ಡಿಕೆಶಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ: ಮಹತ್ವದ ದಾಖಲೆಗಳು ವಶ

7

ಡಿಕೆಶಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ: ಮಹತ್ವದ ದಾಖಲೆಗಳು ವಶ

Published:
Updated:
ಡಿಕೆಶಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ: ಮಹತ್ವದ ದಾಖಲೆಗಳು ವಶ

ಬೆಂಗಳೂರು/ರಾಮನಗರ: ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ ಅವರ ಆಪ್ತರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಕುಮಾರ್‌ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಕೆಲವೇ ತಿಂಗಳಲ್ಲಿ ಈ ದಾಳಿ ನಡೆದಿದೆ. ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಶಿವಕುಮಾರ್‌ ಮತ್ತು ಸುರೇಶ್‌ ಅವರ ಹನ್ನೊಂದು ಮಂದಿ ಆಪ್ತರ ಮನೆಗಳನ್ನು ಶೋಧಿಸಲು ಕೇಂದ್ರ ತನಿಖಾ ದಳದ ಅಧಿಕಾರಿಗಳು ವಾರೆಂಟ್‌ ಪಡೆದಿದ್ದರು.

ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಪದ್ಮನಾಭ ಅವರ ಬೆಂಗಳೂರು ಮನೆ, ಕನಕಪುರ ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗ, ಕಂದಾಯ ವಿಭಾಗ‌ದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ಮನೆಗಳು, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಡಿಕೆಶಿ ಹೊಂದಿದ್ದ ಕಚೇರಿ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು.

ಬೆಳಿಗ್ಗೆಯೇ ಎರಡು ತಂಡಗಳಲ್ಲಿ ಕನಕಪುರಕ್ಕೆ ಬ‌ಂದ ಸಿಬಿಐನ ಒಂಭತ್ತು ಅಧಿಕಾರಿಗಳು ಶಿವಕುಮಾರ್‌ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರು. ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌, ಶಿರಸ್ತೇದಾರ್‌ ಶಿವಾನಂದ ಅವರನ್ನು  ಸಂಜೆವರೆಗೂ ತೀವ್ರ ವಿಚಾರಣೆಗೊಳಪಡಿಸಿದರು.

ತಾಲೂಕು ಕಚೇರಿಯ ಕೆಲವು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕನಕಪುರದ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಿರಿಯ ಕಾಂಗ್ರೆಸ್‌ ಮುಖಂಡ ಹೊಂದಿರುವ ಆಸ್ತಿಪಾಸ್ತಿಗಳ ಸ್ಥಳ ಪರಿಶೀಲನೆ ನಡೆಸಿದರು. ತಾಲೂಕು ಕಚೇರಿ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌, ಮತದಾರ ಗುರುತಿನ ಚೀಟಿಗೆ ಬಳಸುವ ಹಾಲೋ ಸ್ಟಿಕರ್‌ಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನೋಟು ಬದಲಾವಣೆ ಪ್ರಕರಣ:

ಕೇಂದ್ರ ಸರ್ಕಾರ ₹ 1000 ಹಾಗೂ ₹ 500 ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಕಾರ್ಪೊರೇಷನ್‌ ಬ್ಯಾಂಕ್‌ ರಾಮನಗರ ಶಾಖೆಯಲ್ಲಿ ₹ 10 ಲಕ್ಷ ರೂಪಾಯಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಏಪ್ರಿಲ್‌ 7ರಂದು ಎಫ್‌ಐಆರ್‌ ದಾಖಲಿಸಿತ್ತು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಬಿ. ಪ್ರಕಾಶ್‌ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿತ್ತು.

ಮ್ಯಾನೇಜರ್‌, ಹಳೇ ನೋಟುಗಳ ಬದಲಾವಣೆ ಮಾಡುವ ಸಮಯದಲ್ಲಿ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ್ದ ಮಾನದಂಡಗಳನ್ನು ಪಾಲಿಸದೆ, 250 ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ದೂರಲಾಗಿದೆ. ಈ ನೋಟು ಬದಲಾವಣೆ ಲಾಭವನ್ನು ಪದ್ಮನಾಭ ಮತ್ತು ಇನ್ನೂ ಕೆಲವರು ಪಡೆದಿದ್ದಾರೆ ಎನ್ನಲಾಗಿದೆ.

ಸಿಬಿಐ, ಸರ್ಚ್‌ ವಾರೆಂಟ್‌ ಪಡೆದಿರುವ ಉಳಿದವರ ಮನೆಗಳ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಇದರಲ್ಲಿ ಶಿವಕುಮಾರ್‌ ಮತ್ತು ಸುರೇಶ್‌ ಅವರ ಹೆಸರಿಲ್ಲ. ‘ಇದು ರಾಜಕೀಯ ಪ್ರೇರಿತ ದಾಳಿ, ನಮ್ಮನ್ನು ರಾಜಕೀಯವಾಗಿ ಮುಗಿಸುವ ಸಂಚು’ ಎಂದು ಸಹೋದರರಿಬ್ಬರು ‍ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry