ತನ್ಮಯತೆಯಿಂದ ಕೆಲಸದಲ್ಲಿ ಯಶಸ್ಸು: ಸ್ವಾಮೀಜಿ

7

ತನ್ಮಯತೆಯಿಂದ ಕೆಲಸದಲ್ಲಿ ಯಶಸ್ಸು: ಸ್ವಾಮೀಜಿ

Published:
Updated:

ಬೆಂಗಳೂರು: ‘ಯಾವುದೇ ಕೆಲಸವನ್ನು ತನ್ಮಯತೆಯಿಂದ ಮಾಡುವುದೇ ಧ್ಯಾನ. ಇದನ್ನು ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ’ ಎಂದು ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

‘ಜವಾಬ್ದಾರಿಗಳು ಮುಗಿದು, ವಯಸ್ಸಾದ ಮೇಲೆ ಧ್ಯಾನದ ಮೊರೆ ಹೋಗುವುದಲ್ಲ. ಮಕ್ಕಳಿಂದಲೇ ಈ ಪ್ರಕ್ರಿಯೆ ಆರಂಭವಾದರೆ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಯೋಗದಾನ, ಯೋಗದರ್ಶನ ಮತ್ತು ದಾರ್ಶನಿಕ ವಿಚಾರಗಳ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಯೋಗವನ್ನು ಕೆಲವು ದಿನ ಮುಂದುವರಿಸಿಕೊಂಡು ಹೋಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ, ಒಂದು ವರ್ಷಕಾಲ ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಇದನ್ನು ಇಲ್ಲಿಗೇ ನಿಲ್ಲಿಸದೆ ಜೀವನಪರ್ಯಂತ ಮುಂದುವರಿಸಿಕೊಂಡು ಹೋಗುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತಂಜಲಿ ಯೋಗ ಸಮಿತಿಯ ಯೋಗ ತರಬೇತುದಾರ ಎಸ್.ದಿನೇಶ್‌ ಕುಮಾರ್‌ ಮಾತನಾಡಿ, ‘ಯೋಗ ಅನ್ನುವುದು ಮಾನಸಿಕ, ಆಧ್ಯಾತ್ಮಿಕ ಮತ್ತು ಶಾರೀರಿಕವಾಗಿ ಜೋಡಣೆ ಮಾಡುವ ಒಂದು ಮಾರ್ಗವಾಗಿದೆ. ಅದನ್ನು ನಿಮ್ಮ ಜೀವನದ ಒಂದು ಅಂಗವಾಗಿ ಸ್ವೀಕರಿಸಿ, ಜೀವನಶೈಲಿಯನ್ನು ಬದಲಿಸುವ ಅಸ್ತ್ರವಾಗಿ ಮಾಡಿಕೊಳ್ಳಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry