7

‘ಮಾರ್ಜಾಲ ಪೋಷಾಕು’ ಬಿಡಲ್ಲವೆಂದ ಸೆರೆನಾ

Published:
Updated:
‘ಮಾರ್ಜಾಲ ಪೋಷಾಕು’ ಬಿಡಲ್ಲವೆಂದ ಸೆರೆನಾ

ಪ್ಯಾರಿಸ್: ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರ ಕ್ಯಾಟ್‌ ಸೂಟ್ (ಮಾರ್ಜಾಲ ಪೋಷಾಕು) ಬಗ್ಗೆ ಹಲವು ಆಟಗಾರ್ತಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆನಿಸ್‌ ಕ್ರೀಡೆಯಲ್ಲಿ ಇಷ್ಟು ವರ್ಷಗಳ ಕಾಲ ಧರಿಸುತ್ತಿದ್ದ ಪೋಷಾಕುಗಳನ್ನು ಬದಿಗಿಟ್ಟು ಕ್ಯಾಟ್‌ ಸೂಟ್ ಧರಿಸುವ ಮೂಲಕ ಸೆರೆನಾ ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ. ಈ ಕುರಿತು ಹೆಚ್ಚು ಸೆರೆನಾ ತಲೆಕೆಡಿಸಿಕೊಂಡಿಲ್ಲ.

‘ಮುಂದಿನ ಪಂದ್ಯದಲ್ಲಿಯೂ ಸೆರೆನಾ ಅವರು ಮಾರ್ಜಾಲ ಪೋಷಾಕು ಧರಿಸಿಯೇ  ಆಡಲಿದ್ದಾರೆ’ ಎಂದು ಕ್ಯಾಟ್‌ ಸೂಟ್ ತಯಾರಿಸಿರುವ ನೈಕಿ ಸಂಸ್ಥೆಯ ವಕ್ತಾರೆ ತಿಳಿಸಿದ್ದಾರೆ. 

‘ಟೆನಿಸ್ ಆಡುವಾಗ ಇಂತಹ ಪೋಷಾಕು ಧರಿಸುವುದು ನಿಯಮಗಳ ಪ್ರಕಾರ ಸೂಕ್ತವೇ? ಆ ಪೋಷಾಕು ತಯಾರಿಸಲು ಬಳಸಿರುವ ಬಟ್ಟೆ ಯಾವುದು ಎಂಬುದೂ ಗೊತ್ತಿಲ್ಲ. ಆಡುವವರು ನಿಯಮ ಪಾಲಿಸಬೇಕು. ಇಲ್ಲದಿದ್ದರೆ ನಗ್ನವಾಗಿ ಆಡಬೇಕು‘ ಎಂದು ಜೆಕ್ ಗಣರಾಜ್ಯದ ಆಟಗಾರ್ತಿ ಪ್ಲಿಸ್ಕೋವಾ ಆಸಮಾಧಾನ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ ಆಟಗಾರ್ತಿ ಅರಿನಾ ರೊಡಿಯೊನೋವಾ ಕೂಡ ಪೋಷಾಕಿನ ಬಗ್ಗೆ ಅಪಸ್ವರ ಎತ್ತಿದ್ದಾರೆ.

‘ಸೆರೆನಾ ಅವರಿಗೆ ಈ ಪೋಷಾಕು ಧರಿಸಲು ಅನುಮತಿ ಕೊಟ್ಟಿದ್ದು ಹೇಗೆ ಎನ್ನುವುದೇ ಅಚ್ಚರಿ ಮೂಡಿಸಿದೆ. ಟೆನಿಸ್‌ನಲ್ಲಿ ಮೊಣಕಾಲು ಮಟ್ಟದ ಸ್ಕರ್ಟ್‌ ಮತ್ತು ಟೇ ಶರ್ಟ್ ಧರಿಸಲು ಅವಕಾಶವಿದೆ. ಜೊತೆಗೆ ಲೆಗ್ಗಿಂಗ್ಸ್‌ ಧರಿಸಬಹುದು.  ನಿಯಮ ಬದಲಾಗಿ ದೆಯೇ?’ ಎಂದು ರಷ್ಯಾದ ಆಟಗಾರ್ತಿ ಅಲ್ಲಾ ಕುದ್ರೈತ್ಸೆವಾ ಕೇಳಿದ್ದಾರೆ.

‘ನನ್ನ ಆರೋಗ್ಯ ರಕ್ಷಣೆಗೆ ಈ ಪೋಷಾಕು ಅತ್ಯಗತ್ಯವಾಗಿದೆ. ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದು ನೆರವಾಗುತ್ತದೆ’ ಎಂದು ಸೆರೆನಾ ಪ್ರತಿಕ್ರಿಯಿಸಿದ್ದಾರೆ.

‘ಈ ಪೋಷಾಕಿನಲ್ಲಿ ಸೆರೆನಾ ಬ್ಲ್ಯಾಕ್‌ ಪ್ಯಾಂಥರ್ ಮತ್ತು ಸೂಪರ್ ಹೀರೊ ತರಹ ಕಾಣುತ್ತಾರೆ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry