹೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ₹ 53,000 ಕೋಟಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ವಿಧಾನಸಭೆಯಲ್ಲಿ ವಿಶ್ವಾಸ ಮತ ಪಡೆಯುವ ವೇಳೆ, ‘ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ. ಮಿತ್ರ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲ ಮನ್ನಾ ಮಾಡುತ್ತೇನೆ. ನಾನು ಪಲಾಯನವಾದಿಯಲ್ಲ’ ಹೇಳಿದ್ದರು.

ಈ ಹೇಳಿಕೆ ವಿರೋಧಿಸಿ ವಿಧಾನಸಭೆ ವಿರೋಧಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ‘ಕರ್ನಾಟಕ ಬಂದ್‌’ಗೆ ಕರೆ ನೀಡಿದ್ದರು.

ಈ ಮಧ್ಯೆ ದೆಹಲಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ‘ಒಂದು ವಾರದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ. ಬುಧವಾರ ತೀರ್ಮಾನ ಪ್ರಕಟಿಸುತ್ತೇನೆ. ಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡುತ್ತೇನೆ’ ಎಂದಿದ್ದರು.

ಸುದೀರ್ಘ ಅವಧಿ ಸಭೆ: ಎರಡೂವರೆ ಗಂಟೆಗಳು ಹೆಚ್ಚು ನಡೆದ ರೈತರ ಸಭೆಯಲ್ಲಿ ಮಾತನಾಡಿದ ಸಿ.ಎಂ ಸಾಲ ಮನ್ನಾ ಮಾಡಲು ಇರುವ ಪ್ರಾಯೋಗಿಕ ಸಮಸ್ಯೆಗಳನ್ನು ಎಳೆ–ಎಳೆಯಾಗಿ ಬಿಡಿಸಿಟ್ಟರು. ತಾವುಕೊಟ್ಟ ವಚನದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

‘ಸಾಲ ಮನ್ನಾ ಮಾಡಲು ಕಾಂಗ್ರೆಸ್‌ನ ವಿರೋಧವಿಲ್ಲ’ ಎಂದೂ ಹೇಳಿದರು.

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶದಿಂದ ಮರಳಿದ ಬಳಿಕ ಈ ಸಂಬಂಧ ಅವರ ಜತೆ ಚರ್ಚೆ ನಡೆಸುತ್ತೇನೆ. ಅವರ ಸಹಕಾರ ಪಡೆದೇ ಸಾಲ ಮನ್ನಾ ಕಾರ್ಯಗತಗೊಳಿಸುತ್ತೇನೆ. ಇದಕ್ಕಾಗಿ ಎಷ್ಟು ಸಾವಿರ ಕೋಟಿ ಖರ್ಚಾದರೂ ಪರವಾಗಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡಲು ಉದ್ದೇಶಿದ್ದೇವೆ. ಮೊದಲ ಹಂತದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಬೆಳೆ ಸಾಲ ಮನ್ನಾಗೆ ಆದ್ಯತೆ ನೀಡುತ್ತೇವೆ. ಎರಡನೇ ಹಂತದಲ್ಲಿ ಉಳಿದ ರೀತಿ ಕೃಷಿ ಸಾಲ ಮನ್ನಾ ಬಗ್ಗೆ ಚಿಂತನೆ ನಡೆಸಲಾಗುವುದು. ರಾಜ್ಯದ ಆರ್ಥಿಕ ಶಿಸ್ತು ಕಾಪಾಡಿಕೊಂಡೇ ಅನುಷ್ಠಾನ ಮಾಡುತ್ತೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಸಾಲ ಮನ್ನಾ ಕುರಿತ ಪ್ರಮುಖ ಅಂಶಗಳು

* 1–4–2009 ರಿಂದ 31–12–17 ರವರೆಗಿನ ಅವಧಿಯಲ್ಲಿ ಮಾಡಿರುವ ಬೆಳೆ ಸಾಲಗಳನ್ನು ಮಾತ್ರ ಮನ್ನಾ ಮಾಡಲಾಗುವುದು. ಆದರೆ, ಸಾಲದ ಮೊತ್ತಕ್ಕೆ ಮಿತಿ ಇಲ್ಲ.

* ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲದ ಬಗ್ಗೆ  ಇನ್ನೆರಡು ದಿನಗಳಲ್ಲಿ ಬ್ಯಾಂಕ್‌ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು.

* ಸಾಲ ಮನ್ನಾ ಸ್ವರೂಪ, ಯಾವ ಸಾಲ ಮನ್ನಾ ವ್ಯಾಪ್ತಿಗೆ ಬರಲಿದೆ, ಎಷ್ಟು ಮೊತ್ತದ ಸಾಲ ಮನ್ನಾ ಮಾಡಬೇಕು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು.

* ಸಾಲ ಮನ್ನಾ ಕುರಿತು ಸರ್ಕಾರಿ ಆದೇಶ ಹೊರಡಿಸಿದ 10 ರಿಂದ 15 ದಿನಗಳಲ್ಲಿ  ಬೆಳೆ ಸಾಲಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಆಯಾಯ ಜಿಲ್ಲೆಯ ನೋಡಲ್‌ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ರೈತರು ಸಲ್ಲಿಸಬೇಕು.

* ಕೃಷಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಪಡೆಯಲು ಪ್ರತಿ ತಿಂಗಳು ವಿಧಾನಸೌಧದಲ್ಲಿ ರೈತರ ಸಭೆ ನಡೆಸಲಾಗುವುದು.

‘ರಾಹುಲ್‌ ಗಾಂಧಿ ಪುಣ್ಯಾತ್ಮ’

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಪುಣ್ಯಾತ್ಮ. ನನಗೆ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿದರು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತರ ಸಭೆಯಲ್ಲಿ ಮುಕ್ತ ಕಂಠದಲ್ಲಿ ಹೊಗಳಿದರು.

‘ರೈತರ ಬಾಳಿಗೆ ನೆಮ್ಮದಿ ತರುವ ಕೆಲಸ ಮಾಡಲು ನನಗೊಂದು ಸುವರ್ಣ ಅವಕಾಶ ಸಿಕ್ಕಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನನಗೂ ರಾಜಕೀಯ ಮಾಡಲು ಗೊತ್ತಿದೆ’ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.

ಸಿಎಂ ಪ್ರಶ್ನೆ

* ಖಾಸಗಿ ಕಂಪನಿಗಳ ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರು ಕೃಷಿ ಹೆಸರಿನಲ್ಲಿ ಸಾಲ ಪಡೆದಿದ್ದಾರೆ, ಇದನ್ನು ಮನ್ನಾ ಮಾಡಬೇಕೇ?

* ಬೆಂಗಳೂರಿನಲ್ಲಿರುವ ಕೆಲವರು ಕೃಷಿ ಹೆಸರಿನಲ್ಲಿ ₹ 5 ಕೋಟಿಯಿಂದ ₹ 10 ಕೋಟಿ ಸಾಲ ಮಾಡಿದ್ದಾರೆ. ಇಂತಹವರ ಸಾಲ ಮನ್ನಾ ಮಾಡಬೇಕೇ?

* ಕಾಫಿ ಪ್ಲಾಂಟರ್‌ಗಳೂ ಸಾಲ ಮಾಡಿದ್ದಾರೆ. ಟಾಟಾದಂತಹ ಕಂಪನಿಗಳು ಕೃಷಿ ಹೆಸರಲ್ಲಿ ನೂರಾರು ಕೋಟಿ ಸಾಲ ಮಾಡಿದ್ದಾರೆ ಇವರಿಗೂ ಪ್ರಯೋಜನ ಸಿಗಬೇಕೇ?

* ವರ್ಷಕ್ಕೆ ₹ 3 ಲಕ್ಷದಿಂದ ₹ 4 ಲಕ್ಷದವರೆಗೆ ತೆರಿಗೆ ಪಾವತಿ ಮಾಡುವವರೂ ಇದ್ದಾರೆ. ಇನ್ನು ಕೆಲವರು ಕೃಷಿ ಸಾಲ ಪಡೆದು ಆ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು, ಬಡ್ಡಿ ಪಡೆಯುತ್ತಾರೆ. ಇವರಿಗೆ ಪ್ರಯೋಜನ ಸಿಗಬೇಕೇ?

* ಶಾಸಕರು, ಸಂಸದರು, ಜನಪ್ರತಿನಿಧಿಗಳು ಪಡೆದಿರುವ ಕೃಷಿ ಸಾಲ ಮನ್ನಾ ಮಾಡಬೇಕಾ?

* ರಸಗೊಬ್ಬರ, ಕೀಟನಾಶಕಗಳ ಅಂಗಡಿ ಇಟ್ಟವರೂ ಕೃಷಿ ಸಾಲ ಮಾಡಿದ್ದಾರೆ. ಕೆಲವರು ಮದುವೆಗಾಗಿ, ಬಂಗಾರದ ಖರೀದಿಗಾಗಿಯೂ ಕೃಷಿ ಹೆಸರಿನಲ್ಲಿ ಸಾಲ ಮಾಡಿದ್ದಾರೆ. ಇದನ್ನೆಲ್ಲ ಮನ್ನಾ ಮಾಡಲು ಆಗುತ್ತದೆಯೇ?

ನಿಮ್ಮ ಸಲಹೆಗಳನ್ನು ಬರಹದಲ್ಲಿ ಕೊಡಿ, ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇನೆ. ನಿಮ್ಮ ಜತೆಗೆ ನಾನಿದ್ದೇನೆ.

– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಸಾಲ ಮನ್ನಾ ಮಾಡಲು ಕಾಂಗ್ರೆಸ್‌ನ ವಿರೋಧವಿಲ್ಲ. ಆದರೆ, ತಜ್ಞರ ಸಮಿತಿ ಆಗಬೇಕು.

– ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಸಾಲ ಮನ್ನಾ ವಿಚಾರದಲ್ಲಿ ಪ್ರಾಮಾಣಿಕತೆ ಇಲ್ಲ. ಎಚ್‌.ಡಿಕೆ ವಿಶ್ವಾಸ ದ್ರೋಹಿ.

– ಯಡಿಯೂರಪ್ಪ, ವಿರೋಧಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry