ವಿಧಾನಪರಿಷತ್: 11 ಮಂದಿ ಅವಿರೋಧ ಆಯ್ಕೆ ಸಾಧ್ಯತೆ

7

ವಿಧಾನಪರಿಷತ್: 11 ಮಂದಿ ಅವಿರೋಧ ಆಯ್ಕೆ ಸಾಧ್ಯತೆ

Published:
Updated:
ವಿಧಾನಪರಿಷತ್: 11 ಮಂದಿ ಅವಿರೋಧ ಆಯ್ಕೆ ಸಾಧ್ಯತೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 11 ಅಭ್ಯರ್ಥಿಗಳು ಮಾತ್ರ ಗುರುವಾರ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ ಬಿಜೆಪಿ 5, ಕಾಂಗ್ರೆಸ್‌ 4 ಮತ್ತು ಜೆಡಿಎಸ್‌ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಜೂನ್‌ 11 ಕ್ಕೆ ಮತದಾನ ನಿಗದಿಯಾಗಿತ್ತು. ಹೆಚ್ಚುವರಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಮತದಾನ ನಡೆಯುವುದಿಲ್ಲ. ಎಲ್ಲರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಲಾಗುತ್ತದೆ.

ಬಿಜೆಪಿಯಿಂದ ಎಸ್‌.ರುದ್ರೇಗೌಡ, ಕೆ.ಪಿ.ನಂಜುಂಡಿ, ಎನ್‌.ರವಿಕುಮಾರ್‌, ತೇಜಸ್ವಿನಿಗೌಡ ಮತ್ತು ರಘುನಾಥ ಮಲ್ಕಾಪುರೆ, ಕಾಂಗ್ರೆಸ್‌ನಿಂದ ಕೆ.ಹರೀಶ್‌ ಕುಮಾರ್‌, ಅರವಿಂದ ಕುಮಾರ್‌ ಅರಳಿ, ಕೆ.ಗೋವಿಂದರಾಜ್‌ ಮತ್ತು ಸಿ.ಎಂ.ಇಬ್ರಾಹಿಂ, ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಮತ್ತು ಎಸ್.ಎಲ್.ಧರ್ಮೇಗೌಡ ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ ತನ್ನ ಎರಡನೇ ಅಭ್ಯರ್ಥಿಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಅಂತಿಮವಾಗಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಎಸ್‌.ಎಲ್.ಧರ್ಮೇಗೌಡ ಅವರ ಆಯ್ಕೆ ಅಚ್ಚರಿ ತಂದಿದೆ. ಆರಂಭದಲ್ಲಿ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ, ಬಳಿಕ ನಿವೃತ್ತ ಐಎಎಸ್‌ ಅಧಿಕಾರಿ ಸುಬ್ರಹ್ಮಣ್ಯ ಹೆಸರು ಕೇಳಿಬಂದಿತ್ತು. ಅಂತಿಮವಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತರಾದ ಬೀರೂರು ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಧರ್ಮೇಗೌಡರ ಹೆಸರನ್ನು ಅಂತಿಮಗೊಳಿಸಲಾಯಿತು.

ಈ ಬಾರಿ ರಘುನಾಥ ಮಲ್ಕಾಪುರೆ, ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ ಅವರನ್ನು ಹೊರತುಪಡಿಸಿ ಉಳಿದವರು ಹೊಸಬರು.

ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಸುವಾಗ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸಭಾ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry