7

ಕಥೆಯ ಆತ್ಮಕ್ಕೆ ಕಮರ್ಷಿಯಲ್‌ ಆಭರಣ

Published:
Updated:
ಕಥೆಯ ಆತ್ಮಕ್ಕೆ ಕಮರ್ಷಿಯಲ್‌ ಆಭರಣ

ನಿರ್ದೇಶಕ ಜಯತೀರ್ಥ ‘ವೆನಿಲ್ಲಾ’ದ ಹೆಸರಿನ ಹೊಸ ಉತ್ಪನ್ನವನ್ನು ಪ್ರೇಕ್ಷಕನಿಗೆ ಸಲ್ಲಿಸಲು ಸಜ್ಜಾಗಿದ್ದಾರೆ. ಹಲವು ಸತ್ಯಘಟನೆಗಳನ್ನು ಇಟ್ಟುಕೊಂಡು ಕಟ್ಟಿದ ಮರ್ಡರ್‌ ಮಿಸ್ಟರಿಗೆ ಜನರು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಅವರಿಗೂ ಇದೆ. ಇಂದು (ಜೂನ್‌ 1 ರಂದು) ಬಿಡುಗಡೆ ಆಗುತ್ತಿರುವ ‘ವೆನಿಲ್ಲಾ’ ಚಿತ್ರದ ನೆಪದಲ್ಲಿ ಸಿನಿಮಾ ಕೌಶಲ, ಮಾರುಕಟ್ಟೆಯ ಕ್ಲಿಷ್ಟ ವರ್ತುಲಗಳ ಕುರಿತೂ ಅವರು ಇಲ್ಲಿ ಮಾತನಾಡಿದ್ದಾರೆ.

‘ವೆನಿಲ್ಲಾ’ ನಿಮ್ಮ ಐದನೇ ಸಿನಿಮಾ. ಇಷ್ಟು ವರ್ಷದ ಅನುಭವದಿಂದ ನೀವು ಸಿನಿಮಾವನ್ನು ನೋಡುವ ದೃಷ್ಟಿ ಹೇಗೆಲ್ಲಾ ಬದಲಾಗಿದೆ?

ನನ್ನ ಮೊದಲಿನ ಸಿನಿಮಾಗಳಲ್ಲಿ ತುಂಬ ಹಾಡುಗಳಿರುತ್ತಿದ್ದವು. ಆದರೆ, ಈಗೀಗ ಪ್ರೇಕ್ಷಕರು ಕಥೆಗೆ ಕೊಡುವ ಆಸಕ್ತಿಯನ್ನು ಹಾಡಿಗೆ ತೋರಿಸುತ್ತಿಲ್ಲ ಎಂದು ಅನಿಸಿತು. ಅಲ್ಲದೇ ನಾವು ಹಾಡುಗಳಿಗೆ ತುಂಬ ಜಾಸ್ತಿ ಖರ್ಚು ಮಾಡುತ್ತೇವೆ. ಅಷ್ಟೆಲ್ಲ ಮಾಡಿ ಪ್ರೇಕ್ಷಕ ಮೆಚ್ಚಿಕೊಳ್ಳದಿದ್ದರೆ ಬೇಸರವಾಗುತ್ತದೆ. ಆದ್ದರಿಂದ ಈಗೀಗ ಹಾಡುಗಳ ಸಂಖ್ಯೆ ಮತ್ತು ಅವಧಿ ಎರಡನ್ನೂ ಕಡಿಮೆ ಮಾಡಿಕೊಂಡಿದ್ದೇನೆ. ಅಲ್ಲದೇ ಸಿನಿಮಾ ಅವಧಿಯನ್ನೂ ಸಾಕಷ್ಟು ಕಡಿಮೆ ಮಾಡಿಕೊಂಡಿದ್ದೇನೆ.

ಹಾಗೆಯೇ ಕಥೆ ಹೇಳುವ ರೀತಿಯನ್ನೂ ಬದಲಾಯಿಸಿಕೊಂಡಿದ್ದೇನೆ. ‘ಪ್ರೀತಿ ಮೊಳೆಯಿತು’ ಎನ್ನುವ ಸಂಗತಿಯನ್ನೇ ಇಟ್ಟುಕೊಂಡು ಎಷ್ಟು ಸಾವಿರ ಸಿನಿಮಾಗಳು ಬಂದಿವೆ ಹೇಳಿ? ನನ್ನ ಸಿನಿಮಾಗಳಲ್ಲಿಯೂ ಅದೇ ಸಂಗತಿ ಬಂದಿದೆ. ಇದೇ ವಿಷಯವನ್ನು ವಿವರವಾಗಿ ಎಷ್ಟು ಸಲ ಹೇಳಲು ಸಾಧ್ಯ? ‘ವೆನಿಲ್ಲಾ’ದಲ್ಲೂ ಪ್ರೇಮಕಥೆ ಇದೆ. ಆದರೆ, ಪ್ರೇಮಕಥೆಯನ್ನೇ ಬೇರೆ ರೀತಿಯಲ್ಲಿ ತೋರಿಸುವ ಚಿತ್ರವಿದು. ಇದು ಮರ್ಡರ್‌ ಮಿಸ್ಟರಿಯಾಗಿದ್ದರಿಂದ ಪ್ರೀತಿಯನ್ನೇ ಪ್ರಧಾನವಾಗಿರಿಸಿಕೊಳ್ಳದೆ ಬೇರೆಯದರೊಟ್ಟಿಗೆ ಅದನ್ನೂ ಹೇಳಿಕೊಂಡು ಹೋಗಿದ್ದೇನೆ.

‘ವೆನಿಲ್ಲಾ’ದಲ್ಲಿ ಫಿಲಾಸಫಿಕಲ್‌ ಆಗಿ ಒಂದೇ ಒಂದು ಡೈಲಾಗ್‌ ಇರುವುದಿಲ್ಲ. ಇಲ್ಲಿ ಎಲ್ಲ ಮಾತುಗಳೂ ಸಾಕ್ಷಿಯನ್ನು ಕೇಳುತ್ತವೆ. ಯಾವುದೋ ಒಂದು ಘಟನೆ ನಡೆದಿದೆ. ಪ್ರತಿಯೊಬ್ಬರ ಮಾತುಗಳಲ್ಲಿಯೂ ಆ ಘಟನೆಯ ಕುರಿತು ಸಾಕ್ಷ್ಯ ಇರುವ ಹಾಗೆಯೇ ಇದೆ. ಹಾಗಾಗಿ ಅನಗತ್ಯವಾದ ಸಂಭಾಷಣೆಗಳನ್ನು ಬಿಟ್ಟು ದೃಶ್ಯಗಳ ಮೇಲೆಯೇ ಕಥೆ ಹೇಳಿಕೊಂಡು ಹೋಗಿದ್ದೇವೆ. ತಾಂತ್ರಿಕವಾಗಿಯೂ ತುಂಬ ಚೆನ್ನಾಗಿದೆ. ನಟರಿಂದ ಕೆಲಸ ತೆಗೆದುಕೊಳ್ಳುವುದು ಹೇಗೆ, ಸಂಗೀತ, ಸಂಕಲನಗಳಂಥ ತಾಂತ್ರಿಕ ಕೆಲಸಗಳನ್ನು ಪರಿಣಾಮಕಾರಿಯಾಗಿ ಅಳವಡಿಸುವುದು ಹೇಗೆ ಎಂಬುದನ್ನು ಇಷ್ಟು ವರ್ಷದ ಅನುಭವ ಕಲಿಸಿಕೊಟ್ಟಿದೆ. ಅನಗತ್ಯವಾದ ಯಾವ ಸಂಗತಿಯೂ ಸಿನಿಮಾದಲ್ಲಿ ಇರಲೇಬಾರದು ಎಂಬುದು ನಾನು ಕಲಿತ ದೊಡ್ಡ ಪಾಠ.

ಇದು ಸಿನಿಮಾ ಕೌಶಲ ಕುರಿತಾದ ಮಾತಾಯಿತು. ಸಿನಿಮಾ ಮಾರುಕಟ್ಟೆ ನಿಮಗೆ ಕಲಿಸಿದ ಪಾಠಗಳ ಬಗ್ಗೆ ಹೇಳಿ.

ಮಾರುಕಟ್ಟೆ... ನಿಜಕ್ಕೂ ಹೇಳ್ತೀನಿ. ಈ ವಿಷಯದಲ್ಲಿ ನಾನು ಬಹಳ ಹಿಂದಿದ್ದೀನಿ. ಇದು ನನ್ನ ಐದನೇ ಸಿನಿಮಾ. ಇದುವರೆಗೆ ನಾನೊಂದು ಕಾರನ್ನೂ ತೆಗೆದುಕೊಂಡಿಲ್ಲ ಅಂದರೆ ನೀವೇ ಯೋಚಿಸಿ. ನನ್ನ ಪ್ರಕಾರ ಮಾರುಕಟ್ಟೆ ಎನ್ನುವುದು ನಿರ್ದೇಶನಕ್ಕಿಂತ ಬೇರೆಯದೇ ವಿಷಯ. ಅದರ ಕಾಲೇಜೇ ಬೇರೆ, ಲ್ಯಾಂಗ್ವೇಜೇ ಬೇರೆ, ಸಬ್ಜೆಕ್ಟೇ ಬೇರೆ. ಈ ಅರಿವು ಚಿತ್ರರಂಗಕ್ಕೂ ಇರಬೇಕು.

ತೆಲುಗು ಅಥವಾ ಇತರೆ ಚಿತ್ರರಂಗದ ಮಟ್ಟಕ್ಕೆ ನಾವು ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಸಾಧ್ಯವಾಗದೇ ಇರುವುದೂ ಇದೇ ಕಾರಣಕ್ಕೆ ಎಂದು ನನಗನಿಸುತ್ತದೆ. ನಮ್ಮಲ್ಲಿ ನಿರ್ದೇಶನ ಮತ್ತು ಮಾರುಕಟ್ಟೆ ಎರಡನ್ನೂ ಮಿಕ್ಸ್‌ ಮಾಡಿದ್ದರಿಂದಲೇ ಎರಡರಲ್ಲಿ ಯಾವುದೂ ಸರಿಯಾಗದೆ ಹಾಳಾಗುವುದು ಅನಿಸುತ್ತದೆ.

ಕೆಲವೊಮ್ಮೆ ಕಾಂಬಿನೇಷನ್‌ ಎನ್ನುವುದು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತದೆ. ಬೇಡಿಕೆ ಇರುವ ನಾಯಕನನ್ನು ಇಟ್ಟುಕೊಂಡು ಆರಾಮವಾಗಿ ಸಿನಿಮಾ ಮಾಡಿ ಮುಗಿಸಿಬಿಡಬಹುದು. ಆಗ ಮಾರುಕಟ್ಟೆಯಲ್ಲಿಯೂ ಗೆಲ್ಲಬಹುದು. ಸತ್ಯ ಹೇಳ್ತೀನಿ, ‘ಬುಲೆಟ್ ಬಸ್ಯ’ ಸಿನಿಮಾದ ಒಟ್ಟಾರೆ ಗಳಿಕೆ ಏಳು ಕೋಟಿ! ಆದರೆ ‘ವೆನಿಲ್ಲಾ’ದಂಥ ಸಿನಿಮಾಗಳಿಗೆ ಅಂಥ ನಟರು ಸಿಗುವುದಿಲ್ಲ. ಹಣ ಹಾಕುವುದಿಲ್ಲ. ಇಂಥ ನೂರಾರು ಸಿಕ್ಕುಗಳಿವೆ. ಆದರೂ ಕೂಡ ನನ್ನ ಮಿತಿಯಲ್ಲಿ ಆದಷ್ಟೂ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ನಾನು ಯೋಚಿಸುತ್ತೇನೆ.

‘ವೆನಿಲ್ಲಾ’ವನ್ನು ತುಂಬ ಕಮರ್ಷಿಯಲ್‌ ಆಗಿಯೇ ರೂಪಿಸಿದ್ದೇವೆ. ಕಥೆಯ ಆತ್ಮಕ್ಕೆ ಕಮರ್ಷಿಯಲ್ ಆಭರಣ ತೊಡಿಸಿದ್ದೇವೆ. ಆದರೆ ಅದರ ಜತೆಗೆ ಒಂದು ಸಾಮಾಜಿಕ ಕಾಳಜಿಯ ಎಳೆಯನ್ನೂ ಇಟ್ಟುಕೊಂಡಿದ್ದೇವೆ.ವೆನಿಲ್ಲಾ ಚಿತ್ರದಲ್ಲಿ ಸ್ವಾತಿ, ಅವಿನಾಶ್

‘ವೆನಿಲ್ಲಾ’ ಎಂಬ ಹೆಸರಿಡಲು ಕಾರಣವೇನು?

ವೆನಿಲ್ಲಾ ಎಂದ ತಕ್ಷಣ ಐಸ್‌ಕ್ರಿಮ್‌ ನೆನಪಾಗಿಬಿಡುತ್ತದೆ. ವೆನಿಲ್ಲಾ ಫ್ಲೇವರ್ ಚಾಕೊಲೆಟ್‌ ನೆನಪಾಗುತ್ತದೆ. ನಮ್ಮ ಚಿತ್ರದ ನಾಯಕ– ನಾಯಕಿಗೂ ಚಿಕ್ಕಂದಿನಿಂದ ವೆನಿಲ್ಲಾ ಐಸ್‌ಕ್ರೀಂ ಇಷ್ಟವಾಗಿರುತ್ತದೆ. ವೆನಿಲ್ಲಾ ಎಂದು ಯಾರು ಮೊದಲು ಹೇಳುತ್ತಾರೋ ಅವರು ಇನ್ನೊಬ್ಬರಿಗೆ ಐಸ್‌ಕ್ರೀಂ ಕೊಡಿಸಬೇಕು ಎಂಬ ನಿಯಮದ ಆಟ ಆಡುತ್ತಿರುತ್ತಾರೆ. ಅದೇ ಅವರ ಬದುಕಿಗೆ ಮುಳುವಾಗುತ್ತದೆ. ಅಂಥ ವೆನಿಲ್ಲಾವನ್ನು ಹೇಗೆಲ್ಲಾ ಉಪಯೋಗಿಸಿಕೊಂಡಿದ್ದಾರೆ. ಅದರಿಂದ ಜನರಿಗೆ ಹೇಗೆ ತೊಂದರೆ ಆಗಿದೆ. ರೈತರು ಯಾವ ರೀತಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದನ್ನು ಸಣ್ಣದಾಗಿ ಹೇಳಿದ್ದೇನೆ. ವೆನಿಲ್ಲಾ ಎನ್ನುವ ಹೆಸರು ಹೊಸ ರೀತಿಯ ಧ್ವನಿಯನ್ನು ಹೊಂದಿದೆ. ತುಂಬ ಜನರು ಇದನ್ನು ಇಂಗ್ಲಿಷ್‌ ಹೆಸರು ಅಂದುಕೊಂಡಿದ್ದಾರೆ. ಇದು ಇಂಗ್ಲಿಷ್‌ ಅಲ್ಲ, ಅದೊಂದು ಬೆಳೆಯ ಹೆಸರು.

ಮರ್ಡರ್‌ ಮಿಸ್ಟರಿ ನಿಮಗೆ ಹೊಸತು. ಅದಕ್ಕೆ ನಿಮ್ಮೊಳಗಿನ ನಿರ್ದೇಶಕನನ್ನು ಹೇಗೆ ಅಣಿಗೊಳಿಸಿಕೊಂಡಿರಿ?

ನನಗೆ ಈ ಚಿತ್ರದ ನಾಯಕ ಅವಿನಾಶ್‌ನನ್ನು ಮೊದಲು ನೋಡಿದಾಗ ಕಥೆಯ ಮೂಲಕವೇ ಇವನನ್ನು ಪರಿಚಯಿಸಬೇಕು ಅನಿಸಿತು. ಲವ್‌ಸ್ಟೋರಿ ಮತ್ತು ಆ್ಯಕ್ಷನ್ ಚಿತ್ರದ ಮೂಲಕ ಒಬ್ಬ ನಟನನ್ನು ಜನಪ್ರಿಯವಾಗಿ ಪರಿಚಯಿಸಿಬಿಡಬಹುದು. ಆದರೆ ಕಥೆಯ ಮೂಲಕವೇ ನಟನನ್ನು ಪರಿಚಯಿಸಬೇಕು ಎಂದು ಅಂದುಕೊಂಡೆ. ನನ್ನ ಕಥೆಯ ಎಳೆಯನ್ನೂ ನಿರ್ಮಾಪಕರಿಗೆ ಹೇಳಿದೆ. ಅವರಿಗೆ ತುಂಬ ಇಷ್ಟವಾಗಿ ಒಪ್ಪಿಕೊಂಡರು. ಅದನ್ನು ವಿಸ್ತರಿಸುವಾಗ ನನ್ನನ್ನು ಈ ಹೊಸ ಪ್ರಕಾರಕ್ಕೆ ಅಣಿಗೊಳಿಸುವ ಕಸರತ್ತು ಶುರುವಾಯ್ತು. ನನಗಿದು ಹೊಸ ಪ್ರಕಾರದ ಸಿನಿಮಾ.

ಮರ್ಡರ್‌ ಮಿಸ್ಟರಿಯನ್ನು ಸಿನಿಮಾ ಜಗತ್ತಿನಲ್ಲಿ ಹೇಗೆಲ್ಲ ತೋರಿಸಿದ್ದಾರೆ ಎಂದು ಶೋಧಿಸಲು ಆರಂಭಿಸಿದೆ. ಹಿಚ್‌ಕಾಕ್‌ ಸಿನಿಮಾಗಳನ್ನು ನೋಡಿದೆ. ಭಾರತೀಯ ಚಿತ್ರರಂಗದಲ್ಲಿ ಮರ್ಡರ್ ಮಿಸ್ಟರಿ ಹೇಗೆ ತೋರಿಸಿದ್ದಾರೆ ಎಂದು ನೋಡಿದೆ. ಬಹುತೇಕ ಎಲ್ಲ ಚಿತ್ರಗಳಲ್ಲಿಯೂ ಸೆಕ್ಸು, ದ್ವೇಷ, ಹಣ ಇಂಥ ಉದ್ದೇಶಗಳಿಗಾಗಿಯೇ ಮರ್ಡರ್‌ ಆಗಿರುತ್ತವೆ. ಇವೆಲ್ಲವನ್ನೂ ನೋಡಿ ಹಲವು ಸತ್ಯಘಟನೆಗಳನ್ನೂ ಅಭ್ಯಸಿಸಿದೆ. ಡ್ರಾಮಾನೂ ಇಟ್ಟುಕೊಂಡು ಸಾಧ್ಯವಾದಷ್ಟೂ ವಾಸ್ತವಿಕ ನೆಲೆಗಟ್ಟಿನಲ್ಲಿಯೇ ಸಿನಿಮಾ ತೋರಿಸಲು ನಿರ್ಧರಿಸಿದೆ. ಶೇ 60ರಷ್ಟು ನೈಜಘಟನೆಗಳನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ ‘ವೆನಿಲ್ಲಾ.’

ಇತ್ತೀಚೆಗೆ ಮ್ಯಾಗಿ ಪ್ರಾಡಕ್ಟ್‌ ಅನ್ನು ಬ್ಯಾನ್‌ ಮಾಡಿದ್ದರು. ಈ ರೀತಿಯ ಏನೇನೋ ಘಟನೆಗಳು ನಡೆಯುತ್ತಿರುತ್ತವೆ. ಅವುಗಳನ್ನು ನಾವು ಸುಲಭವಾಗಿ ಮರೆತುಬಿಡುತ್ತೇವೆ. ಆದರೆ ಅವುಗಳ ಬೆನ್ನತ್ತಿ ಹೋದರೆ ಹಲವು ರೋಚಕ ಕಥೆಗಳು ಸಿಗುತ್ತವೆ. ಮ್ಯಾಗಿ ಕುರಿತಾದ ಸಿನಿಮಾ ಅಲ್ಲವೇ ಅಲ್ಲ ಇದು. ಆದರೆ ಒಂದು ಕಾಲ್ಪನಿಕ ‘ಉತ್ಪನ್ನ’ವನ್ನು ಸೃಷ್ಟಿ ಮಾಡಿ ಅದರಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದೇನೆ. ಚಿತ್ರಕಥೆ ಕಟ್ಟಲಿಕ್ಕಾಗಿಯೇ ಎಂಟು ತಿಂಗಳನ್ನು ತೆಗೆದುಕೊಂಡಿದ್ದೇನೆ. ಇದು ಪ್ರೇಕ್ಷಕನನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಗೊತ್ತಿಲ್ಲ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry