ಮಾವಿನ ಹಣ್ಣಿಗೆ ಶಾಖೋಪಚಾರದ ಯಂತ್ರ

7
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವಿಷ್ಕಾರ

ಮಾವಿನ ಹಣ್ಣಿಗೆ ಶಾಖೋಪಚಾರದ ಯಂತ್ರ

Published:
Updated:
ಮಾವಿನ ಹಣ್ಣಿಗೆ ಶಾಖೋಪಚಾರದ ಯಂತ್ರ

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಮಾವಿನ ಹಣ್ಣಿನಲ್ಲಿರುವ ಕೀಟಗಳನ್ನು ನಾಶಪಡಿಸುವ ಶಾಖೋಪಚಾರ ಯಂತ್ರವನ್ನು ಆವಿಷ್ಕಾರ ಮಾಡಿದೆ.

‘ಮಾವಿನ ಹಣ್ಣಿನ ಮೇಲೆ ಅನೇಕ ಕೀಟಗಳು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರ ಬಂದ ಮರಿಗಳು ಮಾವಿನ ಹಣ್ಣಿನ ಒಳಗೆ ತೂರಿಕೊಂಡು ಬಿಡುತ್ತವೆ. ಇದರಿಂದ ಮಾವಿನ ಹಣ್ಣು ಹಾಳಾಗುತ್ತದೆ. ಕೀಟಗಳು ಹಣ್ಣು ಸೇವಿಸಿದವರ ಹೊಟ್ಟೆಯೊಳಗೆ ಸೇರಿಕೊಳ್ಳುವ ಅಪಾಯ ಇರುತ್ತದೆ. ಸಾಮಾನ್ಯವಾಗಿ ರೈತರು ಮಾವನ್ನು ಕಿತ್ತ ಕೂಡಲೇ ಅದಕ್ಕೆ ಔಷಧಿ ಸಿಂಪಡಿಸುತ್ತಾರೆ. ನಾವು ಕಂಡುಹಿಡಿದ ಯಂತ್ರದಿಂದ ಔಷಧಿ ಸಿಂಪಡಿಸದೇ ಕೀಟ ನಾಶಪಡಿಸಿ ಮಾವಿನ ಹಣ್ಣನ್ನು ತಾಜಾ ಆಗಿ ಕೊಡಬಹುದು’ ಎಂದು ಯಂತ್ರದ ವಿನ್ಯಾಸಕ, ವಿಜ್ಞಾನಿ ಡಾ. ಸೆಂಥಿಲ್ ಕುಮಾರ್ ಹೇಳಿದರು.

‘ವಿದ್ಯುತ್ ಕಾಯಿಲ್‍ಗಳ ಮೂಲಕ ನೀರನ್ನು 46 ಡಿಗ್ರಿ ಸೆಂಟಿಗ್ರೇಡ್‌ ತಾಪ ಬರುವ ತನಕ ಕಾಯಿಸಬೇಕಾಗುತ್ತದೆ. ಕಾದ ನೀರಿನಲ್ಲಿ ಮಾವಿನ ಹಣ್ಣನ್ನು ಒಂದು ಗಂಟೆ ಕಾಲ ಹಾಕಬೇಕು. ಒಂದು ಬಾರಿಗೆ 500 ಕೆ.ಜಿ.ಯಷ್ಟು ಹಣ್ಣನ್ನು ಯಂತ್ರದಲ್ಲಿ ಹಾಕಬಹುದು. ಇದರಿಂದ ಕೀಟಗಳು ಸಾಯುತ್ತವೆ. ಜೊತೆಗೆ ಮಾವಿನ ಹಣ್ಣಿಗೆ ಒಳ್ಳೆಯ ಬಣ್ಣ ಬರುತ್ತದೆ’ ಎಂದು ಯಂತ್ರದ ಕಾರ್ಯವಿಧಾನವನ್ನು ಅವರು ವಿವರಿಸಿದರು.

ಸಂಸ್ಥೆಯ ನಿರ್ದೇಶಕರಾದ ಎಂ.ಆರ್.ದಿನೇಶ್, ‘ಈ ಯಂತ್ರವನ್ನು ಎರಡು ರೀತಿಯಲ್ಲಿ ತಯಾರು ಮಾಡಲಾಗಿದೆ. ಒಂದು ಸಾಮಾನ್ಯ ಯಂತ್ರ. ಮತ್ತೊಂದು ಗುಣಮಟ್ಟದ ಯಂತ್ರ. ಗುಣಮಟ್ಟದ ಯಂತ್ರದಲ್ಲಿ ಹಣ್ಣಿನ ಗುಣಮಟ್ಟವೂ ಹೆಚ್ಚಲಿದೆ. ಸಾಮಾನ್ಯ ಯಂತ್ರಕ್ಕೆ ₹ 6 ಲಕ್ಷ, ವಿಶೇಷ ಯಂತ್ರಕ್ಕೆ ₹ 25 ಲಕ್ಷ ಇದೆ’ ಎಂದು ಅವರು ತಿಳಿಸಿದರು. ಮಾಹಿತಿಗೆ 94494-92857 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry