‘ನವಿಲ ಕಿನ್ನರಿ’ ಕುಣಿತ

7

‘ನವಿಲ ಕಿನ್ನರಿ’ ಕುಣಿತ

Published:
Updated:
‘ನವಿಲ ಕಿನ್ನರಿ’ ಕುಣಿತ

ರಾಜ್ಯದಲ್ಲಿ ಹಲವು ಸರ್ಕಾರಿ ಶಾಲೆಗಳಿಗೆ ಬೀಗಮುದ್ರೆ ಬಿದ್ದಿದೆ. ಮಕ್ಕಳ ಪ್ರವೇಶಾತಿ ಕೊರತೆಯೇ ಇದಕ್ಕೆ ಮೂಲ ಕಾರಣ. ಸರ್ಕಾರ ಮತ್ತು ಜನಪ್ರತಿನಿಧಿಗಳ ಅಸಡ್ಡೆ ಒಂದೆಡೆಯಾದರೆ ಪೋಷಕರ ನಿರ್ಲಕ್ಷ್ಯವನ್ನೂ ತಳ್ಳಿಹಾಕುವಂತಿಲ್ಲ. ಶಾಲೆಗಳು ಮುಚ್ಚಲು ಕಾರಣವಾಗುತ್ತಿರುವ ಅಂಶಗಳನ್ನು ಆಧರಿಸಿ ನಿರ್ಮಿಸಿರುವ ‘ನವಿಲ ಕಿನ್ನರಿ’ ಚಿತ್ರ ಈ ವಾರ(ಜೂನ್ 1ರಂದು) ತೆರೆಕಾಣುತ್ತಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಸರ್ಕಾರಿ ಶಾಲೆಗಳ ಇಂದಿನ ದಯನೀಯ ಸ್ಥಿತಿ ಬಗ್ಗೆ ಸಿನಿಮಾ ಬೆಳಕು ಚೆಲ್ಲಲಿದೆ. ಈ ಸಿನಿಮಾ ನಿರ್ಮಾಣದ ಹಿಂದೆ ಹಣ ಮಾಡುವ ಉದ್ದೇಶವಿಲ್ಲ. ಸಾಮಾಜಿಕ ಕಳಕಳಿ ಮೂಡಿಸುವುದೇ ನಮ್ಮ ಧ್ಯೇಯ ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರದ ನಿರ್ದೇಶಕ ವೆಂಕಿ ಚೆಲ್ಲಾ ಮೂಲತಃ ಆಂಧ್ರದವರು. ನಿರ್ದೇಶನದ ವೇಳೆ ಕಲಾವಿದರೊಟ್ಟಿಗೆ ಎದುರಾದ ಭಾಷೆ ಸಮಸ್ಯೆ ಬಗೆಹರಿಸಿಕೊಂಡು ಚಿತ್ರ ಪೂರ್ಣಗೊಳಿಸಿರುವ ವಿಶ್ವಾಸ ಅವರ ಮಾತುಗಳಲ್ಲಿತ್ತು. ‘ಚಿತ್ರ ನಿರ್ದೇಶನ, ನಿರ್ಮಾಣ ಹಾಗೂ ಬಿಡುಗಡೆಗೂ ಒಂದೊಂದು ಲೆಕ್ಕವಿರುತ್ತದೆ. ಜನರಿಗೆ ಇಷ್ಟವಾಗುವ ಸಿನಿಮಾ ಮಾಡಿರುವ ಖುಷಿ ಇದೆ’ ಎಂದರು.

ಹಳ್ಳಿಯೊಂದರ ಸರ್ಕಾರಿ ಶಾಲೆಯ ಸುತ್ತ ಕಥೆ ಹೆಣೆಯಾಗಿದೆ. ಶಾಲೆಗೆ ಮಕ್ಕಳ ಪ್ರವೇಶಾತಿ ಕಡಿಮೆಯಾಗುತ್ತದೆ. ಆಗ ಮುಖ್ಯಶಿಕ್ಷಕರು ಚಿಂತೆಯ ಮಡುವಿಗೆ ಬೀಳುತ್ತಾರೆ. ಶಾಲೆ ಉಳಿಸಬೇಕೆಂಬುದು ಅವರ ಹಂಬಲ. ಆದರೆ, ಪೋಷಕರಿಂದ ತಾತ್ಸಾರದ ಮಾತು ಕೇಳುತ್ತಾರೆ. ಕೊನೆಗೆ, ಭರತನಾಟ್ಯ ಕಲಾವಿದೆಯೊಬ್ಬರು ಶಾಲೆ ಉಳಿಸಲು ಶಿಕ್ಷಕರಿಗೆ ಸಾಥ್‌ ನೀಡುವುದೇ ಕಥಾಹಂದರ. ಕಲಾವಿದೆ ಪಾತ್ರದಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಹಿಮಾನ್ಸಿ ಚೌಧರಿ ಕಾಣಿಸಿಕೊಂಡಿದ್ದಾರೆ.

ಪವಾಡ ಭಂಜಕ ಖ್ಯಾತಿಯ ಹುಲಿಕಲ್‌ ನಟರಾಜ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ‘ನಾನು ಚಿತ್ರದಲ್ಲಿ ಮುಖ್ಯಶಿಕ್ಷಕ. ಪ್ರಸ್ತುತ ಖಾಸಗಿ ಶಾಲೆಗಳ ಅಬ್ಬರದಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇದನ್ನು ಚಿತ್ರ ಕಟ್ಟಿಕೊಡುತ್ತದೆ’ ಎಂದರು ಹುಲಿಕಲ್‌ ನಟರಾಜ್.

ವಿ.ಎಲ್. ಪ್ರಕಾಶ್‌ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸುಭಾಷ್‌ ಆನಂದ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ರೀನಿವಾಸ ದಿನ್ನಕೋಟ ಅವರದ್ದು. ಎಚ್.ಎನ್. ಶರತ್, ಎಚ್.ಎಸ್. ಬಸವಣ್ಣ, ಗಂಗಾಧರಯ್ಯ, ಬಿ.ಪಿ. ಸೂರ್ಯಪ್ರಕಾಶ್, ಪ್ರಕಾಶ್ ಅಂಗಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಧಾ ಬೆಳವಾಡಿ, ಶ್ರೀನಿವಾಸ ಪ್ರಭು, ಮೀನಾಕ್ಷಿ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry