ಎರಡನೇ ಮದುವೆಯಾಗಲು ಪತ್ನಿ ಕೊಲೆಗೆ ಯತ್ನ: ಬಂಧನ

7

ಎರಡನೇ ಮದುವೆಯಾಗಲು ಪತ್ನಿ ಕೊಲೆಗೆ ಯತ್ನ: ಬಂಧನ

Published:
Updated:

ಬೆಂಗಳೂರು: ಮಹದೇವಪುರ ಸಮೀಪದ ಪೈ ಬಡಾವಣೆ ನಿವಾಸಿ ಲೂಮಿನಾ (40) ಎಂಬುವರನ್ನು ಕೊಲೆ ಮಾಡಲು ಯತ್ನಿಸಿದ್ದ, ಅವರ ಪತಿ ಪ್ರೇಮ್ ಕುಮಾರ್ (42) ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ಆರೋಪಿ ಪ್ರೇಮ್‌ ಕುಮಾರ್, ಮೋನಿಶಾ ಎಂಬಾಕೆಯನ್ನು ಮದುವೆಯಾಗಲು ತಯಾರಿ ನಡೆಸಿದ್ದ. ಹೀಗಾಗಿ, ಮೋನಿಶಾ ಹಾಗೂ ಆಕೆಯ ಸಹೋದರ ರೋಹಿತ್‌ ಜತೆ ಸೇರಿ ಪತ್ನಿ ಕೊಲೆಗೆ ಯತ್ನಿಸಿದ್ದ. ಮೂವರನ್ನೂ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಲೂಮಿನಾ ಹಾಗೂ ಪ್ರೇಮ್‌ಕುಮಾರ್‌ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮನೆ ಬಳಿಯೇ ಇದ್ದ ಚರ್ಚ್‌ನಲ್ಲಿ ದಂಪತಿಯು ಪಾದ್ರಿಗಳಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ನಂತರ, ಅವರು ಪ್ರತ್ಯೇಕವಾಗಿ ವಾಸವಿದ್ದರು. ವಿವಾಹ ವಿಚ್ಛೇದನ ಕೋರಿದ್ದ ಪ್ರೇಮ್‌ ಕುಮಾರ್‌, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನ ನೀಡಲು ಲೂಮಿನಾ ಒಪ್ಪಿರಲಿಲ್ಲ.

ಅದರ ಮಧ್ಯೆಯೇ ಪ್ರೇಮ್ ಕುಮಾರ್‌ಗೆ ಮೋನಿಶಾಳ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಆ ವಿಷಯ ತಿಳಿದ ಆಕೆಯ ಸಹೋದರ ರೋಹಿತ್, ‘ನನ್ನ ತಂಗಿಯನ್ನು ಮದುವೆಯಾಗು’ ಎಂದು ಒತ್ತಾಯಿಸಲಾರಂಭಿಸಿದ್ದ. ಪತ್ನಿಯನ್ನು ಕೊಲೆ ಮಾಡಿದರೆ ಮದುವೆ ಆಗುವುದಾಗಿ ಪ್ರೇಮ್‌ ಕುಮಾರ್‌ ಹೇಳಿದ್ದ. ಮೂವರೂ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದರು.

‘ಮಂಗಳವಾರ ರಾತ್ರಿ ಲೂಮಿನಾರ ಮನೆಗೆ ಹೋಗಿದ್ದ ರೋಹಿತ್‌, ಮಚ್ಚಿನಿಂದ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಗಾಟ ಕೇಳಿ ಸಹಾಯಕ್ಕೆ ಹೋಗಿದ್ದ ಸ್ಥಳೀಯರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಲೂಮಿನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರು ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿ ಸಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry