ಡಿ.ಕೆ. ಬ್ರದರ್ಸ್‌ ‘ಕೈ’ ಹಿಡಿದು ದಡ ಸೇರಿದ ಮುನಿರತ್ನ

7

ಡಿ.ಕೆ. ಬ್ರದರ್ಸ್‌ ‘ಕೈ’ ಹಿಡಿದು ದಡ ಸೇರಿದ ಮುನಿರತ್ನ

Published:
Updated:
ಡಿ.ಕೆ. ಬ್ರದರ್ಸ್‌ ‘ಕೈ’ ಹಿಡಿದು ದಡ ಸೇರಿದ ಮುನಿರತ್ನ

ಬೆಂಗಳೂರು: ಸದಾ ವಿವಾದಗಳಿಂದಲೇ ರಾಜ್ಯದ ಗಮನ ಸೆಳೆದಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಪಾರಮ್ಯ ಸಾಧಿಸಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಮೈತ್ರಿ ಸರ್ಕಾರದ ‘ದೋಸ್ತಿ’ ಪಕ್ಷ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಜಾರಿದೆ.

ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಈ ಫಲಿತಾಂಶ ಸಮಾಧಾನ ತಂದಿದೆ. 2013ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ‘ಕಮಲ’ದಿಂದ ‘ಕೈ’ ಕಿತ್ತುಕೊಂಡಿತ್ತು. ಶಾಸಕ ಮುನಿರತ್ನ ಅವರಿಗೆ ಇದು ಸತತ ಎರಡನೇ ಗೆಲುವು. ಪಟ್ಟು ಹಿಡಿದು ‘ಆಪ್ತ ಮಿತ್ರ’ನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಡಿ.ಕೆ. ಸಹೋದರರು (ಶಾಸಕ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌) ಯಶಸ್ವಿಯಾಗಿದ್ದಾರೆ.

ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 9,746 ಮತದಾರರ ಗುರುತಿನ ಚೀಟಿಗಳು ಮೇ 8ರಂದು ಪತ್ತೆಯಾಗಿದ್ದವು. ಮುನಿರತ್ನ ಸೇರಿದಂತೆ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಯೋಗವು ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿತ್ತು.

ಯುವ ಮೋರ್ಚಾ ಮಾಜಿ ಅಧ್ಯಕ್ಷ ತುಳಸಿ ಮುನಿರಾಜು ಗೌಡ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಪಾಲಿಕೆಯ ಮಾಜಿ ಸದಸ್ಯ ಜಿ.ಎಚ್‌.ರಾಮಚಂದ್ರ ಜೆಡಿಎಸ್‌ ಸೇರಿದ್ದರು. ಪಕ್ಷವು ಅವರನ್ನು ಹುರಿಯಾಳನ್ನಾಗಿ ಮಾಡಿತ್ತು. ಹೊಂದಾಣಿಕೆಯಿಂದ ಚುನಾವಣೆ ಎದುರಿಸಲು ಮೈತ್ರಿ ಸರ್ಕಾರದ ಜೆಡಿಎಸ್–ಕಾಂಗ್ರೆಸ್‌ ಮುಂದಾಗಿದ್ದವು.

‘ಜಯನಗರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ. ರಾಜರಾಜೇಶ್ವರಿನಗರ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ’ ಎಂದು ಜೆಡಿಎಸ್‌ ನಾಯಕರು ವಿನಂತಿಸಿ

ದ್ದರು. ‘ಇಲ್ಲಿ ನಮಗೆ ಸಹಕಾರ ನೀಡಿ. ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡುವ ಹೊಣೆ ನಮ್ಮದು’ ಎಂದು ಡಿ.ಕೆ. ಸಹೋದರರು ಸೂತ್ರ ಮುಂದಿಟ್ಟಿದ್ದರು. ‘ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಭರವಸೆ ನೀಡಿ ರಾಮಚಂದ್ರ ಅವರನ್ನು ಪಕ್ಷಕ್ಕೆ ಕರೆ ತರಲಾಗಿದೆ. ಈಗ ಮೋಸ ಮಾಡಲು ಸಾಧ್ಯವಿಲ್ಲ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ. ಅದರಲ್ಲಿ ಒಂದು ಸೀಟನ್ನು ರಾಮಚಂದ್ರ ಅವರಿಗೆ ನೀಡಿ’ ಎಂದು ಜೆಡಿಎಸ್‌ ಮುಖಂಡರು ಪಟ್ಟು ಹಿಡಿದಿದ್ದರು. ಎರಡು ಸುತ್ತಿನ ಸಂಧಾನ ನಡೆದರೂ ಫಲಪ್ರದವಾಗಿರಲಿಲ್ಲ. ಅದರ ಬೆನ್ನಲ್ಲೇ, ‘ನಮ್ಮ ಮೈತ್ರಿ ವಿಧಾನಸೌಧಕ್ಕೆ ಸೀಮಿತ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಗುಡುಗಿದ್ದರು. ‘ಕೂಲಿ ಪಡೆಯುವ ಸಂದರ್ಭದಲ್ಲಿ ಕ್ಷೇತ್ರ ಬಿಟ್ಟುಕೊಡಿ ಎಂದರೆ ಹೇಗೆ’ ಎಂದು ಡಿ.ಕೆ. ಸುರೇಶ್‌ ಮಾರ್ಮಿಕವಾಗಿ ಪ್ರಶ್ನಿಸಿದ್ದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಡಿ.ಕೆ.ಸುರೇಶ್‌ ಪ್ರತಿನಿಧಿಸುತ್ತಿದ್ದಾರೆ. ಕ್ಷೇತ್ರದ ಎರಡನೇ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಆರ್‌.ಆರ್‌.ನಗರದಲ್ಲಿ ಗೆಲುವು ಸಾಧಿಸುವುದು ಅವರಿಗೆ ಪ್ರಾಮುಖ್ಯವಾಗಿತ್ತು. ಡಿ.ಕೆ. ಸಹೋದರರು ನಿರಂತರ ಪ್ರಚಾರ ನಡೆಸಿ ಮುನಿರತ್ನ ಅವರನ್ನು ದಡ ಮುಟ್ಟಿಸಿದ್ದಾರೆ. ಇಲ್ಲಿ ಕಣಕ್ಕೆ ಇಳಿಯಲು ಎಚ್‌.ಡಿ. ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಸಹ ಆಸಕ್ತಿ ತೋರಿದ್ದರು. ಕುಟುಂಬದ ಇಬ್ಬರಿಗೆ ಮಾತ್ರ ಟಿಕೆಟ್‌ ಎಂಬ ಸೂತ್ರದಡಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

ವಿವಾದಗಳ ಸರದಾರ: 2013ರಲ್ಲಿ ಚುನಾವಣೆಗೆ ಸ್ಪರ್ಧೆಗೆ ಇಳಿದ ದಿನದಿಂದಲೂ ಮುನಿರತ್ನ ಅವರು ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಮಾಡಿದವರು.

ಹುಚ್ಚ ವೆಂಕಟ್‌ಗಿಂತ ನೋಟಾ ಹೆಚ್ಚು

ಕ್ಷೇತ್ರದ 2,724 ಮತದಾರರು ನೋಟಾ (ಮೇಲಿನ ಯಾರಿಗೂ ಮತ ಇಲ್ಲ) ಚಲಾಯಿಸಿದ್ದಾರೆ. ಪಕ್ಷಗಳ ಅಧಿಕೃತ ಅಭ್ಯರ್ಥಿಗಳನ್ನು ಬಿಟ್ಟರೆ ನೋಟಾಕ್ಕೆ ಹೆಚ್ಚಿನ ಮತಗಳು ಬಿದ್ದಿವೆ. ಪಕ್ಷೇತರ ಅಭ್ಯರ್ಥಿಗಳು ಕೂಡಾ ಇಷ್ಟು ಮತ ಪಡೆಯುವಲ್ಲಿ ಶಕ್ತರಾಗಿಲ್ಲ.

ಕಣದಲ್ಲಿ 14 ಅಭ್ಯರ್ಥಿಗಳು ಇದ್ದರು. ಈ ಪೈಕಿ, ನಟ ‘ಹುಚ್ಚ’ ವೆಂಕಟ್ (764 ಮತಗಳು) ಸೇರಿದಂತೆ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

* ಚುನಾವಣೆ ಮುಂದೂಡಿದ್ದು ನನಗೆ ಸಹಕಾರಿಯಾಯಿತು. ನನ್ನ ಮೇಲೆ ಆರೋಪ ಮಾಡಿ, ಕುತಂತ್ರ ನಡೆಸಿದರೂ ಮತದಾರರು ನನ್ನ ಕೈಬಿಡಲಿಲ್ಲ.

-ಮುನಿರತ್ನ, ಚುನಾಯಿತ ಕಾಂಗ್ರೆಸ್‌ ಅಭ್ಯರ್ಥಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry