ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷಕ್ಕೆ ಇಸ್ಲಾಂ ಭೀತಿ

ಮುಸ್ಲಿಂ ಕೌನ್ಸಿಲ್ ಆಫ್ ಬ್ರಿಟನ್‌ನ ಕಾರ್ಯದರ್ಶಿ ಹರೂನ್ ಖಾನ್ ಆರೋಪ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಲಂಡನ್: ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಇಸ್ಲಾಂ ಭಯ (ಇಸ್ಲಾಮೊಫೋಬಿಯಾ) ಕಾಡುತ್ತಿದೆ ಎಂದು ಬ್ರಿಟನ್‌ನ ಅತಿದೊಡ್ಡ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ಕೌನ್ಸಿಲ್ ಆಫ್ ಬ್ರಿಟನ್ (ಎಂಸಿಬಿ) ಆರೋಪಿಸಿದೆ.

ಪಶ್ಚಿಮ ಬಂಗಾಳದ ವಿವಾದಾತ್ಮಕ ಭಾಷಣಕಾರ ತಪನ್ ಘೋಷ್ ಅವರಿಂದ ಕಳೆದ ವರ್ಷ ಬ್ರಿಟನ್ ಸಂಸತ್ ಸಂಕೀರ್ಣದಲ್ಲಿ ಭಾಷಣ ಮಾಡಿಸಿದ್ದು, ಮುಸ್ಲಿಂ ವಿರೋಧಿ ಚಟುವಟಿಕೆಗೆ ಉದಾಹರಣೆ ಎಂದು ಅದು ಆರೋಪಿಸಿದೆ.

‘ಇಸ್ಲಾಂ ಧರ್ಮದ ಬಗೆಗೆ ನಿರಂತರವಾಗಿ ತಿರಸ್ಕಾರವನ್ನು ದಾಖಲಿಸುತ್ತಿರುವ ಸಂಸದ ಬಾಬ್ ಬ್ಲಾಕ್‌ಮ್ಯಾನ್ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಲಪಂಥೀಯ ತೀವ್ರವಾದಿ ಟಾಮಿ ರಾಬಿನ್‌ಸನ್ ಅವರ ಟ್ವೀಟ್‌ ಅನ್ನು ಬ್ಲಾಕ್‌ಮ್ಯಾನ್ ರಿ–ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ವಿರೋಧಿ ಬರಹವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇಸ್ಲಾಂ ವಿರೋಧಿ ಹಲವು ಫೇಸ್‌ಬುಕ್ ಗುಂಪುಗಳಿಗೆ ಬಾಬ್ ಅವರು ಸದಸ್ಯರಾಗಿರುವುದು ಕಂಡುಬಂದಿದೆ’ ಎಂದು ಆರೋಪಿಸಿ, ಎಂಸಿಬಿ ಕಾರ್ಯದರ್ಶಿ ಹರೂನ್ ಖಾನ್ ಅವರು ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಬ್ರಂಡನ್ ಲೂಯಿಸ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ.

ಇದೇ ರೀತಿಯ ಒಂಬತ್ತು ಉದಾಹರಣೆಗಳನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣಗಳು ಗಂಭೀರ ಸಮಸ್ಯೆಯೊಂದರ ತುಣುಕುಗಳು ಮಾತ್ರ. ದೊಡ್ಡ ಸಮಸ್ಯೆಯೊಂದನ್ನೂ ಇವು ಸೂಚಿಸುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಹಿಂದೂ ಧರ್ಮೀಯರು ಅಧಿಕವಾಗಿರುವ ಉತ್ತರ ಲಂಡನ್‌ನ ಪೂರ್ವ ಹ್ಯಾರೋ ಕ್ಷೇತ್ರವನ್ನು ಬ್ಲಾಕ್‌ಮ್ಯಾನ್ ಪ್ರತಿನಿಧಿಸುತ್ತಿದ್ದಾರೆ. ತಪನ್ ಘೋಷ್ ಅವರ ಭಾಷಣವನ್ನು ಆಯೋಜಿಸಿದ್ದ ಇವರು, ಘೋಷ್ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು.

ಶಿಫಾರಸುಗಳೇನು?: ಕನ್ಸರ್ವೇಟಿವ್ ಪಕ್ಷದ ಸದಸ್ಯರು, ಇಡೀ ವ್ಯವಸ್ಥೆ, ಚುನಾವಣಾ ಪ್ರಚಾರ ಹಾಗೂ ಪಕ್ಷದ ಜನಪ್ರತಿನಿಧಿಗಳಲ್ಲಿ ಇರುವ ಇಸ್ಲಾಂ ಬಗೆಗಿನ ತಿರಸ್ಕಾರದ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು. ಪಕ್ಷದೊಳಗೆ ನಡೆದ ಇಂತಹ ಪ್ರಕರಣಗಳ ಪಟ್ಟಿ ಪ್ರಕಟಿಸಬೇಕು. ಇಸ್ಲಾಂ ಬಗೆಗಿನ ತಿರಸ್ಕಾರದ ಕುರಿತು ಶಿಕ್ಷಣ ಹಾಗೂ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಧರ್ಮಾಂಧತೆ ಬಗ್ಗೆ ಅರಿವು ಮೂಡಿಸಬೇಕು ಎಂಬ ಶಿಫಾರಸುಗಳನ್ನು ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕನ್ಸರ್ವೇಟಿವ್ ಪಕ್ಷ, ‘ಅಂತಹ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೂಕ್ತವಾಗಿ ನಡೆದುಕೊಳ್ಳದವರನ್ನು ಅಮಾನತುಗೊಳಿಸಿ, ತನಿಖೆ ನಡೆಸಲಾಗುತ್ತಿದೆ’ ಎಂದಿದೆ. ಧರ್ಮಾಂಧತೆ ವಿಚಾರ ಕಂಡುಬಂದಲ್ಲಿ ತಮಗೆ ಮಾಹಿತಿ ನೀಡುವಂತೆ ಸಂಸದರಿಗೆ ಲೂಯಿಸ್ ಅವರು ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಿದ್ದಾರೆ.

ಡೆನ್ಮಾರ್ಕ್: ಮುಖಗವಸು ನಿಷೇಧ
ಸ್ಟಾಕ್‌ಹೋಮ್ (ಎಎಫ್‌ಪಿ):
ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ಮುಖಗವಸು ಧರಿಸದಂತೆ ಡೆನ್ಮಾರ್ಕ್ ಸಂಸತ್ತು ಗುರುವಾರ ಕಾನೂನು ಜಾರಿಗೊಳಿಸಿದೆ. ಇಂತಹ ಕಾನೂನು ಅಳವಡಿಸಿಕೊಂಡ ಐರೋಪ್ಯ ರಾಷ್ಟ್ರಗಳ ಸಾಲಿಗೆ ಡೆನ್ಮಾರ್ಕ್ ಕೂಡಾ ಸೇರ್ಪಡೆಯಾಗಿದೆ.

ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆಯಿಂದ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರುವುದು ಕಂಡುಬಂದಲ್ಲಿ ಅವರಿಗೆ ದಂಡ ವಿಧಿಸಲಾಗುವುದು ಎಂದು ಹೊಸ ಕಾನೂನು ಹೇಳುತ್ತದೆ. ಈ ನಿರ್ಣಯದ ಪರ 75 ಹಾಗೂ ವಿರುದ್ಧವಾಗಿ 30 ಮತ ಚಲಾವಣೆಯಾದವು.

ಬ್ಲಾಕ್‌ಮ್ಯಾನ್ ಸ್ಪಷ್ಟನೆ
‘ಸಂಸತ್ತಿನಲ್ಲಿ ಘೋಷ್ ಅವರ ಭಾಷಣವನ್ನು ನಾನು ಆಯೋಜಿಸಿರಲಿಲ್ಲ. ಸಂಘಟನೆಯೊಂದು ಅವರಿಗೆ ಆಹ್ವಾನ ನೀಡಿದ್ದು, ನನ್ನ ಅರಿವಿಗೆ ಬಂದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ತಪ್ಪಾಗಿ ಷೇರ್ ಮಾಡಿದ್ದೆ. ಅದಕ್ಕೆ ಆಗ ಕ್ಷಮೆಯನ್ನೂ ಕೇಳಿದ್ದೆ’ ಎಂದು ಬ್ಲಾಕ್‌ಮ್ಯಾನ್ ಗುರುವಾರ ಹೇಳಿಕೆ ನೀಡಿದ್ದಾರೆ.

‘ಇಸ್ಲಾಂ ಭೀತಿ’ ಆರೋಪವನ್ನು ನಾನು ಖಂಡಿಸುತ್ತೇನೆ. ನನ್ನ ಅರಿವಿಗೆ ಬಾರದಂತೆ ಫೇಸ್‌ಬುಕ್‌ ಗುಂಪುಗಳಲ್ಲಿ ನನ್ನನ್ನು ಸೇರಿಸಲಾಗಿತ್ತು. ತಕ್ಷಣ ನಾನು ಆ ಗುಂಪುಗಳಿಂದ ಹೊರಬಂದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT