ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಕರ್ತವ್ಯಕ್ಕೆ ದುನಿಯಾ ವಿಜಯ್ ಅಡ್ಡಿ

ಆರೋಪಿ ತಪ್ಪಿಸಿಕೊಳ್ಳಲು ಸಹಕಾರ ಆರೋಪ; ಎಫ್ಐಆರ್ ದಾಖಲಾಗುತ್ತಿದ್ದಂತೆ ನಟ ನಾಪತ್ತೆ
Last Updated 31 ಮೇ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ತಾವರಕೆರೆ ಠಾಣೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹೆಡ್ ಕಾನ್‌ಸ್ಟೆಬಲ್‌ ಗೋವಿಂದರಾಜು ದೂರು ನೀಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ (ಐಪಿಸಿ 353) ಹಾಗೂ ಬಂಧನದಲ್ಲಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಸಹಕಾರ (ಐಪಿಸಿ 225) ಆರೋಪದಡಿ ವಿಜಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಅವರು ನಾಪತ್ತೆ ಆಗಿದ್ದು, ಪತ್ತೆ ಹಚ್ಚುತ್ತಿದ್ದೇವೆ ಎಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ತಿಳಿಸಿದರು.

2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ‘ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಲಾವಿದರಾದ ಅನಿಲ್ ಹಾಗೂ ರಾಘವ್ ಉದಯ್ ಮೃತಪಟ್ಟಿದ್ದರು. ಸಿನಿಮಾ ನಿರ್ಮಾಪಕ ಪಿ.ಸುಂದರ್‌ ಗೌಡ, ನಿರ್ದೇಶಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ತಾವರಕೆರೆ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅದರ ವಿಚಾರಣೆ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆಗೆ ಪಿ.ಸುಂದರ್‌ ಗೌಡ ನಿರಂತರವಾಗಿ ಗೈರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ತಡರಾತ್ರಿ ಆರೋಪಿ ವಶಕ್ಕೆ: ವಾರಂಟ್ ಸಮೇತ ಚನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಪಿ.ಸುಂದರ್‌ಗೌಡ ಮನೆಗೆ ಬುಧವಾರ ರಾತ್ರಿ 10.30 ಗಂಟೆ ಸುಮಾರಿಗೆ ಹೋಗಿದ್ದ ಪೊಲೀಸರು, ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಸಿದ್ಧರಾಗಿದ್ದರು. ಅದೇ ವೇಳೆ ಸುಂದರ್‌ ಗೌಡ, ದುನಿಯಾ ವಿಜಯ್‌ ಹಾಗೂ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ವಿಜಯ್, ಪೊಲೀಸರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದರು.

‘ಸುಂದರ್‌ ಗೌಡ ತಾಯಿಗೆ ಹುಷಾರಿಲ್ಲ. ರಾತ್ರಿಯೇ ಆತನನ್ನು ಬಂಧಿಸಿ ಕರೆದೊಯ್ದರೆ, ಆಕೆಗೆ ತೊಂದರೆ ಆಗುತ್ತದೆ. ನಾಳೆ (ಗುರುವಾರ) ನಾನೇ ಆತನನ್ನು ಠಾಣೆಗೆ ಕರೆದುಕೊಂಡು ಬರುತ್ತೇನೆ. ಈಗ ವಾಪಸ್‌ ಹೋಗಿ’ ಎಂದು ವಿಜಯ್‌ ಹೇಳಿದ್ದರು. ಅದಕ್ಕೆ ಪೊಲೀಸರು ಒಪ್ಪದಿದ್ದಾಗ, ಮನವೊಲಿಸಲು ಯತ್ನಿಸಿದ್ದರು.

ಅದೇ ವೇಳೆ ಆರೋಪಿ ಸುಂದರ್‌ಗೌಡ, ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಅದು ಗೊತ್ತಾಗುತ್ತಿದ್ದಂತೆ ವಿಜಯ್‌ ಅವರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ರಾತ್ರಿ 3 ಗಂಟೆಗೆ ಠಾಣೆಗೆ ಬಂದು ದೂರು ದಾಖಲಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು.

‘ಗುರುವಾರ ಬೆಳಿಗ್ಗೆ ಸುಂದರ್‌ಗೌಡ ಹಾಗೂ ವಿಜಯ್‌ ಮನೆಗೆ ಹೋಗಿ ಪರಿಶೀಲನೆ ನಡೆಸಿದೆವು. ಆದರೆ, ಅವರು ಮನೆಯಲ್ಲಿರಲಿಲ್ಲ. ಅವರ ಸಂಬಂಧಿಕರು ಹಾಗೂ ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT