ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಹಾದಿಗೆ ಆರ್ಥಿಕ ವೃದ್ಧಿ ದರ

ನಾಲ್ಕನೇ ತ್ರೈಮಾಸಿಕದಲ್ಲಿನ ಬೆಳವಣಿಗೆ ಶೇ 7.7
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಆರ್ಥಿಕತೆಯು 2017–18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 7.7ರಷ್ಟು ಪ್ರಗತಿ ದಾಖಲಿಸಿದ್ದು, ಏಳು ತ್ರೈಮಾಸಿಕಗಳಲ್ಲಿನ ಗರಿಷ್ಠ ಮಟ್ಟ ಇದಾಗಿದೆ.

ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಸೇವಾ ವಲಯಗಳಲ್ಲಿನ ಗಮನಾರ್ಹ ಸಾಧನೆಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ. ಮೊದಲಿನ ಮೂರು ತ್ರೈಮಾಸಿಕಗಳಲ್ಲಿನ ಬೆಳವಣಿಗೆ ದರವು ಕ್ರಮವಾಗಿ ಶೇ 5.6, ಶೇ 6.3 ಮತ್ತು ಶೇ 7ರಷ್ಟಿತ್ತು.

ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿನ ಈ ಬೆಳವಣಿಗೆ ದರವು, 2017ರ ಅಕ್ಟೋಬರ್‌ – ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿನ ಶೇ 7.2ರಷ್ಟು ವೃದ್ಧಿ ದರಕ್ಕಿಂತ ಮತ್ತು ಚೀನಾದ ಜಿಡಿಪಿ ದರ ಶೇ 6.8ಕ್ಕಿಂತ ಹೆಚ್ಚಿಗೆ ಇದೆ.

ಗರಿಷ್ಠ ವೃದ್ಧಿ ದರ: 2016ರ ನವೆಂಬರ್‌ನಲ್ಲಿ ಕೈಗೊಂಡ ನೋಟು ರದ್ದತಿ ಮತ್ತು 2017ರ ಜುಲೈನಲ್ಲಿ ಜಾರಿಗೆ ಬಂದ ಜಿಎಸ್‌ಟಿ ನಂತರದ ದಿನಗಳಲ್ಲಿ ಆರ್ಥಿಕತೆಯು ಸಾಧಿಸಿರುವ ಗರಿಷ್ಠ ವೃದ್ಧಿ ದರ ಇದಾಗಿದೆ.

ಈ ಎರಡೂ ನಿರ್ಧಾರಗಳು ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದವು. ಇದರಿಂದಾಗಿ 2017ರ ಏಪ್ರಿಲ್‌– ಜೂನ್‌ ಅವಧಿಯಲ್ಲಿ ಜಿಡಿಪಿಯು ಶೇ 5.7ಕ್ಕೆ ಕುಸಿದಿತ್ತು. ಅಕ್ಟೋಬರ್‌ – ಡಿಸೆಂಬರ್‌ ಅವಧಿಯಲ್ಲಿ ‍ಪ್ರಗತಿ ಹಾದಿಗೆ ಮರಳಿ, ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸಿದ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ವಾರ್ಷಿಕ ಸಾಧನೆ ಕುಸಿತ: ಆದರೆ, 2017–18ನೇ ಸಾಲಿನಲ್ಲಿನ ವಾರ್ಷಿಕ ಸಾಧನೆಯು ಶೇ 6.7ರಷ್ಟು ದಾಖಲಾಗಿದೆ. ಇದು 2016–17ರ ಶೇ 7.1ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದು  ಕೇಂದ್ರೀಯ ಸಾಂಖ್ಯಿಕ ಕಚೇರಿಯು ತಿಳಿಸಿದೆ.

ಆರ್ಥಿಕತೆಯಲ್ಲಿನ ಚೇತರಿಕೆ ಮತ್ತು ಹಣದುಬ್ಬರ ಹೆಚ್ಚಳವು, ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಿನ ವಾರ ನಡೆಸಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮೇಲೆ ಪ್ರಭಾವ ಬೀರಲಿದೆ. ದುಬಾರಿ ಇಂಧನ ಮತ್ತು ಆಹಾರ ಬೆಲೆಗಳಿಂದಾಗಿ ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ವಾರ್ಷಿಕ ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಏರಿಕೆ ಕಂಡಿತ್ತು. ಈ ಕಾರಣಕ್ಕೆ ಆರ್‌ಬಿಐ ಆಕ್ರಮಣಕಾರಿ ಧೋರಣೆಯ ಹಣಕಾಸು ನೀತಿ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಉದ್ಯಮದ ನಿರೀಕ್ಷೆ: ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಸುಧಾರಣೆ ಕಾಣಲಿದೆ ಎಂದು ಉದ್ಯಮ ವಲಯ ನಿರೀಕ್ಷಿಸಿದೆ.

ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಅಡಚಣೆಗಳನ್ನೆಲ್ಲ ನಿವಾರಿಸಿಕೊಂಡಿರುವ ಆರ್ಥಿಕತೆಯು ಪ್ರಗತಿಯ ದಾಪುಗಾಲು ಹಾಕುತ್ತಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಪ್ರತಿಕ್ರಿಯಿಸಿದೆ.

ಮೂಲ ಸೌಕರ್ಯ ವಲಯಗಳ ಪ್ರಗತಿ

ಎಂಟು ಮೂಲಸೌಕರ್ಯ ವಲಯಗಳು ಏಪ್ರಿಲ್‌ ತಿಂಗಳಲ್ಲಿ ಶೇ 4.7ರಷ್ಟು ಪ್ರಗತಿ ದಾಖಲಿಸಿವೆ. ಕಲ್ಲಿದ್ದಲು (ಶೇ 16), ನೈಸರ್ಗಿಕ ಅನಿಲ (ಶೇ 7.4), ತೈಲಾಗಾರ ಉತ್ಪನ್ನ (ಶೇ 2.7) ಮತ್ತು ಸಿಮೆಂಟ್‌ (ಶೇ 16.6) ವಲಯಗಳಲ್ಲಿನ ಆರೋಗ್ಯಕರ ಸಾಧನೆಯಿಂದ ಈ ಪ್ರಗತಿ ಸಾಧ್ಯವಾಗಿದೆ.

ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆಯು ಕ್ರಮವಾಗಿ ಶೇ 4.6 ಮತ್ತು ಶೇ 3.5ರಷ್ಟು ಹೆಚ್ಚಳಗೊಂಡಿದೆ. ಕಚ್ಚಾ ತೈಲ ಉತ್ಪಾದನೆಯು ಶೇ 0.8ರಷ್ಟು ಕಡಿಮೆಯಾಗಿದೆ.

ರಸಗೊಬ್ಬರ, ಉಕ್ಕು ಒಳಗೊಂಡಂತೆ ಮೂಲ ಸೌಕರ್ಯ ವಲಯಗಳು 2017ರ ಇದೇ ಅವಧಿಯಲ್ಲಿ ಶೇ 2.6ರಷ್ಟು ಪ್ರಗತಿ ದಾಖಲಿಸಿದ್ದವು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಅಂದಾಜು ಬದಲಾಗದು

2018–19ನೇ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರದ (ಶೇ 7.5) ಅಂದಾಜನ್ನು ಬದಲಿಸುವುದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್ ಹೇಳಿದ್ದಾರೆ.

ತೈಲ ಬೆಲೆ ಹೆಚ್ಚಳ ಮತ್ತು ಜಿಡಿಪಿ ವೃದ್ಧಿ ದರದಲ್ಲಿ ಯಾವುದೇ ಸಂಬಂಧ ಇಲ್ಲ. ನಿಗದಿಪಡಿಸಿದ ಮಟ್ಟದಲ್ಲಿಯೇ ವಿತ್ತೀಯ ಕೊರತೆ ಇರಲಿದೆ ಎಂದು ಹೇಳಿದ್ದಾರೆ.

‘ಆರ್ಥಿಕತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ಪ್ರಧಾನಿ ಮೋದಿ ನಾಯಕತ್ವದ ಅಡಿಯಲ್ಲಿನ ಸರಿಯಾದ ವಿಕಾಸ ಇದಾಗಿದೆ.’

 – ಪೀಯೂಷ್‌ ಗೋಯೆಲ್‌, ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT