7

ಮಳೆ: ಮನೆಗಳಿಗೆ ನುಗ್ಗಿದ ನೀರು

Published:
Updated:
ಮಳೆ: ಮನೆಗಳಿಗೆ ನುಗ್ಗಿದ ನೀರು

ಬೆಂಗಳೂರು: ನಗರದಲ್ಲಿ ಬುಧವಾರ ಗುಡುಗು ಸಹಿತ ಜೋರು ಮಳೆ ಸುರಿದಿದ್ದು, ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ನಗರದಲ್ಲಿ ಬೆಳಿಗ್ಗೆಯಿಂದಲೇ ಬಿಸಿಲು ಹೆಚ್ಚಿತ್ತು. ಸಂಜೆ ವೇಳೆಗೆ ಮೋಡ ಕವಿದು, ಮಳೆ ಸುರಿಯಲಾರಂಭಿಸಿತು. ವಿದ್ಯಾರಣ್ಯಪುರದ ವೆಂಕಟಸ್ವಾಮಿಯಪ್ಪ ಬಡಾವಣೆ, ಕೊಡಿಗೇಹಳ್ಳಿಯ ಭದ್ರಪ್ಪ ಬಡಾವಣೆ ಹಾಗೂ ನಾಗಾವರದ ಪ್ರಜ್ಞಾ ಚಿತ್ರಮಂದಿರದ ಬಳಿಯ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶದ ಕಾಲುವೆಗಳು ತುಂಬಿಹರಿದವು. ಕೊಳಚೆ ನೀರು ಮನೆಗಳಿಗೆ ನುಗ್ಗಿದ್ದರಿಂದ, ನಿವಾಸಿಗಳು ತೊಂದರೆ ಅನುಭವಿಸಿದರು.

ಮನೆಗಳಿಂದ ಹೊರಬಂದ ನಿವಾಸಿಗಳು, ವೃದ್ಧರು ಹಾಗೂ ಮಕ್ಕಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಇನ್ನು ಹಲವರು, ಮನೆಯಲ್ಲಿದ್ದ ನೀರನ್ನು ಹೊರ ಹಾಕುವುದರಲ್ಲೇ ನಿರತರಾಗಿದ್ದರು.

‘ಕಾಲುವೆಗಳು ಹೂಳು ತುಂಬಿಕೊಂಡಿವೆ. ಅವುಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ಹೇಳಿದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈಗ ಕಾಲುವೆಯಲ್ಲಿ ಹರಿದು ಹೋಗಬೇಕಿದ್ದ ನೀರು, ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಯಲಹಂಕ, ಹೆಬ್ಬಾಳ, ವಿದ್ಯಾರಣ್ಯಪುರ, ಆರ್‌.ಟಿ.ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಯಿತು. ರಾಜಾಜಿನಗರ, ಬಸವೇಶ್ವರ ನಗರ, ಸಹಕಾರ ನಗರ, ಗಾಯತ್ರಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಸಂಜಯನಗರ,ಯಶವಂತಪುರ, ಗೊರಗುಂಟೆ

ಪಾಳ್ಯ, ಜಾಲಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು.

ನೆಲಕ್ಕುರುಳಿದ ಮರಗಳು: ‘ವಿದ್ಯಾರಣ್ಯಪುರ, ಯಲಹಂಕದ ನ್ಯಾಯಾಂಗ ಬಡಾವಣೆ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ತಲಾ ಒಂದೊಂದು ಮರ ಬಿದ್ದಿತ್ತು. ಆ ಬಗ್ಗೆ ದೂರುಗಳು ಬರುತ್ತಿದ್ದಂತೆ ಅರಣ್ಯ ವಿಭಾಗದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಮರಗಳನ್ನು ತೆರವು ಮಾಡಿದರು’ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಅಧಿಕಾರಿ ತಿಳಿಸಿದರು.

ವೀರಣ್ಣ ಪಾಳ್ಯ, ಕೆ.ಆರ್.ರಸ್ತೆ, ಯಲಹಂಕ ಡಿಪೊ ಸಮೀಪ, ಕ್ವೀನ್ಸ್ ರಸ್ತೆ ಸೇರಿದಂತೆ 30 ಕಡೆಗಳಲ್ಲಿ ರಸ್ತೆ ಮೇಲೆಯೇ ನೀರು ಹರಿಯಿತು.

ದೂರು ದಾಖಲು: ‘ಮಳೆ ವೇಳೆ ಉಂಟಾದ ಹಾನಿ ಸಂಬಂಧ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 45 ದೂರುಗಳು ಬಂದಿವೆ’ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಅಧಿಕಾರಿ ತಿಳಿಸಿದರು.

‘ಪಶ್ಚಿಮ ಭಾಗದ ಪ್ರದೇಶಗಳಿಂದ 60 ಮಂದಿ ಕರೆ ಮಾಡಿದ್ದರು. ಅಲ್ಲೆಲ್ಲ ಮಳೆಗಿಂತ ಬಿರುಗಾಳಿ ಹೆಚ್ಚಿತ್ತು. ಮರಗಳು ಉರುಳಿಬಿದ್ದಿದ್ದರಿಂದ ಮೂರು ಕಾರುಗಳು ಜಖಂಗೊಂಡಿವೆ’ ಎಂದರು.

ಸಂಚಾರ ದಟ್ಟಣೆ: ರಸ್ತೆ ಮಧ್ಯೆಯೇ ಮರ ಬಿದ್ದಿದ್ದರಿಂದ, ನೀರು ಹರಿದಿದ್ದರಿಂದ ಹಾಗೂ ಮಳೆ ಬರುತ್ತಿದ್ದ ಕಾರಣದಿಂದ ತರಾತುರಿಯಲ್ಲಿ ಮನೆ ಸೇರುವುದಕ್ಕಾಗಿ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿಕೊಂಡು ಹೋದರು. ಅದರಿಂದ ಸಂಚಾರ ದಟ್ಟಣೆ ಉಂಟಾಯಿತು.

ಮಲ್ಲೇಶ್ವರ, ಓಕಳಿಪುರ, ಮಾಗಡಿ ರಸ್ತೆ, ಶೇಷಾದ್ರಿಪುರ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್‌ ವೃತ್ತ, ರಾಜಭವನ ರಸ್ತೆ, ಚಾಮರಾಜಪೇಟೆ, ಕಾರ್ಪೊರೇಷನ್ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಿತು. ಪರ್ಯಾಯ ಮಾರ್ಗ ಮಾಡಿಕೊಡುವ ಮೂಲಕ ಸಂಚಾರ ಪೊಲೀಸರು, ದಟ್ಟಣೆ ನಿಯಂತ್ರಿಸಿದರು.

ಕಟ್ಟೆಚ್ಚರ ವಹಿಸಲು ಸಿ.ಎಂ ಸೂಚನೆ

ನಗರದಲ್ಲಿ ಬುಧವಾರ ಸಂಜೆಯಿಂದ ನಿರಂತರವಾಗಿ ಸುರಿದ ಮಳೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್ ಅವರಿಂದ ಮಾಹಿತಿ ಪಡೆದುಕೊಂಡರು. ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದರು.

‘ಇದುವರೆಗೂ ನಗರದಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ತಗ್ಗು ಪ್ರದೇಶಗಳ ಬಗ್ಗೆ ಹೆಚ್ಚು ನಿಗಾ ವಹಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತರು, ಮುಖ್ಯಮಂತ್ರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry