ಬಿಜೆಪಿ ಗೆಲುವಿಗೆ ಪ್ರಾದೇಶಿಕ ಪಕ್ಷಗಳೇ ಸವಾಲು

7

ಬಿಜೆಪಿ ಗೆಲುವಿಗೆ ಪ್ರಾದೇಶಿಕ ಪಕ್ಷಗಳೇ ಸವಾಲು

Published:
Updated:
ಬಿಜೆಪಿ ಗೆಲುವಿಗೆ ಪ್ರಾದೇಶಿಕ ಪಕ್ಷಗಳೇ ಸವಾಲು

ನವದೆಹಲಿ: ‘ಕಾಂಗ್ರೆಸ್‌ ಮುಕ್ತ ಭಾರತ’ದ ಉಮೇದಿನಲ್ಲಿ ಮುನ್ನುಗ್ಗುತ್ತಿದ್ದ ಬಿಜೆಪಿಗೆ ಗುರುವಾರ ಹೊರಬಿದ್ದ ನಾಲ್ಕು ಲೋಕಸಭಾ ಮತ್ತು ಹತ್ತು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿರುವ ಬಿಜೆಪಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗಟ್ಟು ದೊಡ್ಡ ಸವಾಲಾಗಲಿದೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೈರಾನಾ ಮತ್ತು ಮಹಾರಾಷ್ಟ್ರದ ಭಂಡಾರ–ಗೋ‌ಂದಿಯಾ ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯು ಸೋಮವಾರ ನಡೆದಿದ್ದ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಪ್ರಾದೇಶಿಕ ಪಕ್ಷಗಳಿಗೆ ಆ ಎರಡೂ ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದೆ.

ಕೈರಾನಾ ಕ್ಷೇತ್ರ ರಾಷ್ಟ್ರೀಯ ಲೋಕದಳದ ಪಾಲಾದರೆ ಭಂಡಾರ–ಗೋಂದಿಯಾ ಎನ್‌ಸಿಪಿ ವಶವಾಗಿದೆ. ಈ ಕ್ಷೇತ್ರಗಳಲ್ಲಿ ಪ್ರಮುಖ ವಿರೋಧ ಪಕ್ಷಗಳು ಈ ಅಭ್ಯರ್ಥಿಗಳನ್ನು ಬೆಂಬಲಿಸಿದ್ದವು.

ಬಿಜೆಪಿ ಶತ್ರುಗಳಾದ ಮಿತ್ರರು:  ಎನ್‌ಡಿಎಯ ಕೆಲವು ಮಿತ್ರಪಕ್ಷಗಳು ಬಿಜೆಪಿ ಜತೆ ಮುನಿಸಿಕೊಂಡ ಸಮಯದಲ್ಲಿಯೇ ಪ್ರಾದೇಶಿಕ ಪಕ್ಷಗಳಿಂದ ಹೊಸ ಸವಾಲು ಎದುರಾಗಿದೆ. ತೆಲುಗುದೇಶಂ ಈಗಾಗಲೇ ಎನ್‌ಡಿಎ ತೊರೆದಿದೆ. ಬಿಜೆಪಿಯ ಬಹುಕಾಲದ ಮಿತ್ರಪಕ್ಷ ಶಿವಸೇನಾ ಬಹಿರಂಗವಾಗಿ ಸಂಘರ್ಷಕ್ಕಿಳಿದಿದೆ.

ಮತ್ತೊಂದೆಡೆ, ಕಳೆದ ವರ್ಷ ಮರಳಿ ಎನ್‌ಡಿಎ ತೆಕ್ಕೆ ಸೇರಿದ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುನಲ್ಲಿಯೂ ಅಸಮಾಧಾನ ಹೊಗೆಯಾಡುತ್ತಿದೆ. ಎನ್‌ಡಿಎಯ ಮತ್ತೊಂದು ಅಂಗಪಕ್ಷ ಲೋಕ ಜನಶಕ್ತಿ ಪಕ್ಷದ ನಾಯಕ ರಾಂ ವಿಲಾಸ್‌ ಪಾಸ್ವಾನ್‌ ಜತೆ ನಿತೀಶ್‌ ನಡೆಸುತ್ತಿರುವ ಮಾತುಕತೆಗೆ ಬಿಹಾರದಲ್ಲಿ ಬೇರೆ ರಾಜಕೀಯ ಅರ್ಥ ಕಲ್ಪಿಸಲಾಗುತ್ತಿದೆ.

ಇದರೊಂದಿಗೆ ಎನ್‌ಡಿಎಯಲ್ಲಿರುವ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ ಕೂಡ ಭಿನ್ನಮತದ ಸಂದೇಶ ರವಾನಿಸುತ್ತಿದೆ. ಒಟ್ಟಾರೆ ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ಪ್ರಕ್ರಿಯೆ 2019ರ ಚುನಾವಣೆ ವೇಳೆಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವ  ಲೆಕ್ಕಾಚಾರ ಇದೆ.

ಬಿಜೆಪಿಗೆ ಬೆಲೆ ಏರಿಕೆ ಬಿಸಿ!: ‘ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಮನೆಮಾಡಿದೆ’ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಬಿಜೆಪಿಯ ಬಲ ಈ ಸೋಲಿನೊಂದಿಗೆ 272ಕ್ಕೆ ಕುಸಿದಿದೆ.

2014ರ ನಂತರ 27 ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಎಂಟು ಸ್ಥಾನ ಕಳೆದುಕೊಂಡಿದೆ. ಆರು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ.

2018ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮೂರು ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಮಾರ್ಚ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಇದೀಗ ಕೈರಾನಾದಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾಗಿದೆ.

ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಪ್ರತಿನಿಧಿಸುತ್ತಿದ್ದರು ಎಂಬುವುದು ಗಮನಾರ್ಹ.

ಸಾಮರಸ್ಯಕ್ಕೆ ಜೈ ಎಂದ ಮತದಾರ: ಪೂರ್ವ ಉತ್ತರ ಪ್ರದೇಶದಲ್ಲಿರುವ ಕೈರಾನಾದಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದ ಮುಸ್ಲಿಂ ಮತ್ತು ಜಾಟ್‌ ಸಮುದಾಯಗಳ ನಡುವೆ 2013ರಲ್ಲಿ ಕೋಮುಸಂಘರ್ಷ ಭುಗಿಲೆದ್ದಿತ್ತು. ತಬಸ್ಸುಮ್‌ ಹಸನ್‌ ಅವರನ್ನು ಗೆಲ್ಲಿಸುವ ಮೂಲಕ ಇಲ್ಲಿಯ ಜನರು ‘ಧ್ರುವೀಕರಣ ರಾಜಕಾರಣ’ ಒಪ್ಪುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೈಜೋಡಿಸಿದ್ದ ನಿತೀಶ್‌–ಲಾಲು  ಜೋಡಿ ಬಿಜೆಪಿಯನ್ನು ಮಣ್ಣು ಮುಕ್ಕಿಸಿತ್ತು. ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿಯ ಹೊರತಾಗಿ ಕಾಂಗ್ರೆಸ್‌ ಕೂಡ ಬಿಜೆಪಿಗೆ ಸವಾಲು ಒಡ್ಡುತ್ತಿದೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಚೇತರಿಸಿಕೊಳ್ಳುತ್ತಿದೆ.

ರಾಜಸ್ಥಾನದ ಅಜ್ಮೀರ್‌ ಮತ್ತು ಅಲ್ವಾರ್‌ ಲೋಕಸಭಾ ಕ್ಷೇತ್ರಗಳಿಗೆ ಫೆಬ್ರುವರಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. 2014ರಲ್ಲಿ ಬಿಜೆಪಿಯು ರಾಜಸ್ಥಾನದ ಎಲ್ಲ 26 ಲೋಕಸಭಾ ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿತ್ತು.

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿವೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಚೇತರಿಸಿಕೊಳ್ಳುತ್ತಿದೆ. ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಸತತ ಮೂರು ಅವಧಿಗಳಿಂದ (15 ವರ್ಷ) ಬಿಜೆಪಿ ಅಧಿಕಾರದಲ್ಲಿದೆ.

ರಾಷ್ಟ್ರ ರಾಜಕಾರಣದ ದಿಕ್ಕು ಬದಲಾಗಲಿದೆ: ತಬಸ್ಸುಮ್‌

ಲಖನೌ: ಕೈರಾನಾ ಫಲಿತಾಂಶ ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಿಸಲಿದೆ ಎಂದು ಉಪ ಚುನಾವಣೆಯಲ್ಲಿ ಜಯಗಳಿಸಿದ ರಾಷ್ಟ್ರೀಯ ಲೋಕದಳ ಅಭ್ಯರ್ಥಿ ತಬಸ್ಸುಮ್‌ ಹಸನ್‌ ಸುಳಿವು ನೀಡಿದ್ದಾರೆ.

ಕೈರಾನಾ ಉಪ ಚುನಾವಣಾ ಫಲಿತಾಂಶ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅವರು ಜಯಗಳಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ.

ಜನರಲ್ಲಿಯ ಕೋಮುದ್ವೇಷ ಮತ್ತು ಕಹಿ ಭಾವನೆಗಳನ್ನು ತೊಡೆದು ಹಾಕಲು ಪ್ರಯತ್ನಿಸುವ ಭರವಸೆಯನ್ನು 47 ವರ್ಷದ ತಬಸ್ಸುಮ್‌ ನೀಡಿದ್ದಾರೆ.

2004ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ  ರಾಜಕೀಯ ಜೀವನ ಆರಂಭಿಸಿದ ಅವರು, 2007ರಲ್ಲಿ ಮೀರಠ್‌ನ ಸರ್ಧನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಪತಿ ಮುನಾವರ್‌ ಹಸನ್ ನಿಧನದ ಬಳಿಕ 2009ರಲ್ಲಿ ಬಹುಜನ ಸಮಾಜವಾದಿ ಪಕ್ಷದಿಂದ ಕೈರಾನಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. 2015ರಲ್ಲಿ ಸಮಾಜವಾದಿ ಪಕ್ಷ ಸೇರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.

ಮೇಘಾಲಯ: ಕಾಂಗ್ರೆಸ್‌ ದೊಡ್ಡ ಪಕ್ಷ

ಶಿಲ್ಲಾಂಗ್‌: ಅಂಪಾತಿ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಿಯಾನಿ ಡಿ. ಶಿರಾ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಮೇಘಾಲಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಶಿರಾ ಅವರ ತಂದೆ ಮುಕುಲ್‌ ಸಂಗ್ಮಾ ಅವರ ರಾಜೀನಾಮೆಯಿಂದ ಈ ಕ್ಷೇತ್ರ ತೆರವಾಗಿತ್ತು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದರು.

ಉಪಚುನಾವಣೆ ಗೆಲುವಿನಿಂದಾಗಿ, 60 ಸದಸ್ಯರ ಮೇಘಾಲಯವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 21ಕ್ಕೆ ಏರಿದೆ. ಜತೆಗೆ ಸದನದ ಅತ್ಯಂತ ದೊಡ್ಡ ಪಕ್ಷವಾಗಿದೆ. ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಇಲ್ಲಿ ಎನ್‌ಪಿಪಿ ಅಧಿಕಾರದಲ್ಲಿದೆ. ಎನ್‌ಪಿಪಿಯ ಸದಸ್ಯ ಬಲ 20.  ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ 7, ಪೀಪಲ್ಸ್‌ ಡೆಮಾಕ್ರಟಿಕ್‌ ಫ್ರಂಟ್‌ 4, ಎಚ್‌ಎಸ್‌ಪಿಡಿಪಿ 2 ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಇಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಎನ್‌ಸಿಪಿಯ ಒಬ್ಬ ಶಾಸಕರಿದ್ದರೆ ಒಬ್ಬರು ಪಕ್ಷೇತರರು ಗೆದ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry