ಜೆಡಿಎಸ್‌ಗೆ ಹಣಕಾಸು, ಕಾಂಗ್ರೆಸ್‌ಗೆ ಗೃಹ ಇಲಾಖೆ

7

ಜೆಡಿಎಸ್‌ಗೆ ಹಣಕಾಸು, ಕಾಂಗ್ರೆಸ್‌ಗೆ ಗೃಹ ಇಲಾಖೆ

Published:
Updated:
ಜೆಡಿಎಸ್‌ಗೆ ಹಣಕಾಸು, ಕಾಂಗ್ರೆಸ್‌ಗೆ ಗೃಹ ಇಲಾಖೆ

ನವದೆಹಲಿ: ಖಾತೆ ಹಂಚಿಕೆ ಸಂಕಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆಗೂ ಮುಲಾಮು ಹುಡುಕಿಕೊಂಡಿವೆ. ಜೆಡಿಎಸ್‌ಗೆ ಹಣಕಾಸು ಮತ್ತು ಕಾಂಗ್ರೆಸ್‌ಗೆ ಗೃಹ ಇಲಾಖೆ ಎನ್ನುವ ರಾಜಿಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿದ್ದು, ಶೀಘ್ರ ಸಂಪುಟ ರಚನೆಯಾಗಲಿದೆ ಎಂದು ಎರಡೂ ಪಕ್ಷಗಳ ಉನ್ನತ ಮೂಲಗಳು ತಿಳಿಸಿವೆ.

ಎರಡೂ ಪಕ್ಷಗಳ ಉನ್ನತ ನಾಯಕರು ನಿನ್ನೆಯಿಂದ (ಬುಧವಾರ) ಐದು ಸುತ್ತಿನ ಮಾತುಕತೆ ನಡೆಸಿದರು. ಅಮೆರಿಕದಿಂದಲೇ ಕಾಂಗ್ರೆಸ್ ಪಕ್ಷದ ನಾಯಕರೊಡನೆ ದೂರವಾಣಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಸಹ ಈ ಹಂಚಿಕೆ ಸೂತ್ರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಖಾತೆ ಹಂಚಿಕೆಯ ಹೊಸ ಸೂತ್ರವನ್ನು ಎರಡೂ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ. ಶೀಘ್ರ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆ ಇದೆ.

ಸದ್ಯ ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ‍ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಬೆಂಗಳೂರಿಗೆ ತೆರಳಿ ತಮ್ಮ ಪಕ್ಷಗಳ ಇತರ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

‘ನಾವು ಪರಸ್ಪರ ಐದು ಸುತ್ತುಗಳ ಮಾತುಕತೆ ನಡೆಸಿದೆವು. ಜೆಡಿಎಸ್‌ಗೆ ಹಣಕಾಸು ಇಲಾಖೆ ಬಿಟ್ಟುಕೊಡಲು ಕಾಂಗ್ರೆಸ್ ಸಮ್ಮತಿಸಿತು. ಬೆಂಗಳೂರಿಗೆ ತೆರಳಿದ ನಂತರ ದೇವೇಗೌಡರು ಸೇರಿದಂತೆ ಪಕ್ಷದ ಹಿರಿಯ ನಾಯಕರೊಡನೆ ಮಾತನಾಡಲಿದ್ದೇನೆ’ ಎಂದು ಜೆಡಿಎಸ್ ನಾಯಕ ಡ್ಯಾನಿಶ್ ಅಲಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಅಶೋಕ್ ಗೆಹ್ಲೋಟ್ ಮತ್ತು ವೇಣುಗೋಪಾಲ್ ಅವರು ಖಾತೆಹಂಚಿಕೆ ಕುರಿತು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಮೇ 23ರಂದು ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈವರೆಗೆ ಪ್ರಮುಖ ಖಾತೆಗಳ ಹಂಚಿಕೆ ಕಗ್ಗಂಟಾಗಿಯೇ ಉಳಿದಿತ್ತು. ಸರ್ಕಾರದ ಸಮರ್ಪಕ ಕಾರ್ಯನಿರ್ವಹಣೆಗೆ ಇದರಿಂದ ತೊಡಕಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry