‘ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’

7

‘ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’

Published:
Updated:
‘ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’

ಬೆಂಗಳೂರು: ಯಾವುದೇ ರಾಜಕೀಯ ಹಸ್ತಕ್ಷೇಪಗಳಿಗೆ ಮಣಿಯದೆ, ನಿರ್ಭೀತಿಯಿಂದ ಕೆಲಸ ಮಾಡುವಂತೆ ‌ಪೊಲೀಸ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.

ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಮುಖ್ಯಮಂತ್ರಿ, ‘ಸರ್ಕಾರ ಬದಲಾಗಿದೆ. ಹೊಸ ಸರ್ಕಾರ ಆಡಳಿತ ವಹಿಸಿಕೊಂಡಿದೆ ಎನ್ನುವುದು ಜನಸಾಮಾನ್ಯರ ಗಮನಕ್ಕೆ ಬರಬೇಕು. ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

‘ಇಲಾಖೆಯ ಕಾರ್ಯದಲ್ಲಿ ನಾನು ಯಾವುದೇ ರೀತಿಯಲ್ಲೂ ಮಧ್ಯ ಪ್ರವೇಶಿಸುವುದಿಲ್ಲ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕಾನೂನುಬಾಹಿರ ಚಟುವಟಿಕೆ ಸಹಿಸುವುದಿಲ್ಲ. ರೌಡಿಸಂ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಯನ್ನು ಮಟ್ಟಹಾಕಬೇಕು’ ಎಂದೂ ನಿರ್ದೇಶನ ನೀಡಿದರು.

ಈ ವೇಳೆ, ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌. ರಾಜು, ‘ಮಕ್ಕಳ ಅಪಹರಣ ಕುರಿತ ವದಂತಿಗಳ ಕುರಿತಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಜಾತಿ, ಗುಂಪುಗಳಿಗೆ ಅವಕಾಶ ಇಲ್ಲ’

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಅಭಿವೃದ್ಧಿ ಕೆಲಸಗಳ ಬಗ್ಗೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಕಾರಣಕ್ಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು.

‘ಸರ್ಕಾರದ ಕೆಲಸ ಮಾಡುವಾಗ ಅಭಿವೃದ್ಧಿ ವಿಷಯಕ್ಕಷ್ಟೆ ಗಮನ ಕೊಡಬೇಕು. ಜಾತಿ ಹಾಗೂ ಗುಂಪುಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕು. ಒಂದು ಕುಟುಂಬದಂತೆ ಒಗ್ಗಟ್ಟಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಗೃಹ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡಲಿದೆ’ ಎಂದೂ ವಿವರಿಸಿದರು.

* ಗೃಹ ಇಲಾಖೆಗೆ ಸಲಹೆಗಾರರ ಅವಶ್ಯಕತೆ ಇಲ್ಲ. ಜನರಲ್ಲಿ  ವಿಶ್ವಾಸ ಮೂಡಿಸುವಂತೆ ಕೆಲಸ ಮಾಡಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ

–ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry